ಅಮಾನ್ಯಗೊಂಡ ಮಸೂದೆಗಳ ಮೇಲೆ ನಿರ್ಣಯ ತೆಗೆದುಕೊಳ್ಳಿರಿ!

  • ಪಂಜಾಬ್ ರಾಜ್ಯಪಾಲರಿಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ

  • ಆಮ್ ಆದ್ಮಿ ಪಕ್ಷದ ಸರಕಾರ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು!

ನವದೆಹಲಿ – ಕಳೆದ ಕೆಲವು ದಿನಗಳಿಂದ ಪಂಜಾಬಿನ ಆಮ್ ಆದ್ಮಿ ಪಕ್ಷದ ಸರಕಾರ ಮತ್ತು ರಾಜ್ಯಪಾಲ ಬನವಾರಿಲಾಲ ಪುರೋಹಿತ್ ನಡುವೆ ವಾಗ್ವಾದ ನಡೆಯುತ್ತಿದೆ. ಪಂಜಾಬ ವಿಧಾನಸಭೆಯು ಅಂಗೀಕರಿಸಿದ 4 ಮಸೂದೆಗಳಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ ಇವರು ಸಮ್ಮತಿ ನೀಡುತ್ತಿಲ್ಲ ಎಂದು ರಾಜ್ಯದ ಆಮ್ ಆದ್ಮಿ ಪಕ್ಷ ಸರಕಾರ ಆರೋಪ ಮಾಡಿತ್ತು. ಶಾಸಕಾಂಗ ಸಭೆ ಕೈಗೊಂಡ ನಿರ್ಣಯಗಳು ಅಸಿಂಧು ಆಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಸಮಯದಲ್ಲಿ, ಜೂನ್ 19 ಮತ್ತು 20, 2023 ರಂದು ನಡೆದ ಅಧಿವೇಶನದಲ್ಲಿ ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ ಅವರಿಗೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿತು.

ನ್ಯಾಯಾಲಯವು ಮುಂದುವರಿಸಿ, ರಾಜ್ಯಪಾಲರು ತಮ್ಮ ಅಧಿಕಾರವನ್ನು ಉಪಯೋಗಿಸಿ, ಕಾನೂನು ರಚಿಸುವ ಮಾರ್ಗಕ್ಕೆ ಅಡ್ಡಿಪಡಿಸುವಂತಿಲ್ಲ ಎಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ನವೆಂಬರ್ 10 ರಂದು ನೀಡಿದ ತನ್ನ ತೀರ್ಪನ್ನು ನವೆಂಬರ್ 23 ರ ರಾತ್ರಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿತು.