ಗುಜರಾತದಲ್ಲಿ ದೀಪಾವಳಿ ಕಾಲದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾವುದೇ ದಂಡವಿಲ್ಲ ! – ಗುಜರಾತ ಗೃಹ ಸಚಿವರ ಘೋಷಣೆ

ಕರ್ಣಾವತಿ (ಗುಜರಾತ) – ಅಕ್ಟೋಬರ್ ೨೧ ರಿಂದ ಅಕ್ಟೋಬರ್ ೨೭ ರವರೆಗೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನಿಮ್ಮಿಂದ ಯಾವುದೇ ದಂಡವನ್ನೂ ವಸೂಲಿ ಮಾಡಲಾಗುವುದಿಲ್ಲ. ಸ್ವತಃ ಮುಖ್ಯಮಂತ್ರಿಯವರ ಒಪ್ಪಿಗೆ ಮೇರೆಗೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ; ಆದರೆ ನೀವು ಸಂಚಾರ ನಿಯಮಗಳನ್ನು ಅನುಸರಿಸಬೇಕಾಗಿಲ್ಲ ಎಂದು ಇದರ ಅರ್ಥವಲ್ಲ. ನೀವು ತಪ್ಪು ಮಾಡಿದರೆ, ನಿಯಮಗಳನ್ನು ಉಲ್ಲಂಘಿಸಿದರೆ ದಂಡ ತುಂಬಿಸಬೇಕಾಗಿಲ್ಲ ಎಂದು ಗುಜರಾತ ಗೃಹ ಸಚಿವ ಹರ್ಷ ಸಿಂಘವಿ ಘೋಷಿಸಿದರು. ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಗುಜರಾತನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದಲೇ ಭಾಜಪ ಸರಕಾರ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

೧. ಗುಜರಾತದಲ್ಲಿ ಮದ್ಯ ನಿಷೇಧವಿದೆ. ಅಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಹತ್ತು ಸಾವಿರ ರೂಪಾಯಿ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ ಇಪ್ಪತ್ತೈದು ಸಾವಿರ ರೂಪಾಯಿ ದಂಡ ಅಥವಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಿಗ್ನಲ್ ಮುರಿದರೆ ಒಂದು ಸಾವಿರದಿಂದ ಐದು ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ನಿಬಂಧನೆ ಇದೆ.

೨. ರಾಜ್ಯದಲ್ಲಿನ ಭಾಜಪ ಸರಕಾರವು ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ ಎಂದು ರಾಷ್ಟ್ರೀಯ ಲೋಕ ದಳದ ಮುಖ್ಯಸ್ಥ ಜಯಂತಸಿಂಹ ಚೌಧರಿ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಚುನಾವಣೆ ಘೋಷಣೆಗೆ ವಿಳಂಬ ಮಾಡುತ್ತಿದೆ; ಏಕೆಂದರೆ ಸರಕಾರ ಅಂತಹ ಘೋಷಣೆಗಳನ್ನು ಮಾಡಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಸಂಚಾರ ನಿಯಮಗಳು ಸಾರ್ವಜನಿಕರ ಮತ್ತು ವಾಹನಗಳ ಸುರಕ್ಷೆಗಾಗಿ ಇರುತ್ತವೆ. ‘ಹಬ್ಬಗಳ ಸಮಯದಲ್ಲಿ ದಂಡವನ್ನು ಮನ್ನಾ ಮಾಡುವುದರಿಂದ ಅಪಘಾತಗಳಾಗುವ ಸಾಧ್ಯತೆಯು ಹೆಚ್ಚಾಗಬಹುದು ಮತ್ತು ಜನರು ಪ್ರಾಣ ಕಳೆದುಕೊಳ್ಳಬಹುದು’, ಎಂಬುದರ ವಿಚಾರ ಯಾರು ಮಾಡುವರು ?