ಭಾದ್ರಪದ ಶುಕ್ಲ ದ್ವಿತೀಯಾ (೧೭.೯.೨೦೨೩) ‘ವರಾಹ ಜಯಂತಿ’ ಇದೆ. ಆ ನಿಮಿತ್ತ …
ಪ್ರಸ್ತುತ ಲೇಖನದಲ್ಲಿ, ಭಗವಾನ್ ವಿಷ್ಣುವಿನ ಮೂರನೇ ಅವತಾರವಾದ ವರಾಹ ಭಗವಂತನ ಅಲೌಕಿಕ ಸ್ವರೂಪವನ್ನು ಅತ್ಯಂತ ಭಾವಪೂರ್ಣ ರೀತಿಯಲ್ಲಿ ನಿರೂಪಿಸಲಾಗಿದೆ. ವರಾಹ ಜಯಂತಿಯ ನಿಮಿತ್ತ ನಮ್ಮ ಓದುಗರಿಗಾಗಿ ಈ ಲೇಖನವನ್ನು ಪ್ರಕಾಶಿಸುತ್ತಿದ್ದೇವೆ.
೧. ಸುಮೇರು ಪರ್ವತದ ಶಿಖರದಲ್ಲಿ ಬ್ರಹ್ಮದೇವನ ಅತ್ಯಂತ ಪ್ರಕಾಶಮಾನ, ದೈವಿಕ ಮತ್ತು ವಿಶಾಲವಾದ ಭವನ
‘ಇದು ಪ್ರಾಚೀನ ಕಾಲದ ಕಥೆಯಾಗಿದೆ. ಒಂದು ದಿನ ನಾರದ ಋಷಿಗಳು ಅನೇಕ ವಿಧದ ರತ್ನಗಳಿಂದ ಅಲಂಕೃತ ಸುಮೇರು ಪರ್ವತದ ಶಿಖರದ ಮಧ್ಯದಲ್ಲಿ ಭಗವಾನ್ ಬ್ರಹ್ಮದೇವನ ಅತ್ಯಂತ ಪ್ರಕಾಶಮಾನವಾದ ದಿವ್ಯ ಮತ್ತು ವಿಶಾಲವಾದ ಭವನವನ್ನು ನೋಡಿದರು. ಅದರ ಉತ್ತರ ಭಾಗದಲ್ಲಿ ಒಂದು ಉತ್ತಮ ವಾದ ಅಶ್ವತ್ಥ ಮರವಿತ್ತು. ಇದರ ಎತ್ತರ ಸಾವಿರ ಯೋಜನ ಮತ್ತು ವಿಸ್ತಾರ (ಅಗಲ) ಅದರ ದುಪ್ಪಟ್ಟು ಇತ್ತು. ಆ ಅಶ್ವತ್ಥದ ಬೇರಿನ ಬಳಿ ವಿವಿಧ ಪ್ರಕಾರದ ರತ್ನಗಳನ್ನು ಒಳಗೊಂಡ ದಿವ್ಯ ಮಂಟಪವಿತ್ತು. ಅದರಲ್ಲಿ ವೈಡೂರ್ಯ, ಮುತ್ತು ಮತ್ತು ಮಣಿಗಳಿಂದ ಸ್ವಸ್ತಿಕದ ಮನೆಗಳನ್ನು ಮಾಡಲಾಗಿತ್ತು. ಆ ದಿವ್ಯ ಮಂಟಪವನ್ನು ಹೊಸ ಆಭರಣಗಳು, ಲಾಂಛನಗಳು ಮತ್ತು ದಿವ್ಯ ತೋರಣಗಳಿಂದ (ಹೊರ ದ್ವಾರದಲ್ಲಿ) ಅಲಂಕೃತ ಗೊಳಿಸಲಾಗಿತ್ತು. ಇದರ ಮುಖ್ಯ ದ್ವಾರವನ್ನು ಪುಷ್ಯರಾಗದಿಂದ (ಒಂದು ಬಗೆಯ ರತ್ನ) ಮಾಡಲಾಗಿತ್ತ್ತು. ಅದರ ಗೋಪುರವು ಏಳು ಮಹಡಿಯದ್ದಾಗಿತ್ತು. ಹೊಳೆಯುವ ವಜ್ರಗಳಿಂದ ಮಾಡಿದ ಎರಡು ಬಾಗಿಲುಗಳು ಅದರ ಆಕರ್ಷಣೆಯನ್ನು ಹೆಚ್ಚಿಸಿತ್ತು. ಆ ಮಂಟಪವನ್ನು ಪ್ರವೇಶಿಸಿದ ನಾರದರು, ‘ಅಲ್ಲಿ ದಿವ್ಯವಾದ ಮುತ್ತುಗಳ ಮಂಟಪವಿದೆ, ಅಲ್ಲಿ ವೈಢೂರ್ಯ ಮಣಿಗಳ ವೇದಿಕೆಯನ್ನು ಮಾಡಲಾಗಿದೆ’ ಎಂಬು ದನ್ನು ನೋಡಿದರು. ಮಹಾಮುನಿ ನಾರದರು ಆ ಎತ್ತರದ ಮಂಟಪವನ್ನು ಏರಿದರು. ಅದರ ಮಧ್ಯಭಾಗದಲ್ಲಿ ಅತುಲನೀಯವಾದ ಅತ್ಯಂತ ಎತ್ತರದ ಸಿಂಹಾಸನವಿತ್ತು. ಅದರ ಮಧ್ಯದಲ್ಲಿ ಸಾವಿರ ದಳಗಳಿಂದ ಸುಶೋಭಿತವಾದ ಕಮಲವಿತ್ತು, ಅದು ಶುಭ್ರ ಬಿಳಿ ಬಣ್ಣದ್ದಾಗಿತ್ತು.
