ಪೋಪ್ ಫ್ರಾನ್ಸಿಸ್ ಅವರಿಂದ ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಯುದ್ಧ ನಿಲ್ಲಿಸಲು ಕರೆ !

ವ್ಯಾಟಿಕನ್ ಸಿಟಿ – ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ಇವರು ಮತ್ತೊಮ್ಮೆ ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಅವರು ಇಲ್ಲಿ ಪ್ರಾರ್ಥನೆಗೂ ಮುನ್ನ ನಡೆದ ಭಾಷಣದಲ್ಲಿ ಮಾತನಾಡುತ್ತಿದ್ದರು.

ಪೋಪ್ ಫ್ರಾನ್ಸಿಸ್ ಮಾತನಾಡುತ್ತಾ, ಈ ಯುದ್ಧವು ಈಗ ಗಂಭೀರ, ವಿನಾಶಕಾರಿ ಮತ್ತು ಅಪಾಯಕಾರಿಯಾಗಿದೆ, ಇದರ ಪರಿಣಾಮವು ಕೇವಲ ಈ ದೇಶಗಳಿಗೆ ಸೀಮಿತವಾಗಿರದೆ ಇಡೀ ವಿಶ್ವದ ಮೇಲೆ ಆಗುತ್ತಿದೆ. ಈ ಪರಿಸ್ಥಿತಿಯು ಪರಮಾಣು ಯುದ್ಧದ ಅಪಾಯವನ್ನೂ ಒಡ್ಡುತ್ತಿದೆ. ಇದರಿಂದ ಪ್ರಪಂಚದಾದ್ಯಂತ ವಿನಾಶಕಾರಿ ಪರಿಣಾಮಗಳು ಆಗುವ ಸಾಧ್ಯತೆಯು ಹೆಚ್ಚುತ್ತದೆ. ‘ಯುದ್ಧವು ಯಾವುದೇ ಸಮಸ್ಯೆಗೆ ಎಂದಿಗೂ ಪರಿಹಾರವಲ್ಲ, ಅದು ವಿನಾಶದೆಡೆಯೇ ಕರೆದೊಯ್ಯುತ್ತದೆ ಎಂಬುದನ್ನು ನಾವು ಎಷ್ಟು ರಕ್ತ ಚೆಲ್ಲಿದ ನಂತರ ಗಮನಕ್ಕೆ ತೆಗೆದುಕೊಳ್ಳುವವರಿದ್ದೇವೆ ?’ ಎಂಬ ಪ್ರಶ್ನೆಯನ್ನು ಅವರು ಕೇಳಿದರು.