ಆರೋಗ್ಯಕರ ಜೀವನಕ್ಕಾಗಿ ಊಟದ ೧೦ ನಿಯಮಗಳು !

‘ಊಟವನ್ನು ಯಾವ ರೀತಿ ಮಾಡಬೇಕು ? ಇದರ ಬಗ್ಗೆಯೂ ಒಂದು ಶಾಸ್ತ್ರವಿದೆ, ಅದನ್ನು ನಮಗೆ ಯಾರೂ, ಎಂದಿಗೂ ಕಲಿಸಿಲ್ಲ. ಊಟದ ವಿಷಯದಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇಂದು ನಾವು ಆಯುರ್ವೇದಕ್ಕನುಸಾರ ಊಟಕ್ಕೆ ಸಂಬಂಧಿಸಿದ ನಿಯಮಗಳನ್ನು ಕಲಿತುಕೊಳ್ಳುವವರಿದ್ದೇವೆ. ಈ ನಿಯಮಗಳನ್ನು ಪಾಲಿಸಿದರೆ, ನಾವು ಖಂಡಿತವಾಗಿಯೂ ಒಳ್ಳೆಯ ಆರೋಗ್ಯದಿಂದ ಇರಬಹುದು.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

೧. ಬಿಸಿ ಮತ್ತು ತಾಜಾ ಊಟವನ್ನು ಮಾಡುವುದರ ಮಹತ್ವ

ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಿದರೆ, ಅನ್ನ ತುಂಬಾ ರುಚಿಕರವೆನಿಸುತ್ತದೆ. ಇಂತಹ ಆಹಾರ ನಮ್ಮ ಶರೀರದಲ್ಲಿ ಹೋದ ಮೇಲೆ ನಮ್ಮ ಜಠರಾಗ್ನಿ ಬೇಗನೆ ಪ್ರಜ್ವಲಿಸುತ್ತದೆ. ಇಂತಹ ಆಹಾರ ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ. ಇದರ ಬದಲು ತಣ್ಣಗಾದ ಆಹಾರ ಅಥವಾ ತಂಪು ಪೆಟ್ಟಿಗೆಯಲ್ಲಿ (ಫ್ರೀಜನಲ್ಲಿ) ಇಟ್ಟಿರುವ ಆಹಾರವನ್ನು ಸೇವಿಸಿದರೆ ಅದರಿಂದ ಲಾಭವಾಗದೇ ವಿಪರೀತ ಪರಿಣಾಮಗಳನ್ನೇ ಭೋಗಿಸ ಬೇಕಾಗುತ್ತದೆ. ಗೃಹಿಣಿಯರು ಬೆಳಗ್ಗೆ ಬೇಗನೆ ಎದ್ದು ಎಲ್ಲರ ಊಟದ ಡಬ್ಬಿಗಳನ್ನು ಕಟ್ಟುತ್ತಾರೆ. ಅನಂತರ ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ೨ ರಿಂದ ೨.೩೦ ರ ಸಮಯದಲ್ಲಿ ತಣ್ಣಗಾದ ಆಹಾರವನ್ನು ಸೇವಿಸುತ್ತಾರೆ. ಇಂತಹ ಊಟದಿಂದ ಅವರಿಗೆ ಆವಶ್ಯಕ ಲಾಭವಾಗುವುದಿಲ್ಲ. ಆದುದರಿಂದ ಅವರೂ ಸಹ ಮನೆಯಲ್ಲಿನ ಇತರ ಸದಸ್ಯರ ಜೊತೆಗೆ ಬಿಸಿ ಮತ್ತು ತಾಜಾ ಆಹಾರವನ್ನು ಸೇವಿಸಲು ಪ್ರಯತ್ನಿಸಬೇಕು.

೨. ಸ್ನಿಗ್ಧ ಊಟವನ್ನು ಏಕೆ ಮಾಡಬೇಕು ?

