ಗೃಹಯುದ್ಧದಿಂದಾಗಿ ಮ್ಯಾನ್ಮಾರ ನ 151 ಸೈನಿಕರು ಭಾರತಕ್ಕೆ ಓಡಿಬಂದರು !


ಗೌಹಾಟಿ (ಅಸ್ಸಾಂ) – ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದುವರೆಗೆ ಗಡಿಯಲ್ಲಿ ವಾಸಿಸುತ್ತಿದ್ದ ಮ್ಯಾನ್ಮಾರ್ ನಾಗರಿಕರು ಭಾರತಕ್ಕೆ ಪಲಾಯನ ಮಾಡುತ್ತಿದ್ದರು. ಈಗ ಮ್ಯಾನ್ಮಾರ್‌ನ ಸುಮಾರು 151 ಸೈನಿಕರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಮತ್ತು ಭಾರತೀಯ ಸೇನೆಯ ‘ಅಸ್ಸಾಂ ರೈಫಲ್ಸ್’ನವರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮ್ಯಾನ್ಮಾರ್ ನ ‘ಆರಾಕಾನ್ ಆರ್ಮಿ’ ಎಂಬ ಶಸ್ತ್ರಸಜ್ಜಿತ ಗುಂಪು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಸೇನಾ ನೆಲೆಗಳನ್ನು ವಶಪಡಿಸಿಕೊಂಡಿದೆ. ಪರಿಣಾಮವಾಗಿ, ಸುಮಾರು 151 ಸೈನಿಕರು ಮಿಜೋರಾಂನ ಲಾಂಗ್ಥಲೈ ಜಿಲ್ಲೆಗೆ ಪಲಾಯನ ಮಾಡಿದರು. ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದೆ. ಈ ಸೈನಿಕರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸಲಾಗುವುದು ಎಂದಿದೆ.

ಈ ನಿಟ್ಟಿನಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಮ್ಯಾನ್ಮಾರ್ ಸೇನೆಯ ನಡುವೆ ಚರ್ಚೆ ನಡೆಯುತ್ತಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್‌ನಲ್ಲಿಯೂ ಶಸ್ತ್ರಸಜ್ಜಿತ ಗುಂಪುಗಳು ಮ್ಯಾನ್ಮಾರ್-ಭಾರತ ಗಡಿಯಲ್ಲಿನ ಸೇನಾ ಶಿಬಿರಗಳನ್ನು ವಶಪಡಿಸಿಕೊಂಡವು. ಆಗಲೂ ಮ್ಯಾನ್ಮಾರ್ ನ 104 ಸೈನಿಕರು ಮಿಜೋರಾಂಗೆ ಪಲಾಯನ ಮಾಡಿದ್ದರು.