ಕಾಲಗಣನೆಯ ಸೂಕ್ಷ್ಮ ಪರಿಮಾಣವನ್ನು ನೀಡುವ ‘ಶ್ರೀಮದ್ಭಾಗವತಪುರಾಣ’ !

‘ಶ್ರೀಮದ್ಭಾಗವತಪುರಾಣ’ದಲ್ಲಿ ಭಾರತೀಯ ಕಾಲಗಣನೆಯಪದ್ಧತಿಯನ್ನು ೩ ನೇಯ ಸ್ಕಂಧದ ೧೧ ನೇ ಅಧ್ಯಾಯದಲ್ಲಿ ಅತ್ಯಂತ ಸುಲಭ ಪದ್ಧತಿಯಲ್ಲಿ ನೀಡಲಾಗಿದೆ, ಅದರಲ್ಲಿ ಶ್ರೀಕೃಷ್ಣನ ಲೀಲೆಯನ್ನೇ ವರ್ಣಿಸಲಾಗುತ್ತಿದೆ ಎಂದು ಅನಿಸುತ್ತದೆ. ಈ ಅಧ್ಯಾಯದಲ್ಲಿ ಮೈತ್ರೇಯ ಋಷಿಗಳು ವಿದುರನಿಗೆ ಕಾಲದ ಈ ಮುಂದಿನ ಪರಿಮಾಣವನ್ನು ಹೇಳುತ್ತಾರೆ – ‘ಎರಡು ಪರಮಾಣುಗಳು ಒಂದಾದಾಗ ಒಂದು ಅಣು ತಯಾರಾಗುತ್ತದೆ. ಮೂರು ಅಣುಗಳು ಒಂದಾದಾಗ ಒಂದು ತ್ರಸರೇಣು ತಯಾರಾಗುತ್ತದೆ. ತ್ರಸರೇಣು ಅಂದರೆ ಯಾವುದಾದರೊಂದು ಕಿಂಡಿಯಿಂದ ಬರುವ ಸೂರ್ಯಕಿರಣದ ಪ್ರಕಾಶದಲ್ಲಿ ಹಾರಾಡುವ ಕಣಗಳು, ಇಂತಹ ಮೂರು ತ್ರಸರೇಣುಗಳನ್ನು ದಾಟಲು ಸೂರ್ಯಕಿರಣಕ್ಕೆ ಎಷ್ಟು ಸಮಯ ತಗಲುತ್ತದೆಯೋ, ಅದಕ್ಕೆ ತ್ರುಟಿ ಎನ್ನುತ್ತಾರೆ. ಅದಕ್ಕೆ ೧೦೦ ರಿಂದ ಗುಣಿಸಿದಾಗ ಬರುವ ಸಮಯಕ್ಕೆ ವೇಧವೆನ್ನುತ್ತಾರೆ. ಮೂರು ವೇಧಗಳೆಂದರೆ ಒಂದು ಲವ. ಮೂರು ಲವಗಳೆಂದರೆ ಒಂದು ನಿಮಿಷ. ಮೂರು ನಿಮಿಷಗಳೆಂದರೆ ಒಂದು ಕ್ಷಣ, ಐದು ಕ್ಷಣಗಳೆಂದರೆ ಒಂದು ಕಾಷ್ಠಾ. ೧೫ ಕಾಷ್ಠಾಗಳೆಂದರೆ ಒಂದು ಲಘು. ೧೫ ಲಘುಗಳೆಂದರೆ ಒಂದು ನಾಡಿಕಾ. ಎರಡು ನಾಡಿಕಾಗಳೆಂದರೆ ಒಂದು ಮುಹೂರ್ತ. ಆರು ಅಥವಾ ಏಳು ನಾಡಿಕಾಗಳೆಂದರೆ ಒಂದು ಪ್ರಹರ. ಒಂದು ದಿನ ಅಥವಾ ರಾತ್ರಿಯಲ್ಲಿ ೪ ಪ್ರಹರಗಳಿರುತ್ತವೆ. ೧೫ ದಿನಗಳ ಒಂದು ಪಕ್ಷ ಮತ್ತು ಎರಡು ಪಕ್ಷಗಳ ಒಂದು ಮಾಸ (ತಿಂಗಳು) ಆಗುತ್ತದೆ. (ಪಿತೃಗಳ ೧ ಮಾಸವೆಂದರೆ ಒಂದು ದಿನ ಮತ್ತು ಒಂದು ರಾತ್ರಿ) ಎರಡು ಮಾಸಗಳ ಒಂದು ಋತು ಮತ್ತು ಆರು ಮಾಸಗಳ ಒಂದು ಆಯನವಾಗುತ್ತದೆ. ಎರಡು ಆಯನ (ಉತ್ತರಾಯಣ ಮತ್ತು ದಕ್ಷಿಣಾಯನ)ಗಳು ಕೂಡಿ ಒಂದು ವರ್ಷವಾಗುತ್ತದೆ. (ಮಾನವನ ಒಂದು ವರ್ಷವೆಂದರೆ ದೇವತೆಗಳ ಒಂದು ಹಗಲು ಮತ್ತು ಒಂದು ರಾತ್ರಿ.)

