ಹಿಜಾಬ್ ನೆಪದಲ್ಲಿ ನ್ಯಾಯಾಲಯದ ಆದೇಶದ ಉಲ್ಲಂಘಿಸುವ ಹಾಗೂ ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ಮೇಲೆ ಕ್ರಮಕೈಗೊಳ್ಳಿ !

ರಾಜ್ಯದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ಗೃಹಸಚಿವ ಶ್ರೀ. ಅರಗ ಜ್ಞಾನೇಂದ್ರ ಇವರಿಗೆ ಮನವಿ

ವಾಸ್ತವಿಕವಾಗಿ ಇಂತಹ ಮನವಿ ಸಲ್ಲಿಸುವ ಸಮಯ ಬರಬಾರದು. ಕಾನೂನೂಬಾಹಿರ ಕೃತ್ಯ ಮಾಡುವವರ ಮೇಲೆ ಸರಕಾರವು ತಾವಾಗಿಯೇ ಕ್ರಮ ಜರುಗಿಸುವುದು ಅಪೇಕ್ಷಿತವಾಗಿದೆ !

ಮನವಿಯನ್ನು ಕೊಡುತ್ತಿರುವ ಹಿಂದುತ್ವನಿಷ್ಠರು

ಬೆಂಗಳೂರು – ‘ಕರ್ನಾಟಕದ ಹಿಜಾಬ್ ಪ್ರಕರಣ ವಿಶ್ವದಾದ್ಯಂತ ವ್ಯವಸ್ಥಿತ ಷಡ್ಯಂತ್ರದ ಮೂಲಕ ಹಬ್ಬಿದ್ದು, ಅನೇಕ ಕಾನೂನು ಸುವ್ಯವಸ್ಥೆ ಸಮಸ್ಯೆ ನಿರ್ಮಾಣವಾಗಿದೆ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಸದ್ಯ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆ ಬಳಸದಂತೆ ಮಧ್ಯಂತರ ಆದೇಶವನ್ನು ನೀಡಿದರೂ ಸಹ ರಾಜ್ಯದ ಅನೇಕ ಶಾಲೆಗಳಲ್ಲಿ ಅನ್ಯ ಸಮುದಾಯದ ಮಕ್ಕಳು, ಶಿಕ್ಷಕರು ಹಿಜಾಬ್, ಬುರ್ಖಾ ಧರಿಸಿ ತರಗತಿಯಲ್ಲಿ ಭಾಗವಹಿಸಿ, ಮಾನ್ಯ ನ್ಯಾಯಾಲಯದ ಆದೇಶದ ನಿಂದನೆಯಾಗುತ್ತಿರುವುದು ಗಮನಕ್ಕೆ ಬರುತ್ತಿದೆ.

ಅದಲ್ಲದೇ ರಾಜ್ಯದ ವಿವಿಧ ಕಡೆ ಚೆನ್ನಗಿರಿ, ಹರಿಹರ, ಕುಶಾಲನಗರ, ಮಲೆಬೆನ್ನೂರು ಮುಂತಾದ ಕಡೆ ಹಿಂದೂ ಕಾರ್ಯಕರ್ತರು ಸೊಶಿಯಲ್ ಮಿಡಿಯಾದಲ್ಲಿ ಹಿಜಾಬ್ ಬಗ್ಗೆ ಪೋಸ್ಟ್ ಮಾಡಿದ ಕಾರಣಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಮತ್ತು ಕೇಸರಿ ಶಾಲು ಧರಿಸಿದ ಹಿಂದೂ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆಗಳು ಸಹ ಬರುತ್ತಿದೆ. ಇವೆಲ್ಲ ಘಟನೆಗಳನ್ನು ಗಮನಿಸಿದಾಗ ಇದರ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇರುವುದು ಗಮನಕ್ಕೆ ಬರುತ್ತಿದೆ.

ಮನವಿಯನ್ನು ಕೊಡುತ್ತಿರುವ ಹಿಂದುತ್ವನಿಷ್ಠರು

ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಹಾಗಾಗಿ ಸರ್ಕಾರವು ಕೂಡಲೇ ಎಚ್ಚೆತ್ತು ನ್ಯಾಯಾಂಗ ನಿಂದನೆ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಹಿಂದೂ ವಿದ್ಯಾರ್ಥಿಗಳಿಗೆ ರಕ್ಷಣೆಯನ್ನು ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳು ರಾಜ್ಯದ ಗೃಹ ಸಚಿವ ಶ್ರೀ. ಅರಗ ಜ್ಞಾನೇಂದ್ರ ಇವರನ್ನು ಫೆಬ್ರವರಿ ೧೪ ರಂದು ಭೇಟಿಯಾಗಿ ಮನವಿ ನೀಡಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಸಮಿತಿಯ ಶ್ರೀ. ನವೀನ ಗೌಡ, ಭಜರಂಗದಳದ ಎಮ್.ಎಲ್. ಶಿವಕುಮಾರ, ವಿಹಿಂಪನ ಶ್ರೀರಾಮು ಮುಂತಾದ ಹಿಂದೂ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು. ಈ ಬಗ್ಗೆ ಸಮಿತಿಯ ವತಿಯಿಂದ ಬಾಗಲಕೋಟೆ. ಕೊಡಗು, ದಕ್ಷಿಣಕನ್ನಡಗಳಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.