ಶಿವಮಂದಿರದ ವೈಶಿಷ್ಟ್ಯಗಳು

೧. ಶಿವನು ದಂಪತಿಸಮೇತ ದೇವರು, ‘ಶಕ್ತಾ  ಸಹಿತಃ ಶಂಭು |’ ಹೀಗಿದೆ. ಶಕ್ತಿಯಿಲ್ಲದಿದ್ದರೆ, ಶಿವನು ಶವನಾಗುತ್ತಾನೆ. ಇತರ ದೇವರು ಒಬ್ಬರೇ ಇರುವುದರಿಂದ ಅವರ ಮೂರ್ತಿಗಳಲ್ಲಿ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ನಿರ್ಮಾಣವಾಗುತ್ತದೆ. ಆದುದರಿಂದ ಅವರ ದೇವಸ್ಥಾನಗಳಲ್ಲಿ ಶೀತಲತೆಯ ಅರಿವಾಗುತ್ತದೆ. ಶಿವಮಂದಿರಗಳಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಗುವುದರಿಂದ ಉಷ್ಣತೆಯ ಅರಿವಾಗುತ್ತದೆ.

೨. ಶಿವನು ಲಯದ ದೇವತೆಯಾಗಿದ್ದಾನೆ. ಶಿವನು ಲಯದ ದೇವತೆಯಾಗಿರುವುದರಿಂದ ಇತರ ದೇವತೆಗಳ ಆವಶ್ಯಕತೆಯಿರುವುದಿಲ್ಲ. ಆದುದರಿಂದ ಶಿವನ ದೇವಸ್ಥಾನದಲ್ಲಿ ಇತರ ದೇವತೆಗಳಿರುವುದಿಲ್ಲ. ತದ್ವಿರುದ್ಧವಾಗಿ ಶ್ರೀವಿಷ್ಣುವು ಸ್ಥಿತಿಯ ದೇವನಾಗಿರುವುದರಿಂದ ಸ್ಥಿತಿಗೆ ಸಂಬಂಧಿಸಿದ ಕಾರ್ಯಕ್ಕಾಗಿ ಶ್ರೀವಿಷ್ಣುವಿನ ದೇವಸ್ಥಾನದಲ್ಲಿ ಇತರ ದೇವತೆಗಳೂ ಇರುತ್ತಾರೆ. ಹೀಗಿದ್ದರೂ ಕೆಲವು ಕಡೆಗಳಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯು ಭಕ್ತರಿಗೆ ಒಂದೇ ಸಮಯದಲ್ಲಿ ವಿವಿಧ ದೇವತೆಗಳ ದರ್ಶನದ ಲಾಭವು ಸಿಗಬೇಕೆಂದು ಅಥವಾ ಇತರ ಕಾರಣಗಳಿಗಾಗಿ ಶಿವನ ಜೊತೆಗೆ ಇತರ ದೇವತೆಗಳ ಸ್ಥಾಪನೆಯನ್ನೂ ಮಾಡಿರುವುದು ಕಂಡುಬರುತ್ತದೆ.

೩. ಶಿವನ ಪೂಜೆಯನ್ನು ಬ್ರಾಹ್ಮಣನು ಕದಲಿಸಬಾರದು, ಅಂದರೆ ಬ್ರಾಹ್ಮಣನು ನಿರ್ಮಾಲ್ಯವನ್ನು ತೆಗೆಯಬಾರದು. ಆದುದರಿಂದ ಶಿವನ ದೇವಸ್ಥಾನದಲ್ಲಿ ಗುರವರು ಇರುತ್ತಾರೆ ಮತ್ತು ಪಾರ್ವತಿಯ ದೇವಸ್ಥಾನದಲ್ಲಿ ಸೇವಕರಿರುತ್ತಾರೆ. ಪೂಜೆ, ವಿವಾಹ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬ್ರಾಹ್ಮಣರು ಹೇಗೆ ಪಿಂಡದಾನದ ಸಮಯದಲ್ಲಿ ಭೋಜನವನ್ನು ಮಾಡುವುದಿಲ್ಲವೋ ಹಾಗೆಯೇ ಶಿವಲಿಂಗದ ಮೇಲಿನ ನಿರ್ಮಾಲ್ಯವನ್ನು ತೆಗೆಯುವುದಿಲ್ಲ.

೪. ಬ್ರಾಹ್ಮಣರು ಶಿವಲಿಂಗಕ್ಕೆ ವೈದಿಕ ಮಂತ್ರಗಳಿಂದ ಅಭಿಷೇಕ ಮಾಡುತ್ತಾರೆ; ಆದರೆ ನೈವೇದ್ಯವನ್ನು ಮಾತ್ರ ಸ್ವೀಕರಿಸುವುದಿಲ್ಲ. ಪೂಜೆ ಮಾಡುವ ಬ್ರಾಹ್ಮಣರು ಪಿಂಡದಾನ ವಿಧಿಯನ್ನೂ ಮಾಡುವುದಿಲ್ಲ.

ಶಿವನ ಮೂರು ಕಣ್ಣುಗಳು

ಶಿವನ ಎಡಗಣ್ಣೆಂದರೆ ಮೊದಲನೆಯ ಕಣ್ಣು, ಶಿವನ ಬಲಗಣ್ಣೆಂದರೆ ಎರಡನೆಯ ಕಣ್ಣು ಮತ್ತು ಭ್ರೂಮಧ್ಯಕ್ಕಿಂತ ಸ್ವಲ್ಪ ಮೇಲೆ ಸೂಕ್ಷ ರೂಪದಲ್ಲಿರುವ ಊರ್ಧ್ವ ನೇತ್ರವೆಂದರೆ ಮೂರನೆಯ ಕಣ್ಣು. ಊರ್ಧ್ವ ನೇತ್ರವು ಎಡಗಣ್ಣು ಹಾಗೂ ಬಲಗಣ್ಣುಗಳ ಸಂಯುಕ್ತ ಶಕ್ತಿಯ ಪ್ರತೀಕವಾಗಿದೆ ಮತ್ತು ಅದು ಅತೀಂದ್ರಿಯ ಶಕ್ತಿಯ ಮಹಾಪೀಠವಾಗಿದೆ. ಇದಕ್ಕೆ ಜ್ಯೋತಿರ್ಮಠ, ವ್ಯಾಸಪೀಠ ಮುಂತಾದ ಹೆಸರುಗಳಿವೆ.