ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳಲ್ಲಿ `ಪೊಕ್ಸೊ’ದ 2 ಲಕ್ಷದ 43 ಸಾವಿರ ಪ್ರಕರಣಗಳು ಬಾಕಿ

ಕೇವಲ ಶೇ. 3 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ !

ನವ ದೆಹಲಿ – ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳಲ್ಲಿ ಜನವರಿ 2023 ರವರೆಗೆ ಬಾಕಿ ಉಳಿದಿರುವ ಪೊಕ್ಸೊ (ಪ್ರೊಟೆಕ್ಷನ ಆಫ್ ಚಿಲ್ಡ್ರನ್ ಫ್ರಾಮ ಸೆಕ್ಷುಯಲ್ ಆಫೆನ್ಸ ಆಕ್ಟ) ಪ್ರಕರಣಗಳ ‘ಇಂಡಿಯನ್ ಚೈಲ್ಡ್ ಪ್ರಟಿಕ್ಷನ್ ಫಂಡ್’ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ, ದೇಶದಲ್ಲಿ 2 ಲಕ್ಷ 43 ಸಾವಿರ ಪೊಕ್ಸೊ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದೆ. 2022 ರಲ್ಲಿ, ಕೇವಲ ಶೇ.3 ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಒಂದು ವೇಳೆ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದರೆ, ಈ ಪ್ರಕರಣಗಳನ್ನು ವಿಲೇವಾರಿ ಮಾಡಲು ನ್ಯಾಯಾಲಯಕ್ಕೆ 9 ವರ್ಷಗಳು ತಗಲಬಹುದು.

ಕಾನೂನು ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಮಾಹಿತಿಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯಲ್ಲಿ, ಜನವರಿ 2023 ರ ವೇಳೆಗೆ 2 ಲಕ್ಷ 68 ಸಾವಿರದ 38 ಪ್ರಕರಣಗಳು ದಾಖಲಾಗಿತ್ತು, ಅದರಲ್ಲಿ 8 ಸಾವಿರ 909 ಪ್ರಕರಣಗಳಲ್ಲಿ ದೋಷಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಹೇಳಿದೆ.

ಪೋಕ್ಸೊ ತ್ವರಿತ ಗತಿ ನ್ಯಾಯಾಲಯದಲ್ಲಿ ಪ್ರತಿ ವರ್ಷ ನಿರೀಕ್ಷಿತ 165 ಪ್ರಕರಣಗಳ ಬದಲಾಗಿ ಕೇವಲ 28 ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ !

ಕೇಂದ್ರ ಸರಕಾರವು 2019 ರಿಂದ ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಿತು. ಈ ನ್ಯಾಯಾಲಯಗಳಿಗಾಗಿ 1 ಸಾವಿರದ 900 ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಈ ನ್ಯಾಯಾಲಯಗಳಿಗೆ ಪ್ರತಿ 4 ತಿಂಗಳಿಗೊಮ್ಮೆ 41-42 ಪ್ರಕರಣಗಳನ್ನು ಮತ್ತು ವರ್ಷಕ್ಕೆ 165 ಪ್ರಕರಣಗಳ ವಿಲೇವಾರಿ ಮಾಡುವ ಉದ್ದೇಶವನ್ನು ನೀಡಲಾಗಿತ್ತು; ಆದರೆ ಪ್ರತಿ ವರ್ಷ ಕೇವಲ 28 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿದೆ ಎಂದು ಈ ವರದಿ ಬಹಿರಂಗಪಡಿಸಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಇದರಲ್ಲಿ ಪೊಕ್ಸೊ ಪ್ರಕರಣಗಳ ಪಟ್ಟಿಯನ್ನು ಸಂಕೇತಸ್ಥಳಗಳಲ್ಲಿಡಬೇಕು. ತ್ವರಿತ ಗತಿಯ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸಬೇಕು.

ಸಂಪಾದಕರ ನಿಲುವು

* ತ್ವರಿತ ಗತಿಯ ನ್ಯಾಯಾಲಯಗಳಲ್ಲಿ ಕೇವಲ ಒಂದೇ ಒಂದು ಕಾಯಿದೆಯ ಸಂದರ್ಭದಲ್ಲಿ ಇಷ್ಟೊಂದು ಪ್ರಕರಣಗಳು ಬಾಕಿ ಉಳಿದಿದ್ದರೆ, ಇನ್ನುಳಿದ ಬಾಕಿ ಪ್ರಕರಣಗಳ ಬಗ್ಗೆ ಊಹಿಸಲೂ ಸಾಧ್ಯವಿಲ್ಲ. ತ್ವರಿತ ಗತಿ ನ್ಯಾಯಾಲಯಗಳ ಸ್ಥಿತಿ ಹೀಗಿದ್ದರೆ, ಭಾರತದಲ್ಲಿ ಬೇಗ ನ್ಯಾಯ ಸಿಗುವುದು ಕಷ್ಟವಾಗಿದೆಯೆಂದು ಗಮನಕ್ಕೆ ಬರುತ್ತದೆ !