ಕೊರೊನಾ ಲಸಿಕೆಯಿಂದ ಮೃತಪಟ್ಟರೆ ಕೇಂದ್ರ ಸರಕಾರ ಹೊಣೆ ಅಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ

ನವ ದೆಹಲಿ – ನಮಗೆ ಮೃತ ವ್ಯಕ್ತಿ ಮತ್ತು ಅವರ ಕುಟುಂಬದವರ ವಿಷಯದಲ್ಲಿ ಸಂಪೂರ್ಣ ಸಹಾನುಭೂತಿಯಿದೆ; ಆದರೆ ಲಸಿಕೆಯನ್ನು ಪಡೆದ ಬಳಿಕ ವ್ಯಕ್ತಿಯ ಮೇಲಾಗಿರುವ ಯಾವುದೇ ವಿಪರೀತ ಪರಿಣಾಮಕ್ಕಾಗಿ ನಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರವನ್ನು ಮಂಡಿಸಿದೆ. ಕಳೆದ ವರ್ಷ ಕೊರೊನಾ ಲಸೀಕರಣದ ಬಳಿಕ 2 ಬಾಲಕಿಯರು ಮೃತ ಪಟ್ಟಿದ್ದರು. ಈ ವಿಷಯದಲ್ಲಿ ಈ ಬಾಲಕಿಯರ ಪೋಷಕರು ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅವರು ಕೊರೊನಾ ಲಸೀಕರಣದಿಂದ ಆಗಿರುವ ಈ ಸಾವಿನ ಬಗ್ಗೆ ಸ್ವತಂತ್ರವಾಗಿ ವಿಚಾರಣೆ ನಡೆಸುವಂತೆ ಕೋರಿದ್ದರು. ಅದರೊಂದಿಗೆ ಲಸೀಕರಣದ ಬಳಿಕ ಆಗುವ ದುಷ್ಪರಿಣಾಮವನ್ನು ಸೂಕ್ತ ಸಮಯದಲ್ಲಿ ಕಂಡು ಹಿಡಿದು ಅದರ ಮೇಲೆ ಉಪಾಯ ಯೋಜನೆಯನ್ನು ಮಾಡಲು ತಜ್ಞರ ಸಮಿತಿಯನ್ನು ರಚಿಸುವಂತೆ ಆದೇಶ ನೀಡುವಂತೆ ಕೋರಿದ್ದರು. ಇದಕ್ಕೆ ನ್ಯಾಯಾಲಯವು ಕೇಂದ್ರ ಸರಕಾರದಿಂದ ಉತ್ತರವನ್ನು ಕೋರಿತ್ತು.

ಆರೋಗ್ಯ ಸಚಿವಾಲಯವು ಅರ್ಜಿದಾರರ ನಷ್ಟಪರಿಹಾರದ ಕೋರಿಕೆಯನ್ನು ತಿರಸ್ಕರಿಸುತ್ತಾ, ಲಸೀಕರಣದ ದುಷ್ಪರಿಣಾಮದಿಂದ ಯಾವುದಾದರೂ ವ್ಯಕ್ತಿಗೆ ಶಾರೀರಿಕ ಹಾನಿಯಾದರೆ ಅಥವಾ ಆ ವ್ಯಕ್ತಿ ಮೃತಪಟ್ಟರೆ, ಕಾನೂನಿಗೆ ಅನುಗುಣವಾಗಿ ಅವನು ಅಥವಾ ಅವನ ಕುಟುಂಬದವರು ನಷ್ಟ ಪರಿಹಾರಕ್ಕಾಗಿ ದಿವಾಣಿ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು. ನಿರ್ಲಕ್ಷದ ಕುರಿತು ಹೀಗೆ ಪ್ರತಿಯೊಂದು ಪ್ರಕರಣವನ್ನು ಅದರ ಆಧಾರದಲ್ಲಿ ದಾಖಲಿಸಬಹುದಾಗಿದೆ.