ಅಕ್ಟೋಬರ್ ೧೧ ರಂದು ಜ್ಞಾನವಾಪಿಯಲ್ಲಿನ ಶಿವಲಿಂಗದ ‘ಕಾರ್ಬನ್ ಡೇಟಿಂಗ್’ ಪರೀಕ್ಷೆಯ ವಿಚಾರಣೆ !

(ಕಾರ್ಬನ್ ಡೇಟಿಂಗ್ ಪರೀಕ್ಷೆ ಎಂದರೆ ಯಾವುದೇ ಒಂದು ವಸ್ತುವಿನ ವಯಸ್ಸನ್ನು ಅಳೆಯುವುದು)

ವಾರಣಾಸಿ (ಉತ್ತರಪ್ರದೇಶ) – ಇಲ್ಲಿನ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಸಂಬಂಧಿಸಿದ ಬೇಡಿಕೆಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವು ಅಕ್ಟೋಬರ್ ೧೧ ಕ್ಕೆ ಮುಂದೂಡಿದೆ. ಮುಸಲ್ಮಾನ ಪಕ್ಷವು ಬಗೆಗಿನ ತನ್ನ ಪರವನ್ನು ಪ್ರಸ್ತುತಪಡಿಸಿದ ನಂತರ ನ್ಯಾಯಾಲಯವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತ್ತೊಂದೆಡೆ, ಕಾರ್ಬನ್ ಡೇಟಿಂಗ್‌ನ ಕುರಿತು ಹಿಂದೂ ಪಕ್ಷಗಳ ನಡುವೆ ಎರಡು ಒಡಕು ನಿರ್ಮಾಣವಾಗಿವೆ. ೫ ಮಹಿಳಾ ಪಕ್ಷದ ಸದಸ್ಯರಲ್ಲಿ, ರಾಖಿ ಸಿಂಗ್ ಇವರು ಕಾರ್ಬನ್ ಡೇಟಿಂಗ್ ಅನ್ನು ವಿರೋಧಿಸಿದ್ದಾರೆ. ಕಾರ್ಬನ್ ಡೇಟಿಂಗ್ ಪರೀಕ್ಷೆಯ ಮೂಲಕ, ಶಿವಲಿಂಗವು ಎಷ್ಟು ಪ್ರಾಚೀನವಾಗಿದೆ, ಅದರ ಆಯುಷ್ಯ ಎಷ್ಟು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಅದರ ಆಧಾರದ ಮೇಲೆ ಜ್ಞಾನವಾಪಿ ಮೇಲಿನ ಹಿಂದೂಗಳ ಹಕ್ಕು ಪ್ರಬಲಗೊಳ್ಳುವ ಸಾಧ್ಯತೆಯಿದೆ.

ರಾಖಿ ಸಿಂಗ್ ಅವರ ನ್ಯಾಯವಾದಿ ಮನ ಬಹದ್ದೂರ್ ಸಿಂಗ್ ಇವರು, ‘ಕಾರ್ಬನ್ ಡೇಟಿಂಗ್‌ನಿಂದಾಗಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗವು ಭಗ್ನವಾಗುವುದು. ನಮ್ಮ ಸನಾತನ ಹಿಂದು ಧರ್ಮದಲ್ಲಿ ಭಗ್ನವಾಗಿರುವ ವಿಗ್ರಹಗಳನ್ನು ಪೂಜಿಸುವುದಿಲ್ಲ. ಆದ್ದರಿಂದ ಶಿವಲಿಂಗದ ಕಾರ್ಬನ್ ಡೇಟಿಂಗ್ ಮಾಡಲೇಬಾರದು’ ಎಂದು ಹೇಳಿದರು. ಇತರ ೪ ಮಹಿಳಾ ಪಕ್ಷಗಳ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರ ಪ್ರಕಾರ, ಕಾರ್ಬನ್ ಡೇಟಿಂಗ್ ಮಾಡುವಾಗ ಜ್ಞಾನವಾಪಿಯನ್ನು ಮುಟ್ಟುವ ಅಗತ್ಯವೇ ಇಲ್ಲ. ಈ ಪರೀಕ್ಷೆಯನ್ನು ಅದನ್ನು ಸ್ಪರ್ಶಿಸದೆಯೂ ಮಾಡಬಹುದಾಗಿದೆ ಎಂದು ಹೇಳಿದರು.