ಅಕ್ಷಯ ತೃತೀಯಾ (ಮೇ ೩)

ಅ. ತಿಥಿ : ‘ವೈಶಾಖ ಶುಕ್ಲ ತೃತೀಯಾ

ಆ. ಮಹತ್ವ

೧. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.

೨. ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.

೩. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

೪. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ)ವಾಗುತ್ತವೆ. (ಆಧಾರ : ‘ಮದನರತ್ನ’)

ಇ. ಅಕ್ಷಯ ತೃತೀಯಾದಂದು ಮಾಡಬೇಕಾದ ಕೃತಿಗಳು

ಇ ೧. ಪವಿತ್ರ ಜಲದಲ್ಲಿ ಸ್ನಾನ : ಈ ದಿನ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಬೇಕು, ಸಾಧ್ಯವಿಲ್ಲದಿದ್ದರೆ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.

ಇ ೨. ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ :

ಅಕ್ಷಯ ತೃತೀಯಾದಂದು ಸತತವಾಗಿ ಸುಖ-ಸಮೃದ್ಧಿಯನ್ನು ಪ್ರಾಪ್ತಮಾಡಿಕೊಡುವ ದೇವರ ಮೇಲೆ ಕೃತಜ್ಞತಾಭಾವವಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವರ ಕೃಪಾದೃಷ್ಟಿ ಎಂದೂ ಕ್ಷಯವಾಗುವುದಿಲ್ಲ. ಈ ದಿನ ಶ್ರೀವಿಷ್ಣು ಸಹಿತ ವೈಭವಲಕ್ಷ್ಮೀಯ ಪ್ರತಿಮೆಯನ್ನು ಕೃತಜ್ಞತಾಭಾವವಿಟ್ಟು ಭಕ್ತಿಭಾವದಿಂದ ಪೂಜಿಸಬೇಕು. ಈ ದಿನವನ್ನು ಹೋಮ ಹವನ, ಜಪ ಮಾಡುತ್ತ ಕಳೆಯಬೇಕು.

ಇ ೨ ಅ. ಅಕ್ಷಯ ತೃತೀಯಾದಂದು ಶ್ರೀವಿಷ್ಣುವಿನ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ವಿಕ ರಂಗೋಲಿಗಳನ್ನು ಬಿಡಿಸಬೇಕು.

ಅಕ್ಷಯ ತದಿಗೆಯಂದು ಮಾಡುವ ದಾನದ ಮಹತ್ವ

ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಹಿಂದಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿಯಾಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ. ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು.

ಮೃತ್ತಿಕಾ ಪೂಜೆ

೧. ಮಹತ್ವ : ‘ಸದೈವ ಕೃಪಾದೃಷ್ಟಿ ಇಡುವ ಮೃತ್ತಿಕೆಯಿಂದಲೇ ನಮಗೆ ಧಾನ್ಯಲಕ್ಷ್ಮಿ, ಧನಲಕ್ಷ್ಮಿ ಮತ್ತು ವೈಭವಲಕ್ಷ್ಮಿಯರ ಪ್ರಾಪ್ತಿಯಾಗುತ್ತದೆ. ಅಕ್ಷಯ ತದಿಗೆಯ ದಿನವೆಂದರೆ ಕೃತಜ್ಞತೆಯ ಭಾವವನ್ನಿಟ್ಟು ಮೃತ್ತಿಕೆಯ ಆರಾಧನೆ ಮಾಡುವ ದಿನ.

೨. ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ : ‘ಯುಗಾದಿಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ.

ವೃಕ್ಷಾರೋಪಣ

ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪನ್ನ ನೀಡುತ್ತದೆ. ಆಯುರ್ವೇದದಲ್ಲಿ ಹೇಳಿದ ಔಷಧಿ ವನಸ್ಪತಿಗಳನ್ನು ಅಕ್ಷಯ ತದಿಗೆಯ ಮುಹೂರ್ತದಲ್ಲಿ ನೆಟ್ಟರೆ ಆ ವನಸ್ಪತಿಗಳು ನಾಶವಾಗುವುದಿಲ್ಲ, ಅಂದರೆ ಔಷಧಿ ವನಸ್ಪತಿಗಳ ಕೊರತೆಯಾಗಲ್ಲ.

ಅರಿಶಿನಕುಂಕುಮ

ಸ್ತ್ರೀಯರಿಗೆ ಈ ದಿನವು ಮಹತ್ವದ್ದಾಗಿರುತ್ತದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಅವರು ವಿಸರ್ಜಿಸಬೇಕಾಗಿರುತ್ತದೆ. ಇದಕ್ಕಾಗಿ ಅವರು ಅರಿಶಿನಕುಂಕುಮದ ಕಾರ್ಯಕ್ರಮವನ್ನು ಮಾಡುತ್ತಾರೆ.

(ಆಧಾರ : ಸನಾತನವು ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ  ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)