ಸ್ನಿಗ್ಧ ಊಟವೆಂದರೆ ಸರಿಯಾಗಿ ಬೇಯಿಸಿದ, ಎಣ್ಣೆ, ತುಪ್ಪ,ಕೊಬ್ಬರಿ, ಎಳ್ಳು, ಮತ್ತು ಶೇಂಗಾ ಇಂತಹ ಸ್ನಿಗ್ಧ (ಎಣ್ಣೆಯುಕ್ತ) ಪದಾರ್ಥಗಳನ್ನು ಬಳಸಿ ಮಾಡಿದ ಅಡಿಗೆ. ಅಡಿಗೆಯನ್ನು ಮಾಡುವಾಗ ಆವಶ್ಯಕವಿರುವ ಎಲ್ಲ ಸಾಮಗ್ರಿಗಳನ್ನು ಹಾಕಿ ಮಾಡಿದ ಪದಾರ್ಥಗಳು ರುಚಿಕರವಾಗುತ್ತವೆ. ಅದರಿಂದಲೂ ನಮ್ಮ ಜಠರಾಗ್ನಿ ಪ್ರಜ್ವಲಿಸುತ್ತದೆ. ನಾವು ಪ್ರತಿದಿನ ಕೇವಲ ಬೇಯಿಸಿದ (ಸ್ಟೀಮ್ಡ) ತರಕಾರಿಗಳನ್ನು ತಿಂದರೆ, ಇಂತಹ ಆಹಾರವನ್ನು ನಮಗೆ ಬಹಳ ದಿನ ಸೇವಿಸಲು ಆಗುವುದಿಲ್ಲ. ಆದುದರಿಂದ ಅಡುಗೆಯನ್ನು ಮಾಡುವಾಗ ನಮ್ಮ ಕೌಶಲ್ಯವನ್ನು ಬಳಸಿ ಪದಾರ್ಥಗಳು ರುಚಿಕರ ಮತ್ತು ಆರೋಗ್ಯಕ್ಕೆ ಹಿತಕರವಾಗಲು ವಿಶೇಷ ಪ್ರಯತ್ನವನ್ನು ಮಾಡಬೇಕು. ಪದಾರ್ಥಗಳನ್ನು ರುಚಿಕರ ಮಾಡುವುದೆಂದರೆ ಬಹಳಷ್ಟು ಎಣ್ಣೆ ಅಥವಾ ಮಸಾಲೆಗಳನ್ನು ಹಾಕುವುದು ಎಂದರ್ಥವಲ್ಲ.

೩. ಯೋಗ್ಯ ಪ್ರಮಾಣದಲ್ಲಿ ಮತ್ತು ಯೋಗ್ಯ

ಸಮಯದಲ್ಲಿ ಊಟ ಮಾಡುವುದರ ಲಾಭ ಯೋಗ್ಯ ಪ್ರಮಾಣದಲ್ಲಿ ಮತ್ತು ಯೋಗ್ಯ ಸಮಯದಲ್ಲಿ ಊಟವನ್ನು ಮಾಡಬೇಕು. ಯೋಗ್ಯ ಪ್ರಮಾಣದಲ್ಲಿ ಊಟವನ್ನು ಮಾಡಿದರೆ ನಮ್ಮ ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳು ಸಮಪ್ರಮಾಣದಲ್ಲಿರುತ್ತವೆ ಮತ್ತು ನಾವೂ ಆರೋಗ್ಯದಿಂದಿರುತ್ತೇವೆ. ಯೋಗ್ಯ ಪ್ರಮಾಣದಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ, ಇದರಿಂದ ಎಲ್ಲ ಲೋಹಗಳ ನಿರ್ಮಾಣವೂ ಸರಿಯಾಗಿ ಆಗುತ್ತದೆ. ನಾವು ಮಾಡುವ ಊಟವು ಯೋಗ್ಯ ಪ್ರಮಾಣದಲ್ಲಿದೆ ಎಂಬುವುದನ್ನು ಹೇಗೆ ನಿರ್ಧರಿಸಬೇಕು ? ಆಹಾರದ ಪ್ರಮಾಣವು ಆ ವ್ಯಕ್ತಿಯ ವಯಸ್ಸು, ಆಹಾರವನ್ನು ಪಚನ ಮಾಡುವ  ಕ್ಷಮತೆ, ಉದ್ಯೋಗ, ಶ್ರಮ ಮತ್ತು ಆಹಾರದ ಸ್ವರೂಪ (ವಿಧ) ಇತ್ಯಾದಿಗಳ ಮೇಲೆ ಅವಲಂಬಿಸಿರುತ್ತದೆ.

