ಲಿಂಗಾಯತ ಸಮುದಾಯದ ದೀಕ್ಷೆಯನ್ನು ಪಡೆದ ರಾಹುಲ್ ಗಾಂಧಿ !

ರಾಜ್ಯದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯವನ್ನು ಸೆಳೆಯಲು ಗಾಂಧಿಯ ಪ್ರಯತ್ನ !

ಬೆಂಗಳೂರು – ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ ೩ ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಅಲ್ಲಿನ ಮುರುಘಾ ಮಠಕ್ಕೆ ತೆರಳಿ ಲಿಂಗಾಯತ ಸಮುದಾಯದ ಧರ್ಮಗುರು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾದರು. ಈ ವೇಳೆ ಗಾಂಧಿಯವರು ಲಿಂಗಾಯತ ಸಮುದಾಯದ ‘ಲಿಂಗ ದೀಕ್ಷೆ’ಯನ್ನೂ ಪಡೆದರು. ಈ ಹಿಂದೆ, ಗಾಂಧಿಯವರು ತಮ್ಮನ್ನು ‘ಕಾಶ್ಮೀರಿ ಹಿಂದೂ’, ‘ಬ್ರಾಹ್ಮಣ’ ಮತ್ತು ‘ದತ್ತಾತ್ರೇಯ ಗೋತ್ರದ ಬ್ರಾಹ್ಮಣ’ ಎಂದು ಬಣ್ಣಿಸಿದ್ದರು. ಆದ್ದರಿಂದ, ‘ಇದು ಹಿಂದೂಗಳ ಮತಗಳನ್ನು ಪಡೆಯಲು ಗಾಂಧಿ ನಡೆಸಿದ ರಾಜಕೀಯ ತಂತ್ರವಾಗಿದೆ’, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದೆ.

ಈ ವೇಳೆ ಗಾಂಧಿ, ನಾನು ಲಿಂಗಾಯತ ಸಮುದಾಯದ ಸಂಸ್ಥಾಪಕ ಬಸವಣ್ಣಾರವರ ಬಗ್ಗೆ ಕೆಲ ದಿನಗಳಿಂದ ಅಧ್ಯಯನ ನಡೆಸುತ್ತಿದ್ದೇನೆ. ಹಾಗಾಗಿಯೇ ಚಿತ್ರದುರ್ಗ ಮಠಕ್ಕೆ ಬಂದಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ತಾವು, ‘ಇಷ್ಟಲಿಂಗ’ ಮತ್ತು ’ಶಿವಯೋಗ’ದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವ ವ್ಯಕ್ತಿಯನ್ನು ನನ್ನಲ್ಲಿ ಕಳುಹಿಸಿ ಎಂದು ವಿನಂತಿಸುತ್ತೇನೆ. ಇದರಿಂದ ನನಗೆ ಲಾಭವಾಗುವುದು.

ಕರ್ನಾಟಕದಲ್ಲಿ ಶೇ.೧೮ ಕ್ಕಿಂತ ಹೆಚ್ಚಿದೆ ಲಿಂಗಾಯತ ಸಮುದಾಯ ಸಂಖ್ಯಾಬಲ !

‘ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಲಿಂಗಾಯತ ಸಮುದಾಯ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.೧೮ಕ್ಕಿಂತ ಹೆಚ್ಚು ಸಂಖ್ಯಾಬಲ ಹೊಂದಿದೆ. ಆದ್ದರಿಂದ ಗಾಂಧಿ ಈ ಸುಮದಾಯದವರ ಮತಗಳನ್ನು ಈ ರೀತಿ ಪಡೆಯಲು ಯತ್ನಿಸುತ್ತಿದ್ದಾರೆ’, ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ಚುನಾವಣೆ ಬಂದಾಗ ರಾಹುಲ್ ಗಾಂಧಿಗೆ ಧಾರ್ಮಿಕತೆಯು ನೆನಪಾಗುವುದು ಈ ಹಿಂದೆ ಹಲವು ಬಾರಿ ಕಂಡು ಬಂದಿದೆ ! ಆದರೆ, ಕಾಂಗ್ರೆಸ್‌ನವರು ಎಷ್ಟೇ ಧಾರ್ಮಿಕತೆಯನ್ನು ಬಿಂಬಿಸಿಕೊಂಡರೂ ಕಾಂಗ್ರೆಸ್ಸಿನ ನಿಜಸ್ವರೂಪ ಜನರಿಗೆ ಗೊತ್ತಿದ್ದರಿಂದ ಜನರು ಕಾಂಗ್ರೆಸ್ಸನ್ನು ಆರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ !