ಅಯೋಧ್ಯೆಯನ್ನು ಭಾರತದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ! – ಮಹಂತ ಗಿರೀಶಪತಿ ತ್ರಿಪಾಠಿ, ಮಹಾಪೌರ, ಅಯೋಧ್ಯೆ ಮಹಾನಗರ ಪಾಲಿಕೆ

ಅಯೋಧ್ಯೆಯಿಂದ ‘ಸನಾತನ ಪ್ರಭಾತ’ನ ವಿಶೇಷ ವರದಿ

ಮಹಂತ ಗಿರೀಶಪತಿ ತ್ರಿಪಾಠಿ

ಅಯೋಧ್ಯೆ,  – ಅಯೋಧ್ಯೆಗೆ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಮತ್ತು ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲೆಲ್ಲೂ ದೀಪಾಲಂಕಾರ ಮಾಡಲಾಗಿದೆ. ಅಯೋಧ್ಯೆಯಲ್ಲಿ ನಾವು ವಾರದ ಎಲ್ಲ ದಿನವೂ ಸ್ವಚ್ಛತೆ ಮಾಡುತ್ತಿದ್ದೇವೆ. ಅಯೋಧ್ಯೆಯನ್ನು ಭಾರತದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. ಇದಕ್ಕಾಗಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಅಯೋಧ್ಯೆಯ ಮಹಾಪೌರ ಮಹಂತ ಗಿರೀಶಪತಿ ತ್ರಿಪಾಠಿಯವರು ದೈನಿ `ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

ಅಯೋಧ್ಯಾ ನಗರದ ಅಭಿವೃದ್ಧಿ ಪರಿಕಲ್ಪನೆಯ ಬಗ್ಗೆ ಮಾಹಿತಿ ನೀಡಿದ ಮಹಂತ ತ್ರಿಪಾಠಿಯವರು, “ಇಲ್ಲಿ ಭಕ್ತರಿಗೆ ಮೂರು ನಿವಾಸಸ್ಥಾನಗಳಿವೆ. ಈ ಸ್ಥಳದಲ್ಲಿ ಸಾವಿರಾರು ಭಕ್ತರಿಗೆ ವಾಸದ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು, ಸಿಸಿಟಿವಿ ಕ್ಯಾಮೆರ ಇತ್ಯಾದಿಗಳಿಗೆ ಯೋಜನೆ ರೂಪಿಸಲಾಗಿದೆ. ಅಯೋಧ್ಯೆ ನಗರದಲ್ಲಿ ತಾತ್ಕಾಲಿಕ ಮತ್ತು ಶಾಶ್ವತವಾದ ಒಟ್ಟು 2 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶೌಚಾಲಯಗಳನ್ನು ನಿರ್ಮಿಸಲಾಗುವುದು. ಹೆಚ್ಚುತ್ತಿರುವ ಬೇಡಿಕೆ ವೇಗವನ್ನು ಗಮನದಲ್ಲಿಟ್ಟುಕೊಂಡು, ಪ್ರಥಮ ಚಿಕಿತ್ಸಾ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ಅಯೋಧ್ಯೆಯು ಜಗತ್ತಿನ ಸಾಂಸ್ಕೃತಿಕ ಕೇಂದ್ರವಾಗಿ ಮುಂದೆ ಬರುತ್ತಿದೆ. ನಿಧಾನವಾಗಿ ಈ ನಗರವು ಇಡೀ ಪ್ರಪಂಚದ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗುತ್ತಿದೆ.’’

ನಾವು ರಾಮರಾಜ್ಯದ ದಿಕ್ಕಿನತ್ತ ಮುನ್ನಡೆಯುತ್ತಿದ್ದೇವೆ !

ಇಲ್ಲಿ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣವಾಗಿದೆ. ಆದ್ದರಿಂದ ನಿಧಾನವಾಗಿ ಜನರು ಮತ್ತು ಸಂಸ್ಕೃತಿ ರಾಮಮಯವಾಗುತ್ತಿದೆ. ಶ್ರೀರಾಮನ ಆದರ್ಶಗಳನ್ನು ಒಪ್ಪಿಕೊಂಡು ಅವರ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಅನುಸರಿಸುವ ಮೂಲಕ ನಾವು ರಾಮರಾಜ್ಯದತ್ತ ಮುನ್ನಡೆಯುತ್ತಿದ್ದೇವೆ ಎಂದು ತ್ರಿಪಾಠಿಯವರು ಹೇಳಿದರು.