ಗುರುಗಳ ಆಜ್ಞಾಪಾಲನೆಯ ಮಹತ್ವವನ್ನು ತಿಳಿಸುವ ಒಂದು ಬೋಧಪ್ರದ ಕಥೆ !

೧. ಸತ್ಯದ ಅನ್ವೇಷಣೆ ಮತ್ತು ಗುರುವಿನ ಕಠಿಣ ಆಜ್ಞೆ

ಒಂದು ಆಶ್ರಮದ ಪ್ರಸಿದ್ಧ ಸಂತರ ಬಳಿಗೆ ಬಂದ ಯುವಕನೊಬ್ಬ, ಗುರುಗಳೇ, ಸತ್ಯ ಎಂದರೇನು ? ಅದನ್ನು ನಾನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾಗಿದೆ ಎಂದು ವಿನಂತಿಸಿದನು. ಅದಕ್ಕೆ ಗುರುಗಳು, ಸತ್ಯದ ಬಗ್ಗೆ ಕೇವಲ ಮಾಹಿತಿ ಬೇಕಿದ್ದರೆ ಗ್ರಂಥಗಳು, ಸತ್ಸಂಗ ಮತ್ತು ಪ್ರವಚನಗಳಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ನಿಜವಾದ ಸತ್ಯವನ್ನು ಅನುಭವಕ್ಕೆ ತಂದುಕೊಳ್ಳುವ ಮಾರ್ಗ ತುಂಬಾ ಕಠಿಣವಾಗಿದೆ. ನಿನಗೆ ವಜ್ರದ ಮಾಹಿತಿ ಬೇಕೋ ಅಥವಾ ಸಾಕ್ಷಾತ್ ವಜ್ರವೇ ಬೇಕೋ ನೀನೇ ಯೋಚಿಸಿ ಹೇಳು ಎಂದರು. ‘ಯುವಕನು ತನಗೆ ಎಷ್ಟು ಸಮಯವಾದರೂ ಪರವಾಗಿಲ್ಲ, ಸಾಕ್ಷಾತ್ ಸತ್ಯವೇ ಬೇಕು ಎಂದಾಗ, ಗುರುಗಳು ಅವನಿಗೆ ಆಶ್ರಮದಲ್ಲಿ ಭತ್ತ ಕುಟ್ಟುವ ಕೆಲಸಕ್ಕೆ ಸೇರಲು ಹೇಳಿದರು. ಅಷ್ಟೇ ಅಲ್ಲ, ನನ್ನನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ, ನಾನಾಗಿ ಕರೆದಾಗ ಬಾ ಎಂದರು. ಯುವಕನು ಆಜ್ಞೆಯನ್ನು ಶಿರಸಾವಹಿಸಿ ಒಪ್ಪಿ, ಹನ್ನೆರಡು ವರ್ಷಗಳ ಕಾಲ ಇತರರ ಸಂಪರ್ಕವಿಲ್ಲದೆ ನಿರಂತರವಾಗಿ ಭತ್ತ ಕುಟ್ಟುವ ಕಾಯಕದಲ್ಲೇ ಸಂಪೂರ್ಣವಾಗಿ ಮುಳುಗಿಹೋದನು.

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

೨. ಉತ್ತರಾಧಿಕಾರಿಯ ಘೋಷಣೆ ಮತ್ತು ಶಿಷ್ಯನ ಉತ್ತರ

ಹನ್ನೆರಡು ವರ್ಷಗಳ ಸುದೀರ್ಘ ಕಾಯಕದ ನಂತರ ಗುರುಗಳು ಅಜ್ಞಾತವಾಸಕ್ಕೆ ಹೊರಡುವ ಮುನ್ನ, “ನನ್ನ ನಂತರ ಈ ಮಠವನ್ನು ಮುನ್ನಡೆಸಲು ಒಬ್ಬ ಉತ್ತರಾಧಿಕಾರಿಯನ್ನು ನೇಮಿಸಬೇಕಾಗಿದೆ. ಯಾರು ಸತ್ಯ ಎಂದರೇನು ? ಎಂಬುದನ್ನು ಸರಿಯಾಗಿ ವಿವರಿಸುತ್ತಾರೋ, ಅವರೇ ನನ್ನ ಉತ್ತರಾಧಿಕಾರಿ  ಎಂದು ಘೋಷಿಸುವೆನು ಎಂದರು. ಆಗ ಒಬ್ಬ ಪ್ರಮುಖ ಶಿಷ್ಯನು ಎಲ್ಲರ ಮುಂದೆ ಹೇಳಲು ಧೈರ್ಯ ಸಾಲದೆ, ರಾತ್ರೋರಾತ್ರಿ ಒಂದು ಚೀಟಿಯಲ್ಲಿ, ಮನಸ್ಸು ಕನ್ನಡಿಯಂತೆ ಇರುತ್ತದೆ, ಅದರ ಮೇಲೆ ಸಂಸ್ಕಾರಗಳ ಧೂಳು ಬೀಳುತ್ತದೆ. ಆ ಸಂಸ್ಕಾರದ ಧೂಳು ದೂರವಾದಾಗ ಮನಸ್ಸು ಪುನಃ ಶುದ್ಧವಾಗಿ ಆತ್ಮರೂಪವಾಗುತ್ತದೆ ಎಂದು ಬರೆದು ಗುರುಗಳ ಆಸನದ ಮುಂದಿಟ್ಟನು. ಆದರೆ ಮರುದಿನ ಮುಂಜಾನೆ ಅದನ್ನು ಓದಿದ ಗುರುಗಳು ಕ್ರೋಧಗೊಂಡು, ಇಂತಹದ್ದನ್ನು ಬರೆದ ಆ ಮೂರ್ಖ ಯಾರು ? ಎಂದು ಜೋರಾಗಿ ಕೂಗಾಡಿದರು.

