ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿ ವರ್ಷ ಎಳ್ಳಮಾವಾಸ್ಯೆ ಉತ್ಸವವು ಅತೀ ವಿಜೃಂಭಣೆಯಿಂದ ನಡೆಯುತ್ತದೆ. ಈ ವರ್ಷ ಡಿಸೆಂಬರ್ ೨೩ ರಂದು ಎಳ್ಳಮಾವಾಸ್ಯೆ ಉತ್ಸವ ಮತ್ತು ೨೪ ರಂದು ರಥೋತ್ಸವ ಹಾಗೂ ಡಿಸೆಂಬರ್ ೨೫ ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರುಲೇಖನವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
ಪರಶುರಾಮನು ಮಾತೃಹತ್ಯಾ ದೋಷವನ್ನು ತೊಳೆದ ಕ್ಷೇತ್ರ
`ಗಂಗಾ ಸ್ನಾನ ತುಂಗಾ ಪಾನ’ ಎನ್ನುವುದು ಜನಜನಿತ ನಾಣ್ನುಡಿ. ಗಂಗಾಮೂಲದಲ್ಲಿ ಹುಟ್ಟಿ ಹರಿದ್ವರ್ಣದ ದಟ್ಟಕಾಡುಗಳ ಸಾರವನ್ನು ಹೀರಿ ಮಲೆನಾಡಿಗರಿಗೆ ಸಿಹಿ ನೀರಿನ ಅಮೃತಪಾನ ಮಾಡುವ ತುಂಗೆ ರಸಗಂಗೆ ಆಗಿದ್ದಾಳೆ. ಪರಶುರಾಮನ ಕೊಡಲಿಗೆ ತಗಲಿದ ಮಾತೃಹತ್ಯಾ ದೋಷವನ್ನು ತೊಳೆದ ಮಂಗಳತರಂಗೆ ಮಂಗಳಾಂಗೆ ! ಈ ತುಂಗೆಯು ಆಗುಂಬೆಯ ಘಟ್ಟವನ್ನು ದಾಟಿ ಮುಂದೆ ಸಾಗಿ ತೀರ್ಥಹಳ್ಳಿಯಲ್ಲಿ ಹರಿಯುತ್ತಾಳೆ. ಇಲ್ಲಿ ಪರಶು ರಾಮನು ತನ್ನ ಮಾತೃಹತ್ಯಾದೋಷದಿಂದ ಮುಕ್ತನಾದನೆಂಬ ಪ್ರತೀತಿ ಇದೆ.
ಸ್ಕಂದ ಪುರಾಣದ ಕತೆ
ಭೃಗುಮುನಿಯ ವಂಶಜ ಜಮದಗ್ನಿಯು ಪತ್ನಿ ರೇಣುಕಾ ದೇವಿಯೊಂದಿಗೆ ಯಜ್ಞಯಾಗಾದಿಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದನು. ಪತಿವ್ರತೆಯಾದ ರೇಣುಕಾ ದೇವಿಯು ಒಮ್ಮೆ ನೀರು ತರಲು ಸರೋವರಕ್ಕೆ ಹೋದಾಗ ಓರ್ವ ಗಂಧರ್ವನನ್ನು ನೋಡಿ ಅರೆಕ್ಷಣ ವಿಚಲಿತಳಾದಳು. (ಆದುದರಿಂದ ಅಂದು ಮರಳಿನಿಂದ ಮಡಕೆಯನ್ನು ಮಾಡಲು ಅಸಮರ್ಥಳಾದಳು.) ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದುಕೊಂಡ ಜಮದಗ್ನಿಯು ಕ್ರೋಧಿತನಾಗಿ ಆಕೆಗೆ ಶಿಕ್ಷೆ ನೀಡಲು ತನ್ನ ಮಕ್ಕಳನ್ನು ಕರೆದನು.