ಮಾನವನ ೪೩ ಲಕ್ಷ ೨೦ ಸಾವಿರ ವರ್ಷಗಳೆಂದರೆ ದೇವತೆಗಳ ೧೨ ಸಾವಿರ ವರ್ಷಗಳು, ಅಂದರೆ ಒಂದು ಚತುರ್ಯುಗ. ಇದರಲ್ಲಿ ಸತ್ಯಯುಗದ ೪ ಸಾವಿರ, ತ್ರೇತಾಯುಗದ ೩ ಸಾವಿರ, ದ್ವಾಪರಯುಗದ ೨ ಸಾವಿರ ಮತ್ತು ಕಲಿಯುಗದ ೧ ಸಾವಿರ ವರ್ಷ ಮತ್ತು ಪ್ರತಿಯೊಂದು ಯುಗದ ಮೊದಲು ಮತ್ತು ನಂತರ ಬರುವ ಸಂಧಿಕಾಲದ ಕೆಲವು ವರ್ಷಗಳಿರುತ್ತವೆ.’

– ಡಾ. ಮುರಲೀ ಮನೋಹರ ಜೋಶಿ, ಹಿರಿಯ ನೇತಾರರು ಭಾಜಪ ಮತ್ತು ಮಾಜಿ ಕೇಂದ್ರೀಯ ಸಚಿವರು

ಹಿಂದೂ ಸಂಸ್ಕೃತಿಯ ಪ್ರಾಚೀನತೆ !

೨೦೨೩ ನೇ ಇಸವಿಯ ಯುಗಾದಿಯಂದು ಹಿಂದೂ ಧರ್ಮದ ಕಾಲಗಣನೆಗನುಸಾರ ೧೫ ನಿಖರ್ವ, ೫೫ ಖರ್ವ, ೨೧ ಅಬ್ಜ, ೯೬ ಕೋಟಿ ೮ ಲಕ್ಷ ೫೩ ಸಾವಿರದ ೧೨೫ ನೇ ವರ್ಷ ಆರಂಭವಾಗುತ್ತ್ತದೆ.

ಟಿಪ್ಪಣಿ : ೧ ಖರ್ವವೆಂದರೆ ೧೦,೦೦,೦೦,೦೦,೦೦೦ ವರ್ಷಗಳು (ಒಂದು ನೂರು ಸಾವಿರ ಲಕ್ಷ ವರ್ಷಗಳು ಅಥವಾ ಲಕ್ಷ ಲಕ್ಷ ವರ್ಷಗಳು), ಮತ್ತು ೧ ನಿಖರ್ವ ಎಂದರೆ ೧,೦೦,೦೦,೦೦,೦೦,೦೦೦ ವರ್ಷಗಳು (೧೦ ಸಾವಿರ ಕೋಟಿ ವರ್ಷಗಳು)