೩. ಭತ್ತ ಕುಟ್ಟುವ ಯುವಕನ ಪರಮ ಸತ್ಯದ ದರ್ಶನ

ಆಶ್ರಮದಲ್ಲಿ ನಡೆಯುತ್ತಿದ್ದ ಈ ಗೊಂದಲದ ಚರ್ಚೆಯನ್ನು ಕೇಳಿ ಭತ್ತ ಕುಟ್ಟುತ್ತಿದ್ದ ಯುವಕನು ತನ್ನಷ್ಟಕ್ಕೆ ತಾನೇ ನಕ್ಕನು. ಇದನ್ನು ನೋಡಿ ಕೋಪಗೊಂಡ ಇತರ ಶಿಷ್ಯರು ಹಠ ಹಿಡಿದು ಪ್ರಶ್ನಿಸಿದಾಗ ಅವನು, ‘ಇಲ್ಲಿ ಮನಸ್ಸೂ ಇಲ್ಲ, ಕಲೆಗಳೂ ಇಲ್ಲ, ಕನ್ನಡಿಯೂ ಇಲ್ಲ. ಇಲ್ಲಿ ಏನೂ ಇಲ್ಲ (ಅಹಂಕಾರ ಶೂನ್ಯ ಸ್ಥಿತಿ) ಎಂಬುದೇ ಪರಮ ಸತ್ಯ. ಹಾಗೆ ಹೇಳುವಂತಹ ಸತ್ಯವೇನೂ ಇಲ್ಲಿಲ್ಲ ಎಂದನು. ಶಿಷ್ಯರು ಈ ಮಾತನ್ನು ಒಂದು ಚೀಟಿಯಲ್ಲಿ ಬರೆದು ಮತ್ತೆ ಗುರುಗಳ ಆಸನದ ಮುಂದಿಟ್ಟರು. ಮರುದಿನ ಅದನ್ನು ಓದಿದ ಗುರುಗಳು ತಕ್ಷಣವೇ ಎದ್ದು ನೇರವಾಗಿ ಭತ್ತ ಕುಟ್ಟುತ್ತಿದ್ದ ಯುವಕನ ಬಳಿ ಬಂದು, “ಈ ಮಠದಲ್ಲಿ ಇದನ್ನು ನೀನೊಬ್ಬನೇ ಬರೆಯಲು ಸಾಧ್ಯ. ಈಗ ನೀನು ಪರಿಪೂರ್ಣನಾಗಿದ್ದಿ, ಇಂದಿನಿಂದ ನೀನೇ ಈ ಮಠದ ಜವಾಬ್ದಾರಿಯನ್ನು ವಹಿಸಿಕೊ ಎಂದು ಉತ್ತರಾಧಿಕಾರಿಯನ್ನಾಗಿ ಮಾಡಿದರು.

ಬೋಧನೆ

ಯಾವುದೇ ಕಾಯಕವನ್ನು ಮಾಡುವಾಗ ನಾನು ಮಾಡುತ್ತಿದ್ದೇನೆ ಎಂಬ ಕರ್ತೃತ್ವ ಭಾವ ಇರಬಾರದು. ನಾವು ಕೆಲಸ ಮಾಡುವಾಗ ಕೇವಲ ಆ ಪ್ರಕ್ರಿಯೆಯಷ್ಟೇ ಉಳಿಯಬೇಕು, ನಮ್ಮ ಅಹಂಕಾರ (ಅಸ್ತಿತ್ವ) ನಶಿಸಬೇಕು. ಸಂಪೂರ್ಣ ಶರಣಾಗತಿ, ಅಹಂ ಶೂನ್ಯತೆ ಮತ್ತು ಗುರುಗಳ ಆಜ್ಞಾಪಾಲನೆಯಿಂದ ಮಾತ್ರ ಪರಮ ಸತ್ಯದ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂಬುದೇ ಈ ಕಥೆಯ ಸಾರ.

– ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದು ವಿಧಿಜ್ಞ ಪರಿಷದ್. (ಎಪ್ರಿಲ್ ೨೦೨೬)