. ವಯಸ್ಕರ ವ್ಯಕ್ತಿಗಳ ಆಹಾರ ಕಡಿಮೆ ಮತ್ತು ಯುವಕರ ಆಹಾರ ಹೆಚ್ಚಿರುತ್ತದೆ.

. ಮಾಹಿತಿ ತಂತ್ರಜ್ಞಾನ (ಐ.ಟಿ.) ಕ್ಷೇತ್ರದಲ್ಲಿನ ವ್ಯಕ್ತಿಗಳಿಗೆ ದಿನವಿಡೀ ಕುಳಿತುಕೊಂಡು ಕೆಲಸ ಮಾಡುವುದಿರುತ್ತದೆ. ಆದುದರಿಂದ ಅವರು ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು. ಇದಕ್ಕೆ ವಿರುದ್ಧ ಯಾರು ಕಷ್ಟದ (ಶಾರೀರಿಕ) ಕೆಲಸಗಳನ್ನು ಮಾಡುತ್ತಾರೆ, ಅವರು ಹೆಚ್ಚು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.

ಇ. ಪುರಿ-ಭಾಜಿ, ಕಡಧಾನ್ಯಗಳ ಪಲ್ಯ (ಉಸುಳಿ) ಇತ್ಯಾದಿ ಜೀರ್ಣವಾಗಲು ಜಡವಾಗಿರುವ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಜೀರ್ಣವಾಗಲು ಹಗುರ ಇರುವ ಪದಾರ್ಥಗಳ ಪ್ರಮಾಣ ತುಲನೆಯಲ್ಲಿ ಹೆಚ್ಚಿರಬೇಕು.

ಈ. ಪ್ರತಿಯೊಬ್ಬರೂ ತಮ್ಮ ಆಹಾರದ ಪ್ರಮಾಣವನ್ನು ನಿರ್ಧರಿಸಬೇಕು : ಆಹಾರವನ್ನು ಪಚನ ಮಾಡುವ  ಕ್ಷಮತೆಯ ಮೇಲೆ ಆಹಾರವನ್ನು ನಿರ್ಧರಿಸುವುದಿರುತ್ತದೆ. ಪಿತ್ತ ಪ್ರಕೃತಿಯ ವ್ಯಕ್ತಿಯ ಆಹಾರ ಬೇಗನೆ ಮತ್ತು ಕಫ ಪ್ರಕೃತಿಯ ವ್ಯಕ್ತಿಯ ಆಹಾರವು ಆ ತುಲನೆಯಲ್ಲಿ ನಿಧಾನವಾಗಿ ಪಚನವಾಗುತ್ತದೆ. ಇದರ ಅರ್ಥ ಪ್ರತಿಯೊಬ್ಬ ವ್ಯಕ್ತಿಗೆ ಆಹಾರದ ಒಂದೇ ನಿಯಮವನ್ನು ಮಾಡಲು ಬರುವುದಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಪ್ರಕೃತಿ, ವಯಸ್ಸು, ಉದ್ಯೋಗ, ತಿನ್ನುವ ಪದಾರ್ಥಗಳು ಇವುಗಳ ಮೇಲೆ ಆಹಾರದ ಪ್ರಮಾಣವನ್ನು ನಿರ್ಧರಿಸಬೇಕು.

ನಮ್ಮ ಹೊಟ್ಟೆಯ ೪ ಸಮಭಾಗಗಳನ್ನು ಮಾಡಿ, ಅದರಲ್ಲಿನ ೨ ಭಾಗ ಊಟಕ್ಕಾಗಿ. ಒಂದು ಭಾಗ ದ್ರವ ಪದಾರ್ಥಗಳಿಗಾಗಿ ಮತ್ತು ಇನ್ನುಳಿದ ಒಂದು ಭಾಗವನ್ನು ಖಾಲಿ ಇಡಬೇಕು. ಆಯುರ್ವೇದದ ಈ ನಿಯಮವು ಎಲ್ಲರಿಗೂ ಗೊತ್ತಿದೆ; ಆದರೆ ಈ ಭಾಗಗಳನ್ನು ಹೇಗೆ ನಿರ್ಧರಿಸಬೇಕು ? ಈ ಪ್ರಶ್ನೆ ಬಹಳಷ್ಟು ಜನರಿಗೆ ಬರುತ್ತದೆ. ಊಟವಾದ ಮೇಲೆ ನಮ್ಮ ಶರೀರದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ? ಇದರಿಂದ ನಾವು ಊಟ ಕಡಿಮೆ ಅಥವಾ ಹೆಚ್ಚು ಮಾಡಿದ್ದೇವೆ ? ಇದರ ಅಂದಾಜು ಬರುತ್ತದೆ. ಯೋಗ್ಯ ಪ್ರಮಾಣದಲ್ಲಿ ಊಟವನ್ನು ಮಾಡಿದರೆ ಕಂಡುಬರುವ ಲಕ್ಷಣಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಉ. ಯೋಗ್ಯ ಪ್ರಮಾಣದಲ್ಲಿ ಊಟ ಮಾಡಿದ್ದರೆ ಕಂಡುಬರುವ ಲಕ್ಷಣಗಳು : ಯಾವ ಪ್ರಮಾಣದಲ್ಲಿ ಊಟವನ್ನು ಮಾಡಿದರೆ ನಮ್ಮ ಹೊಟ್ಟೆಯಲ್ಲಿ ತೊಂದರೆಯಾಗುವುದಿಲ್ಲ, ಹೃದಯದ ಮೇಲೆ ಒತ್ತಡ ಬರುವುದಿಲ್ಲ, ಹೊಟ್ಟೆಯ ಮೇಲೆ ಒತ್ತಡ ಬಂದು ಅದು ಹೆಚ್ಚು ಜಡವೆನಿಸುವುದಿಲ್ಲ, ನಮ್ಮ ಎಲ್ಲ ಇಂದ್ರಿಯಗಳು ಪ್ರಸನ್ನವಾಗಿರುತ್ತವೆ; ಕುಳಿತುಕೊಳ್ಳುವುದು ಏಳುವುದು, ಮಲಗುವುದು, ನಿಲ್ಲುವುದು, ಅಡ್ಡಾಡುವುದು, ಶ್ವಾಸೋಚ್ವಾಸ ಮಾಡುವುದು, ನಗುವುದು ಈ ಎಲ್ಲ ಕ್ರಿಯೆಗಳು ಹಿತಕರವಾಗುತ್ತವೆ ಮತ್ತು ಊಟ ಚೆನ್ನಾಗಿ ಪಚನವಾದ ನಂತರ ಯೋಗ್ಯ ಸಮಯಕ್ಕೆ ಮಲ-ಮೂತ್ರಗಳು ಆಗುತ್ತವೆ. ಈ ಲಕ್ಷಣಗಳು ನಮ್ಮಲ್ಲಿ ಕಂಡುಬಂದರೆ ನಾವು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿದ್ದೇವೆ, ಎಂಬುದು ತಿಳಿಯುತ್ತದೆ.

. ಊಟದ ಸರಿಯಾದ ಸಮಯಗಳು : ಊಟದ ಸರಿಯಾದ ಸಮಯ ಬೆಳಗ್ಗೆ ೧೦ ರಿಂದ ೧೨ ಮತ್ತು ಸಾಯಂಕಾಲ ೬ ರಿಂದ ೮ ರ ವರೆಗೆ ಇರಬೇಕು. ರಾತ್ರಿಯ ಊಟವನ್ನು ಬೇಗ ಮಾಡಿದರೆ, ಅದು ಸರಿಯಾಗಿ ಜೀರ್ಣವಾಗುತ್ತದೆ. ಇದರಿಂದ ಮರುದಿನ ಉತ್ಸಾಹವೆನಿಸುತ್ತದೆ.

