ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪ್ರವಚನಕ್ಕೆ ಅನುಮತಿ ನೀಡಬಾರದೆಂದು ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಮಧ್ಯಪ್ರದೇಶ ಉಚ್ಚನ್ಯಾಯಾಲಯ !

ಅನುಚಿತವಾಗಿ ಯುಕ್ತಿವಾದ ಮಂಡಿಸಿದ ನ್ಯಾಯವಾದಿಗೆ ನ್ಯಾಯಾಲಯದ ನಿಂದನೆ ಎಂದು ನೋಟಿಸ್ !

ಜಬಲಪುರ (ಮಧ್ಯಪ್ರದೇಶ) – ರಾಜ್ಯದ ಬಾಲಾಘಾಟಾ ಜಿಲ್ಲೆಯಲ್ಲಿನ ಲಿಂಗಾ ಗ್ರಾಮದ ರಾಣಿ ದುರ್ಗಾವತಿ ಮಹಾವಿದ್ಯಾಲಯದಲ್ಲಿ ಮೇ ೨೩ ಮತ್ತು ೨೪ ರಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರ ಪ್ರವಚನ ನಡೆಯಲಿದೆ. ಈ ಪ್ರವಚನಕ್ಕೆ ಅನುಮತಿ ನಿರಾಕರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಜಬಲ್‌ಪುರ ವಿಭಾಗೀಯ ಪೀಠವು ತಳ್ಳಿಹಾಕಿದೆ.

೧. ‘ಈ ಅರ್ಜಿಯಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಪ್ರವಚನದಿಂದ ಇಲ್ಲಿನ ಬುಡಕಟ್ಟು ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಲಿದೆ’, ಎಂದು ಹೇಳಲಾಗಿದೆ. ಈ ಬಗ್ಗೆ ನ್ಯಾಯಾಲಯವು ‘ನಿಖರವಾಗಿ ಯಾವುದರಿಂದ ನೋವು ಉಂಟಾಗಲಿದೆ’ ಎಂಬುದು ಸ್ಪಷ್ಟಪಡಿಸಲು ಹೇಳಿದಾಗ ಅರ್ಜಿದಾರರ ನ್ಯಾಯವಾದಿಗೆ ಅದನ್ನು ಸ್ಪಷ್ಟಪಡಿಸಲು ಸಾಧ್ಯವಾಗದ ಕಾರಣ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

೨. ಈ ವೇಳೆ ನ್ಯಾಯವಾದಿಯು ನ್ಯಾಯಮೂರ್ತಿ ವಿವೇಕ ಅರ್ಗವಾಲ ಅವರೊಂದಿಗೆ ಅನುಚಿತ ರೀತಿಯಲ್ಲಿ ವಾದಿಸಿದರು. ವಾದದ ಸಮಯದಲ್ಲಿ ನ್ಯಾಯವಾಧಿಯು ಸಂವಿಧಾನವನ್ನು ಉಲ್ಲೇಖಿಸುತ್ತಾ ನ್ಯಾಯಾಧೀಶರ ಮೇಲೆ ಆರೋಪ ಮಾಡಿದರು, ‘ನೀವು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ನಾನು ನಿಮಗೆ ಹೇಳಲು ಪ್ರಯತ್ನಿಸುತ್ತಿದ್ದೇನೆ; ಆದರೆ ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ. ನೀವು ಏನೇನೋ ಮಾತನಾಡುತ್ತಿದ್ದೀರಿ.’ ಎಂದು ಹೇಳಿದರು.

೩. ಈ ಕುರಿತು ನ್ಯಾಯಮೂರ್ತಿ ಅರ್ಗವಾಲ್ ಅವರು ನ್ಯಾಯವಾದಿಗೆ ನ್ಯಾಯಾಂಗದ ನಿಂದನೆಯ ನೋಟಿಸ್ ಕೊಡುತ್ತಾ ಕಾರಾಗೃಹಕ್ಕೆ ಹಾಕುವುದಾಗಿ ಎಚ್ಚರಿಕೆ ನೀಡಿದರು. ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕುತೂಹಲದ ಸಂಗತಿಯೆಂದರೆ, ಕೆಲವು ದಿನಗಳ ಹಿಂದೆ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದಾದ ಬಳಿಕವೂ ಇದೇ ರೀತಿಯ ಅರ್ಜಿ ಪುನಃ ಸಲ್ಲಿಸಲಾಗಿದೆ.