ಅವರು ಮಾತೃಹತ್ಯೆಗೆ ಒಪ್ಪದಿದ್ದಾಗ ಜಮದಗ್ನಿಯು ಅವರಿಗೆ ಶಾಪ ನೀಡಿದನು ಮತ್ತು ಪರಶುರಾಮನಿಗೆ ಮಾತೃಹತ್ಯೆಗೆ ಆಜ್ಞಾಪಿಸಿದನು. ತಂದೆಯ ಆಜ್ಞೆಯಂತೆ ಪರಶುರಾಮನು ತಾಯಿಯ ಶಿರಚ್ಛೇದ ಮಾಡಿದನು. ಪಿತೃಭಕ್ತಿಗೆ ಮೆಚ್ಚಿದ ಜಮದಗ್ನಿಯು ವರವನ್ನು ಕೇಳು ಎಂದಾಗ ಪರಶುರಾಮನು ಮಾತೆಯನ್ನು ಬದುಕಿಸು, ಅಣ್ಣಂದಿರನ್ನು ಶಾಪ ಮುಕ್ತಗೊಳಿಸು ಎಂಬ ವರವನ್ನು ಬೇಡಿ ಮಾತೆಯನ್ನು ಬದುಕಿಸಿದನು. ಆದರೂ ಪರಶುವಿಗೆ (ಕೊಡಲಿಗೆ) ತಗಲಿದ ಮಾತೃಹತ್ಯಾ ದೋಷವು ತೀರ್ಥಯಾತ್ರೆಯಿಂದಲೂ ಹೋಗಲಿಲ್ಲ. ಮಾರ್ಗಶಿರ ಅಮಾವಾಸ್ಯೆಯಂದು ತೀರ್ಥಹಳ್ಳಿಗೆ ಬಂದು ತುಂಗೆಯ ತೀರ್ಥದಲ್ಲಿ ಕೊಡಲಿಯನ್ನು ತೊಳೆದನು. ಎಳ್ಳಿನಷ್ಟಿದ್ದ ಕಲೆಯೂ ತುಂಗೆ ನೀರಿನಿಂದ ತೊಳೆದು ಹೋಯಿತು. ಪರಶುರಾಮನು ಮಾತೃಹತ್ಯಾ ದೋಷದಿಂದ ಮುಕ್ತನಾದನು. ಅಂದಿನಿಂದ ಇಲ್ಲಿ ಎಳ್ಳಮಾವಾಸ್ಯೆಯಂದು ಪ್ರಾತಃಕಾಲದಲ್ಲಿ ಭಕ್ತರು ಮಾರ್ಗಶಿರದ ಚಳಿಗೆ ತೀರ್ಥಸ್ನಾನ ಮಾಡಿ ರಾಮೇಶ್ವರನ ದರ್ಶನ ಪಡೆಯುತ್ತಾರೆ. ಪಾಡ್ಯದಂದು ರಾಮೇಶ್ವರನಿಗೆ ರಥೋತ್ಸವ, ಬಿದಿಗೆಯಂದು ತುಂಗಾನದಿಯಲ್ಲಿ ತೆಪ್ಪೋತ್ಸವ ಜರುಗುತ್ತದೆ.
ತುಂಗೆಯ ಒಡಲಿನ ಪಂಚತೀರ್ಥಗಳು
ಚಕ್ರತೀರ್ಥ, ಶಂಖತೀರ್ಥ, ಗದಾತೀರ್ಥ ಮತ್ತು ಗಂಗಾತೀರ್ಥ ಎಂಬ ನಾಲ್ಕು ತೀರ್ಥ ಗಳು ತುಂಗೆಯ ಒಡಲಿನಲ್ಲಿ ಸೇರಿ ಪಂಚ ತೀರ್ಥಗಳಾಗುತ್ತವೆ. ರಾಮನು ತನ್ನ ವನವಾಸದ ಕಾಲದಲ್ಲಿ ಸೀತೆ ಮತ್ತು ಲಕ್ಷಣರೊಂದಿಗೆ ಬಂದು ತುಂಗಾಸ್ನಾನ ಮಾಡಿದನೆಂಬ ನಂಬಿಕೆಯಿದೆ. ಅದರ ಪ್ರತೀಕವಾಗಿ ಬಂಡೆಯೊಂದರ ಮೇಲೆ ಸೀರೆಯಾಕಾರದಲ್ಲಿರುವ ಆಕೃತಿಯಿದೆ. ಪಂಚಪಾಂಡವರು ತಾಯಿ ಕುಂತಿಯೊಂದಿಗೆ ತುಂಗೆಯ ದರ್ಶನ ಮಾಡಿದರು ಎನ್ನುವ ಪ್ರತೀತಿಯಿದೆ. ಭೀಮನ ಬಟ್ಟಲು ಎಂಬ ಬಟ್ಟಲಾಕಾರದ ಬಂಡೆಕಲ್ಲನ್ನು ಇಲ್ಲಿ ನೋಡಬಹುದು.
ಚಕ್ರತೀರ್ಥ ಮತ್ತು ರಾಮತೀರ್ಥ
ಚಕ್ರತೀರ್ಥ ಮತ್ತು ರಾಮತೀರ್ಥಗಳ ನಡುವೆ ಜೋಗಿಗುಡ್ಡೆ ಇದೆ. ಬಂಡೆಯ ನಡುವೆ ದೊಡ್ಡ ಗುಹೆಯಿದೆ. ಬೆಳಕಿನ ಸಹಾಯದಿಂದ ಒಳಹೊಕ್ಕರೆ ಬಂಡೆಯ ಮೇಲೆ ಕೆತ್ತನೆಗಳನ್ನು ಕಾಣಬಹುದು. ಜೈನರ ಕಾಲದಲ್ಲಿ ಜೋಗಿಗಳು ಧ್ಯಾನ ಮಾಡಲು ಬಳಸುತ್ತಿದ್ದರೆಂಬ ನಂಬಿಕೆಯಿದೆ.
ಬನ್ನಿರಿ ತೀರ್ಥಹಳ್ಳಿಗೆ, ಶ್ರೀರಾಮತೀರ್ಥಕ್ಕೆ, ಸೇವೆ ಮಾಡಿ ಪಾವನರಾಗಿರಿ. (ಸಂಗ್ರಹ : ಶ್ರೀ. ಪ್ರಭಾಕರ ಪಡಿಯಾರ್, ತೀರ್ಥಹಳ್ಳಿ.)