ಭಿಲ್ವಾಡಾ (ರಾಜಸ್ಥಾನ)ದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕಲ್ಲಿದ್ದಲು ಭಟ್ಟಿಯಲ್ಲಿ ಸುಟ್ಟರು !

ಭಿಲ್ವಾಡಾ (ರಾಜಸ್ಥಾನ) – ಇಲ್ಲಿಯ ಕೊತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಗ್ರಾಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವಳನ್ನು ಕಲ್ಲಿದ್ದಲು ಭಟ್ಟಿಯಲ್ಲಿ ಸುಟ್ಟು ಹಾಕಲಾಗಿದೆ. ಘಟನೆಯ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೃತ ಬಾಲಕಿಯ ಸಂಬಂಧಿಕರು, ತಮ್ಮ ಅಪ್ರಾಪ್ತ ಹುಡುಗಿಯು ಆಗಸ್ಟ್ 2 ರಂದು ಬೆಳಗ್ಗೆ ದನ ಮೇಯಿಸಲು ಮನೆಯಿಂದ ಹೋಗಿದ್ದಳು. ಸಾಯಂಕಾಲ 4 ಗಂಟೆಯಾದರೂ ಆಕೆ ಮರಳಿ ಬಾರದೆ ಇದ್ದಾಗ ಮನೆಯವರು ಹುಡುಕಾಡಲು ಪ್ರಾರಂಭಿಸಿದ್ದರು. ಗ್ರಾಮಸ್ಥರು ಮತ್ತು ಕುಟುಂಬಸ್ಥರು ಹುಡುಗಿಯನ್ನು ಹುಡುಕುತ್ತಾ, ತಡರಾತ್ರಿ ಗ್ರಾಮದ ಹೊರಗಿನ ಕಲ್ಲಿದ್ದಲು ಭಟ್ಟಿಯ ಬಳಿ ತಲುಪಿದರು. ಆ ವೇಳೆ ಅವರಿಗೆ ಹುಡುಗಿ ಬೆಂಕಿಯಲ್ಲಿ ಉರಿಯುತ್ತಿರುವುದು ಕಂಡು ಬಂದಿತು. ತದ ನಂತರ ರಾಜಸ್ಥಾನದ ಗುರ್ಜರ್ ಮಹಾಸಭೆಯ ಪ್ರದೇಶಾಧ್ಯಕ್ಷ ಹಾಗೂ ಭಾಜಪದ ಮುಖಂಡ ಕಾಲುಲಾಲ್ ಗುರ್ಜರ್, ಜಿಲ್ಲಾಧ್ಯಕ್ಷ ಶಂಕರಲಾಲ್ ಗುರ್ಜರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾಕಾರರು ಅಪ್ರಾಪ್ತ ಬಾಲಕಿಯ ಅವಶೇಷಗಳನ್ನು ಸ್ಥಳದಿಂದ ತೆಗೆಯಲು ನಿರಾಕರಿಸಿದರು.

ಸಂಪಾದಕೀಯ ನಿಲುವು

ಇಂತಹ ರಾಕ್ಷಸಿ ಕೃತ್ಯ ಎಸಗುವ ಹಂತಕರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು !