ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ !

ಮಹಿಳೆಯರಿಗೆ ಮಸೀದಿಯಲ್ಲಿ ನಮಾಜ್‌ಗೆ ಅವಕಾಶ !

ನವ ದೆಹಲಿ – ಮುಸಲ್ಮಾನ ಮಹಿಳೆಯರಿಗೆ ಇಚ್ಛೆಯಿದ್ದರೆ, ಅವರು ಮಸೀದಿಗೆ ಹೋಗಿ ನಮಾಜ್ ಮಾಡಬಹುದು. ಇಸ್ಲಾಂನಲ್ಲಿ ಮಹಿಳೆಯರಿಗೆ ಮಸೀದಿಯಲ್ಲಿ ನಮಾಜ್ ಮಾಡಲು ಯಾವುದೇ ನಿರ್ಬಂಧವಿಲ್ಲ; ಆದರೆ ಅವರು ಪುರುಷರ ನಡುವೆ ಅಥವಾ ಅವರ ಜೊತೆಗೆ ಮಸೀದಿಯಲ್ಲಿ ಕುಳಿತುಕೊಳ್ಳಬಾರದು. ಯಾವುದೇ ಮಸೀದಿಯಲ್ಲಿ ಅಲ್ಲಿನ ವ್ಯವಸ್ಥಾಪನೆ ಮಹಿಳೆಯರಿಗೆ ಬೇರೆಯೆ ಸ್ಥಳವನ್ನು ನಿರ್ಧರಿಸಿದ್ದರೆ, ಮಹಿಳೆಯರು ಅಲ್ಲಿಗೆ ಹೋಗಬಹುದು, ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರವನ್ನು ನೀಡಿದೆ. ಪುಣೆಯಲ್ಲಿನ ನ್ಯಾಯವಾದಿ ಫರಹಾ ಅನ್ವರ್ ಹುಸೈನ್ ಶೇಖ್ ಇವರು ೨೦೨೦ ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಿ ಅದರಲ್ಲಿ ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧ ಅನಧಿಕೃತವೆಂದು ಘೋಷಿಸಬೇಕೆಂದು ವಿನಂತಿಸಿದ್ದರು. ಅದಕ್ಕೆ ನ್ಯಾಯಾಲಯವು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಲು ಆದೇಶ ನೀಡಿತ್ತು. ಅದಕ್ಕನುಸಾರ ಬೋರ್ಡ್ ಈ ಮೇಲಿನ ಮಾಹಿತಿ ನೀಡಿದೆ.

ಅರ್ಜಿಯಲ್ಲಿ, ಇಸ್ಲಾಂನ ಪವಿತ್ರ ಗ್ರಂಥ ಕುರಾನ್‌ನಲ್ಲಿ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶವಿಲ್ಲವೆಂಬ ಯಾವುದೇ ಉಲ್ಲೇಖವಿಲ್ಲ. ಈ ನಿರ್ಬಂಧದಿಂದ ಮುಸಲ್ಮಾನ ಮಹಿಳೆಯರ ಸಂವಿಧಾನಾತ್ಮಕ ಅಧಿಕಾರದ ಉಲ್ಲಂಘನೆ ಸಹಿತ ಅವರಿಗೆ ಘನತೆಯಿಂದ ಬದಕುವ ಅಧಿಕಾರದ ಉಲ್ಲಂಘನೆಯೂ ಅಗುತ್ತದೆ. ಮಕ್ಕಾ ಮತ್ತು ಮದಿನಾದಲ್ಲಿ ಮಹಿಳಾ ಭಕ್ತರು ಅವರ ಕುಟುಂಬದ ಜೊತೆಗೆ ಹಜ್ ಯಾತ್ರೆ ಮಾಡುತ್ತಾರೆ ಎಂದು ದವೆ ಮಾಡಿದೆ.

