ಖಾಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾಗಳ ವಿರುದ್ಧ 50 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ದಾಳಿ !

ನವದೆಹಲಿ – ರಾಷ್ಟ್ರೀಯ ತನಿಖಾ ದಳವು ಖಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾ ದೇಶದ 5 ರಾಜ್ಯಗಳ 50ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಅನೇಕ ಕುಖ್ಯಾತ ದರೋಡೆಕೋರರು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಖಲಿಸ್ತಾನಿ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಖಲಿಸ್ತಾನಿ ಭಯೋತ್ಪಾದಕರು ಗೂಂಡಾಗಳಿಗೆ ಹಣ ಕೊಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದಕ್ಕಾಗಿ ಖಲಿಸ್ತಾನಿಗಳಿಗೆ ಹಣದ ಅಗತ್ಯವಿದೆ. ಈ ಹಣವನ್ನು ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆ ಮೂಲಕ ಪಡೆಯಲಾಗುತ್ತದೆ.

ಖಲಿಸ್ತಾನಿ ಭಯೋತ್ಪಾದಕರು ಮತ್ತು ಗೂಂಡಾಗಳು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಖಲಿಸ್ತಾನಿ ಮತ್ತು ಗೂಂಡಾಗಳಿಗೆ ಪಾಕಿಸ್ತಾನವು ಹಣಕಾಸು ನೆರವು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುವುದಲ್ಲದೆ ಭಯೋತ್ಪಾದಕರನ್ನು ಪಾಕಿಸ್ತಾನ ಕಳುಹಿಸುತ್ತಿದೆ. ಈ ಕೆಲಸಕ್ಕೆ ಇಸ್ಲಾಮಿಕ್ ಭಯೋತ್ಪಾದಕರ ಬದಲಿಗೆ ಖಲಿಸ್ತಾನಿ ಭಯೋತ್ಪಾದಕರ ನೆರವು ಪಡೆಯಲಾಗುತ್ತಿದೆ. ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರು ಐ.ಎಸ್‌.ಐ. ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.