೪. ಮೊದಲಿನ ಆಹಾರ ಜೀರ್ಣವಾದ ಮೇಲೆಯೇ ಊಟ ಮಾಡಬೇಕು

ಬಹಳಷ್ಟು ಸಲ ಹಸಿವಾಗದಿದ್ದರೂ ಊಟದ ಸಮಯವಾಯಿತೆಂದು ನಾವು ಊಟ ಮಾಡುತ್ತೇವೆ. ಅದರಿಂದ ಜಠರಾಗ್ನಿಯ ಮೊದಲಿನ ಕೆಲಸ ಮುಗಿಯುವುದರೊಳಗೆ ನಾವು ಮತ್ತೆ ಕೆಲಸದ ಒತ್ತಡವನ್ನು ಅಗ್ನಿಯ ಮೇಲೆ ಹಾಕುತ್ತೇವೆ; ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರ ಪರಿಣಾಮ ಹೊಟ್ಟೆ ಭಾರವಾಗುವುದು, ಆಲಸ್ಯ, ನಿರುತ್ಸಾಹ, ಹೊಟ್ಟೆ ಉಬ್ಬುವುದು, ಆಮ್ಲಪಿತ್ತದ ತೊಂದರೆಯಾಗುವುದು ಇಂತಹ ತೊಂದರೆಗಳು ಉದ್ಭವಿಸುತ್ತವೆ. ಆದುದರಿಂದ ತುಂಬಾ ಹಸಿವೆಯಾಗದ ಹೊರತು ಮುಂದಿನ ಆಹಾರವನ್ನು ಸೇವಿಸಬಾರದು.

೫. ವಿರುದ್ಧ ಆಹಾರ ಸೇವಿಸಬಾರದು !

ಯಾವ ಎರಡು ಪದಾರ್ಥಗಳ ಗುಣಧರ್ಮಗಳು ಪರಸ್ಪರ ವಿರುದ್ಧವಾಗಿರುತ್ತವೆಯೋ, ಅಂತಹ ಪದಾರ್ಥಗಳನ್ನು ಒಟ್ಟಿಗೆ ತಿನ್ನಬಾರದು. ಉದಾ. ಹಾಲು ಮತ್ತು ಮೀನು, ಹಾಲು-ಹುಳಿ ಹಣ್ಣುಗಳು ಇತ್ಯಾದಿ. ಪದಾರ್ಥಗಳ ಮೇಲೆ ಮಾಡಿದ ಅಯೋಗ್ಯ ಸಂಸ್ಕಾರಗಳಿಂದಲೂ ನಮ್ಮ ಆರೋಗ್ಯದ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಉದಾ. ಮೊಸರನ್ನು ಬಿಸಿ ಮಾಡಿ ತಿನ್ನುವುದು. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಬಿರ್ಯಾನಿ ಈ ಆಹಾಪದಾರ್ಥದಲ್ಲಿ ಚಿಕನ್, ಮಟನ್ ಅಥವಾ ಪನೀರ ಇವುಗಳಿಗೆ ಮೊಸರು ಮತ್ತು ಮಸಾಲೆ ಹಚ್ಚಿ ಕೆಲವು ಸಮಯ ಇಡಲಾಗುತ್ತದೆ. ನಂತರ ಈ ಪದಾರ್ಥಗಳನ್ನು ಬೇಯಿಸುವಾಗ ಬಿಸಿ ಮಾಡ ಲಾಗುತ್ತದೆ. ಇನ್ನೊಂದು ಉದಾಹರಣೆ ಎಂದರೆ ಪನೀರ ಮಸಾಲಾ. ಹಾಲನ್ನು ಕೆಡಿಸಿ ಪನೀರನ್ನು ತಯಾರಿಸುತ್ತಾರೆ. ಅದರಲ್ಲಿ ನಾವು ಖಾರ, ಉಪ್ಪು, ಮಸಾಲೆಯನ್ನು ಹಾಕಿ ಮಾಡಿದ ಪಲ್ಯ, ಅಂದರೆ ಅದು ವಿರುದ್ಧ ಆಹಾರವಾಗುತ್ತದೆ. ಇವು ನಮ್ಮ ಆರೋಗ್ಯಕ್ಕೆ ತುಂಬ ಹಾನಿಕರವಾಗಿವೆ. ಹಾಗಾಗಿ ಇಂತಹ ಪದಾರ್ಥಗಳು ನಮ್ಮ ಆಹಾರದಲ್ಲಿ ಆಗಾಗ ಬರದಂತೆ ಎಲ್ಲರೂ ಎಚ್ಚರ ವಹಿಸಬೇಕು.