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪ್ರಮಾಣಪತ್ರದಲ್ಲಿ ಮಂಡಿಸಿದ ಅಂಶ

೧. ಮಹಿಳೆಯರು ನಮಾಜ್‌ಗಾಗಿ ಮಸೀದಿಗೆ ಹೋಗಬೇಕೇ ಅಥವಾ ಬೇಡ ಎಂಬುದನ್ನು ಅವರೇ ನಿರ್ಧರಿಸಬೇಕು. ಮುಸಲ್ಮಾನ ಮಹಿಳೆಯರಿಗೆ ೫ ಸಲ ನಮಾಜ್ ಅಥವಾ ಶುಕ್ರವಾರದ ನಮಾಜ್ ಮಾಡದಂತೆ ಯಾವುದೇ ನಿರ್ಭಂಧವಿಲ್ಲ. ಮಹಿಳೆಯರು ಮನೆಯಲ್ಲಿ ಅಥವಾ ಮಸೀದಿಯಲ್ಲಿ ನಮಾಜ್ ಮಾಡಿದರೆ ಅವರಿಗೆ ಸಮಾನ ಪುಣ್ಯ ಸಿಗುವುದು; ಆದರೆ ಪರುಷರಿಗೆ ಹಾಗಿಲ್ಲ. ಅವರು ಮಸೀದಿಯಲ್ಲೇ ನಮಾಜ್ ಮಾಡಬೇಕೆಂಬ ನಿಯಮವಿದೆ.

೨. ಬೋರ್ಡ್ ತಜ್ಞರ ಸಂಸ್ಥೆಯಾಗಿದೆ. ಅದು ಇಸ್ಲಾಂನ ಸಿದ್ಧಾಂತಕ್ಕನುಸಾರ ಸಲಹೆ ನೀಡುತ್ತದೆ; ಆದರೆ ಅದು ಯಾವುದೇ ಧಾರ್ಮಿಕ ಮನ್ನಣೆಗೆ ಪ್ರತಿಕ್ರಿಯೆ ನೀಡುವುದಿಲ್ಲ.

೩. ಮಕ್ಕಾ ಅಥವಾ ಮದಿನಾದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಬೇರೆ ಬೇರೆ ವ್ಯವಸ್ಥೆ ಇದೆ. ಮಹಿಳೆ ಮತ್ತು ಪುರುಷರನ್ನು ದೂರವಿಡಲು ಇಸ್ಲಾಮೀ ಧರ್ಮಗ್ರಂಥದಲ್ಲಿ ನಮೂದಿಸಿದ ಒಂದು ಧಾರ್ಮಿಕ ಅವಶ್ಯಕತೆಯಿತ್ತು. ಅದನ್ನು ರದ್ದುಪಡಿಸಲು ಸಾಧ್ಯವಿಲ್ಲ. ಮಕ್ಕಾ ಮತ್ತು ಮದಿನಾದ ವಿಷಯದಲ್ಲಿ ಅರ್ಜಿದಾರರ ನಿಲುವು ಸಂಪೂರ್ಣ ತಪ್ಪು ಹಾಗೂ ದಾರಿತಪ್ಪಿಸುವುದಾಗಿದೆ. ಮಕ್ಕಾದ ವಿಷಯದಲ್ಲಿ ಅಲ್ಲಿ ಪುರುಷ ಮತ್ತು ಮಹಿಳೆ ಇಬ್ಬರಲ್ಲಿ ಅಂತರವಿಡುವ ಸಲಹೆ ನೀಡಲಾಗುತ್ತದೆ. ಅಲ್ಲಿ ಪುರುಷ ಮತ್ತು ಮಹಿಳೆ ಬೇರೆ ಬೇರೆ ಗುಂಪಿನಲ್ಲಿ ಹೋಗುತ್ತಾರೆ.

೪. ಭಾರತದಲ್ಲಿ ಮಸೀದಿ ಸಮಿತಿಗಳು ಮಹಿಳೆಯರಿಗೆ ಸ್ವತಂತ್ರ ಸ್ಥಳ ನಿರ್ಮಾಣ ಮಾಡಲು ಸ್ವತಂತ್ರರಾಗಿದ್ದಾರೆ. ಮುಸಲ್ಮಾನ ಸಮೂಹವೂ ಹೊಸ ಮಸೀದಿ ನಿರ್ಮಿಸುವಾಗ ಮಹಿಳೆಯರಿಗಾಗಿ ಸ್ಥಳದ ವ್ಯವಸ್ಥೆ ಮಾಡುವ ವಿಚಾರ ಮಾಡಬೇಕು.