೨. ಭಗವಾನ ವರಾಹನ ದಿವ್ಯ ರೂಪ
ಆ ಕಮಲದ ಮಧ್ಯದಲ್ಲಿ ಹತ್ತು ಸಾವಿರ ಚಂದ್ರರಿಗಿಂತಲೂ ಹೆಚ್ಚು ಕಾಂತಿಯುತವಾದ ಕೈಲಾಸ ಪರ್ವತದಷ್ಟೇ ಗಾತ್ರದ ಸುಂದರ ಪುರುಷನು ಕುಳಿತ್ತಿದ್ದನು. ಅವನಿಗೆ ನಾಲ್ಕು ಭುಜಗಳಿದ್ದವು, ಔದಾರ್ಯವು ಅವನ ಪ್ರತಿಯೊಂದು ಅಂಗಾಂಗ ಗಳಿಂದ ಜಿನುಗುತ್ತಿತ್ತು. ಅವರ ಮುಖ ವರಾಹದಂತಿತ್ತು. ಆ ಪರಮ ಸುಂದರ ಭಗವಾನ ಪುರುಷೋತ್ತಮರು ತಮ್ಮ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಭಯಮುದ್ರ ಮತ್ತು ವರದಮುದ್ರೆಯನ್ನು ಹಿಡಿದಿದ್ದರು. ಅವನ ಸೊಂಟದಲ್ಲಿ ಪೀತಾಂಬರವು ಶೋಭಿಸುತ್ತಿತ್ತು. ಅವರ ಸೌಮ್ಯ ಮುಖವು ಪೂರ್ಣ ಚಂದ್ರನ ಸೌಂದರ್ಯವನ್ನೂ ಮೀರಿಸಿತ್ತು. ಅವರ ಮುಖಾರವಿಂದದಿಂದ ಧೂಪ ದಂತಹ ಸುಗಂಧವು ಹೊರಸೂಸುತ್ತಿತ್ತು. ಸಾಮವೇದವು ಅವರ ಧ್ವನಿ, ಯಜ್ಞವು ಅವರ ರೂಪವಾಗಿತ್ತು. ಅವರು ಮಸ್ತಕದಲ್ಲಿ ಧರಿಸಿದ ಕಿರೀಟದ ಪ್ರಕಾಶದಿಂದ ಅವರ ಮುಖವು ಅತ್ಯಂತ ಪ್ರಕಾಶಮಾನವಾಗಿತ್ತು. ಅವರ ವಕ್ಷಃ ಸ್ಥಳವು ಶ್ರೀವತ್ಸ ಚಿಹ್ನೆಯಿಂದ ಸುಶೋಭಿತವಾಗಿತ್ತು. ಶ್ವೇತವರ್ಣದ ಯಜ್ಞೋಪವೀತವು ಅಂಗಾಂಗಗಳ ವೈಭವವನ್ನು ಮತ್ತಷ್ಟು ಹೆಚ್ಚಿಸಿತ್ತು. ಆ ಕೌಸ್ತುಭ ಮಣಿಯ ದಿವ್ಯ ಪ್ರಭೆಯಿಂದ ದೈದೀಪ್ಯಮಾನವಾಗಿ ಕಾಣಿಸುತ್ತಿದ್ದರು. ಬ್ರಹ್ಮ, ವಸಿಷ್ಠ, ಅತ್ರಿ, ಮಾರ್ಕಂಡೇಯ ಮತ್ತು ಭೃಗು ಮೊದಲಾದ ಅನೇಕ ಋಷಿಗಳು ಹಗಲಿರುಳು ಅವರ ಸೇವೆಯಲ್ಲಿ ಮಗ್ನರಾಗಿದ್ದರು. ನಾರದರು ಅಂತಹ ದೇವದೇವೇಶ್ವರ ಭಗವಂತನ ಬಳಿಗೆ ಬಂದು ಭೂಮಿಯನ್ನು ಧರಿಸಿರುವ ಆ ವರಾಹ ಭಗವಂತನನ್ನು ದಿವ್ಯವಾದ ಉಪನಿಷತ್ ಮಂತ್ರಗಳಿಂದ ಸ್ತುತಿಸಿ ಅವರನ್ನು ಪ್ರಸನ್ನಗೊಳಿಸಿ ಅವರ ಹತ್ತಿರ ನಿಂತರು.
(ಕೃಪೆ : ‘ಕಲ್ಯಾಣ’ ಪತ್ರಿಕೆ ಶ್ರೀಸ್ಕಂದ-ಮಹಾಪುರಾಣ)