ಸರಕಾರೀಕರಣದ ವಿರುದ್ದ ಹೋರಾಟ ಮುಂದುವರಿಸಬೇಕು ! – ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು

ಶಿರಸಿ : ದೇವಸ್ಥಾನಗಳ ಸರಕಾರೀಕರಣ ಸರಿಯಲ್ಲ. ಸರಕಾರೀಕರಣದ ವಿರುದ್ದದ ಹೋರಾಟವನ್ನ ವ್ಯವಸ್ಥಿತವಾಗಿ ನಡೆಸಬೇಕಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ. ಅವರು ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ `ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳ’ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ ಕರೆ ನೀಡಿದರು.

1. ದೇವಾಲಯಗಳ ಸ್ವಾಯತ್ತತೆ ಕುರಿತ ಹೋರಾಟದ ಕಾನೂನು ವಿಷಯದ ಸಲಹೆಗಾರರಾದ ಅರುಣಾಚಲ ಹೆಗಡೆಯವರು, ಕೊರೋನಾ ಹಾಗೂ ಇತರ ಕಾರಣಗಳಿಂದ ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿನ ಮೊಕದ್ದಮೆಯ ವಿಚಾರಣೆಯನ್ನು 2022 ರ ಜನವರಿಗೆ ಮುಂದೂಡಲಾಗಿದೆ ಎಂದು ತಿಳಿಸಿದರು. ’ದೇವಾಲಯದ ಆಸ್ತಿ ಸರಕಾರದ ಹೆಸರಿನಲ್ಲಿದ್ದರೆ, ಅಂತಹ ಪ್ರಕರಣಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬಹುದು’ ಎಂದು ಅವರು ಹೇಳಿದರು.
2. ಮಹಾಮಂಡಳದ ಕಾರ್ಯಾಧ್ಯಕ್ಷ ಆರ್ .ಜಿ. ನಾಯಕ್ ಇವರು ಮಾತನಾಡುತ್ತಾ , 2004 ರಲ್ಲಿ ಈ ಮಹಾಮಂಡಲದ ರಚನೆಯಾಗಿದ್ದು, ತನ್ಮೂಲಕ ಹಲವು ಕಾರ್ಯಚಟುವಟಿಕೆಗಳನ್ನು ನಡೆಸಲಾಗಿದೆ. ಸರಕಾರದ ದಬ್ಬಾಳಿಕೆ ನೀತಿಯನ್ನು ಎದುರಿಸಿ ದೇವಾಲಯಗಳ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನಿಸಿದೆವು. ಕಾನೂನಾತ್ಮಕ ಹೋರಾಟದ ಮೂಲಕ ದೇವಾಲಯಗಳ ಅಸ್ಮಿತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ರಾಜ್ಯದ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಅಂಶಗಳನ್ನು ಮಂಡಿಸುವೆವು !

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಮಾತನಾಡುತ್ತಾ, ದೇವಸ್ಥಾನಗಳ ವ್ಯವಸ್ಥಿತ ನಿರ್ವಹಣೆಗೆ ಸರ್ವಸಮ್ಮತ ನೀತಿ-ನಿಯಮಗಳಿರಬೇಕು ಎಂದು ಹೇಳಿದರು. ಈ ಬಗ್ಗೆ ನಮ್ಮ ಒತ್ತಡ ಮುಜರಾಯಿ ಇಲಾಖೆಗೆ ಇದೆ. ಡಿಸೆಂಬರ್ 28 ರಂದು ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು. `ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳ’ಕ್ಕೆ ದೇವಸ್ಥಾನಗಳು ಸದಸ್ಯತ್ವ ಪಡೆದರೆ ದೇವಸ್ಥಾನಗಳ ಸ್ವಾಯತ್ತಾ ಹೋರಾಟಕ್ಕೆ ಬಲ ಬರುವುದು. ಮಹಾಮಂಡಳವೂ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಆಯಾ ತಾಲೂಕಿನ ಸದಸ್ಯತ್ವದ ಮಾಹಿತಿ ಸಂಗ್ರಹಿಸಿ ಪ್ರತಿ ವರ್ಷ ನೋಂದಣಿ ನಡೆಸಬೇಕು. ದೇವಸ್ಥಾನದ ಆಸ್ತಿಯನ್ನು ಸ್ಥಳೀಯವಾಗಿ ನೋಡಿಕೊಳ್ಳಬೇಕು. ದೇವಸ್ಥಾನಗಳ ಆಸ್ತಿಯ ಸಮಸ್ಯೆಗಳು ಬೇರೆಬೇರೆಯಾಗಿಯೇ ಇದೆ, ಎಂದರು.