ತಮಿಳುನಾಡು ಪೊಲೀಸರಿಂದ ೫೦೦ ವರ್ಷ ಪ್ರಾಚೀನ ವಿಗ್ರಹ ವಶ

ಚೆನ್ನೈ : ಪೊನಾಮಲ್ಲೆ ಪಟ್ಟಣದ ಬಳಿ ೫೦೦ ವರ್ಷಗಳಷ್ಟು ಹಳೆಯದಾದ ಹಸಿರು ಕಲ್ಲಿನಿಂದ ತಯಾರಿಸಿದ ವಿಗ್ರಹವನ್ನು ಪೊಲೀಸರ ‘ವಿಗ್ರಹ ಇಲಾಖೆ’ ವಶಪಡಿಸಿಕೊಂಡಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತವಾಚಲಂ ಮತ್ತು ಬಕಿಯಾರಾಜ ಎಂಬಿಬ್ಬರನ್ನು ಬಂಧಿಸಿದೆ. ಸಂಶೋಧಕರ ಪ್ರಕಾರ, ಪಂಚಮುಖವಿರುವ ಇದು ಶಿವನ ಏಕೈಕ ವಿಗ್ರಹವಾಗಿದೆ. ಈ ವಿಗ್ರಹವು ನೇಪಾಳದ ದೇವಾಲಯದಿಂದ ಬಂದಿದೆ ಎಂದು ನಂಬಲಾಗಿದೆ ಎಂದು ಹೇಳಿದರು.

ಕೆಲವರು ಒಂದು ಪುರಾತನ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರು ಬಲೆ ಬೀಸಿದ್ದರು. ಪುರಾತನ ವಸ್ತುಗಳ ಸಂಗ್ರಾಹಕರಂತೆ ನಟಿಸಿದ ಪೊಲೀಸರು ಶಂಕಿತ ಮಾರಾಟಗಾರರನ್ನು ಸಂಪರ್ಕಿಸಿ ವಿಗ್ರಹದ ಖರೀದಿಗೆ ಬೆಲೆಯನ್ನು ನಿಗದಿಪಡಿಸಿದ ನಂತರ ಶಂಕಿತರು ವಿಗ್ರಹವನ್ನು ತೋರಿಸಲು ಮುಂದಾದರು. ಈ ಬಲೆಯಲ್ಲಿ ವಿಗ್ರಹ ಕಳ್ಳಸಾಗಾಣಿಕೆದಾರರು ಸಿಕ್ಕಿಬಿದ್ದರು. ವಿಗ್ರಹ ಮಾರಾಟದ ಹಿಂದೆ ಬೇರೆಯವರ ಕೈವಾಡವಿದೆ ಎಂದು ಪೊಲೀಸರಿಗೆ ಅನುಮಾನವಿದೆ. ತಮಿಳುನಾಡು ಪೊಲೀಸರ ‘ವಿಗ್ರಹ ವಿಭಾಗ’ ಇದುವರೆಗೆ ರಾಜ್ಯದಲ್ಲಿ ಕಳ್ಳಸಾಗಣೆದಾರರಿಂದ ಹಲವಾರು ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡಿದೆ. ತಮಿಳುನಾಡಿನಿಂದ ವಿದೇಶಗಳಿಗೆ ಮಾರಾಟವಾಗಿದ್ದ ಪುರಾತನ ವಿಗ್ರಹಗಳನ್ನು ಮರಳಿ ತಂದು ಇಲ್ಲಿನ ದೇವಸ್ಥಾನಗಳಲ್ಲಿ ಪುನರ್ ಪ್ರತಿಷ್ಠಾಪಿಸಿದ್ದಾರೆ. (ಇಂತಹ ಪೋಲೀಸರು ಎಲ್ಲೆಡೆ ಬೇಕು ! – ಸಂಪಾದಕರು)