೬. ಯೋಗ್ಯ ಜಾಗದಲ್ಲಿ ಕುಳಿತು ಮತ್ತು ಯೋಗ್ಯ ಉಪಕರಣಗಳನ್ನು ಬಳಸಿ ಊಟ ಮಾಡಬೇಕು

ಹಿಂದಿನ ಕಾಲದಲ್ಲಿ ಅಡುಗೆಮನೆಯಲ್ಲಿಯೇ ಊಟಕ್ಕೆ ಕುಳಿತು ಕೊಳ್ಳುತ್ತಿದ್ದರು. ಎಲ್ಲಿ ಊಟ ಮಾಡುತ್ತೇವೆಯೋ ಅಲ್ಲಿಯ ಜಾಗ, ಪ್ರಸನ್ನ, ಶಾಂತ ಮತ್ತು ಸ್ವಚ್ಛವಾಗಿರಬೇಕು. ಸದ್ಯ  ಬಹಳಷ್ಟು ಜನರು ದೂರದರ್ಶನದ ಮುಂದೆ ಅಥವಾ ಸೋಫಾದ ಮೇಲೆ ಕುಳಿತು ಊಟ ಮಾಡುತ್ತಾರೆ. ಇದು ಅಯೋಗ್ಯವಾಗಿದೆ. ಈಗ ಯೋಗ್ಯ ಉಪಕರಣಗಳ ಉಪಯೋಗ ಎಂದರೇನು ? ಯಾವ ಪಾತ್ರೆ ಗಳನ್ನು ನಾವು ಬಳಸುತ್ತೆವೆಯೋ, ಅವು ಸ್ವಚ್ಛ ಇರಬೇಕು. ಅಲ್ಯುಮಿನಿಯಮ್ ಪಾತ್ರೆಗಳಲ್ಲಿ ಅಥವಾ ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದು ನಮ್ಮ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಇದರ ಬಗ್ಗೆಯೂ ವಿಚಾರ ಮಾಡಬೇಕು, ಅದರ ಬದಲು, ಕಬ್ಬಿಣ, ಸ್ಟೀಲ್ ಇಂತಹ ಪಾತ್ರ್ರೆಗಳ ಬಳಕೆಯನ್ನು ಹೇಗೆ ಮಾಡಬಹುದು, ಇದರ ಬಗ್ಗೆ ಎಲ್ಲರೂ ವಿಚಾರ ಮಾಬೇಕು.

೭. ಅತೀ ಗಡಿಬಿಡಿಯಿಂದ ಊಟ ಮಾಡಬಾರದು 

‘ಬೇಗ ಹೊರಡುವುದಿದೆ, ‘ಊಟದ ಸಮಯ (ಲಂಚ್ ಟೈಮ್) ಸೀಮಿತವಾಗಿದೆ. ಇಂತಹ ಊಟದಿಂದ ನಮ್ಮ ಅನ್ನಪಚನದ ತೊಂದರೆಗಳು ಹೆಚ್ಚಾಗಿರುವುದು ಕಂಡುಬರುತ್ತದೆ. ನಮ್ಮ ಆಹಾರದ ಜೀರ್ಣಕ್ರಿಯೆಯು ನಾಲಿಗೆಯಿಂದ ಆರಂಭವಾಗುತ್ತದೆ. ನಾವು ಗಡಿಬಿಡಿಯಿಂದ  ಊಟ ಮಾಡಿದರೆ ನಮ್ಮ ಲಾಲಾರಸವು ಆಹಾರದಲ್ಲಿ ಸರಿಯಾಗಿ ಬೆರೆಯುವುದಿಲ್ಲ. ಹೀಗೆ ಗಡಿಬಿಡಿ ಯಿಂದ ತೆಗೆದುಕೊಂಡ ಆಹಾರ ಯೋಗ್ಯ ಪ್ರಕ್ರಿಯೆ ಆಗದೇ ಜೀರ್ಣಕ್ರಿಯೆಯ ಮೇಲೆ ಪರಿಣಾಮವಾಗುತ್ತದೆ.

೮. ದೀರ್ಘಕಾಲದ ವರೆಗೆ ಊಟ ಮಾಡಬಾರದು

ತುಂಬಾ ಹೊತ್ತು ಊಟ ಮಾಡಿದರೆ ಊಟ ತಣ್ಣಗಾಗುತ್ತದೆ. ಅದರಿಂದ ಅದರಲ್ಲಿನ ರುಚಿ ಕಡಿಮೆಯಾಗುತ್ತದೆ, ಅದರಿಂದ ಅದು ಯೋಗ್ಯರೀತಿಯಲ್ಲಿ ಜೀರ್ಣ ಆಗುವುದಿಲ್ಲ.

೯. ಊಟ ಮಾಡುವಾಗ ಮಾತನಾಡಬಾರದು

ಮಾತನಾಡುತ್ತಾ ಊಟ ಮಾಡಿದರೆ ನಾವು ಏನು ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನುತ್ತಿದ್ದೇವೆ, ಇದರ ಅರಿವು ಉಳಿಯುವುದಿಲ್ಲ. ಮಾತನಾಡುತ್ತಾ ಊಟ ಮಾಡಿದರೆ ಕೆಲವೊಮ್ಮೆ ಆಹಾರದ ಕಣವು ಶ್ವಾಸನಾಳಕ್ಕೆ ಹೋಗಿ ಕೆಮ್ಮು ಬರುವ ಸಾಧ್ಯತೆ ಇರುತ್ತದೆ; ಹಾಗಾಗಿ ಊಟ ಮಾಡುವಾಗ ಆದಷ್ಟು ಮಾತನಾಡಬಾರದು.

೧೦. ಪ್ರಸನ್ನ ಮನಸ್ಸಿನಿಂದ ಮತ್ತು ಏಕಾಗ್ರತೆಯಿಂದ ಊಟ ಮಾಡಬೇಕು

ನಮ್ಮ ಶಾಸ್ತ್ರದಲ್ಲಿ ‘ಊಟವೆಂದರೆ ಕೇವಲ ಹೊಟ್ಟೆ ತುಂಬಿಸುವುದಲ್ಲ ಅದೊಂದು ಯಜ್ಞಕರ್ಮ, ಎಂದು ಹೇಳ ಲಾಗಿದೆ. ಊಟ ಮಾಡುವಾಗ ಭಯ, ಚಿಂತೆ, ಕೋಪ ಈ ಮಾನಸಿಕ ಭಾವನೆಗಳನ್ನು ಬದಿಗಿಟ್ಟು ‘ದೇವರು ನಮಗೆ ಈ ಆಹಾರವನ್ನು ಕೊಟ್ಟಿದ್ದಾನೆ, ಎಂಬ ಬಗ್ಗೆ ಕೃತಜ್ಞರಾಗಿದ್ದು ಆಹಾರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ನಾವು ಎಷ್ಟು ಊಟ ಮಾಡುತ್ತಿದ್ದೇವೆ ? ಮತ್ತು ಏನು ಊಟ ಮಾಡು ತ್ತಿದ್ದೇವೆ ? ಅದು ನಮಗೆ ಯೋಗ್ಯವಾಗಿದೆಯೋ ? ಇವೆಲ್ಲದರ ವಿಚಾರವಾಗುತ್ತದೆ ಅದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ.

ಊಟ ಮಾಡುವಾಗ ನಾವು ಎಲ್ಲ ರುಚಿಯ (ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು) ಆಹಾರ ಪದಾರ್ಥಗಳನ್ನು ಆಹಾರ ದಲ್ಲಿ ತೆಗೆದುಕೊಳ್ಳುತ್ತಿದ್ದೇವಲ್ಲಾ ? ಇದರ ವಿಚಾರವಾಗಬೇಕು. ಈ ರೀತಿಯಲ್ಲಿ ನಾವು ಊಟದ ಈ ೧೦ ನಿಯಮಗಳನ್ನು ಓದಿದೆವು. ಈ ನಿಯಮಗಳನ್ನು ಪಾಲಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ವೈದ್ಯೆ (ಸೌ.) ಮುಕ್ತಾ ಲೋಟಲೀಕರ, ಪುಣೆ  (೨೧.೪.೨೦೨೩)

(ಆಧಾರ : ‘ಪಂಚಮ ವೇದ-ಆಯುರ್ವೇದ ಯುಟ್ಯೂಬ್ ವಾಹಿನಿ)