ದೆಹಲಿಯ ಗಡಿಯಲ್ಲಿನ ರೈತರ ಆಂದೋಲನ ಹಿಂದಕ್ಕೆ !

ಡಿಸಂಬರ 11 ರಂದು ರೈತರೆಲ್ಲರೂ ದೆಹಲಿಯ ಗಡಿಯಿಂದ ಹಿಂದಿರುಗುವರು

ನವ ದೆಹಲಿ – ’ಸಂಯುಕ್ತ ಕಿಸಾನ ಮೋರ್ಚಾ’ ದೆಹಲಿಯ ಗಡಿಯಲ್ಲಿ 378 ದಿನಗಳಿಂದ ನಡೆಯುತ್ತಿದ್ದ ರೈತರ ಆಂದೋಲನವನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದೆ. ಈ ಘೊಷಣೆಯನ್ನು ರೈತ ಸಂಘಟನೆಗಳ ಸಭೆಯ ಬಳಿಕ ಮಾಡಲಾಯಿತು. ಡಿಸಂಬರ 11 ರೊಳಗೆ ರೈತರು ದೆಹಲಿಯ ಗಡಿಯನ್ನು ಬಿಟ್ಟು ಹೋಗುವುದಾಗಿ ಸಂಯುಕ್ತ ಕಿಸಾನ ಮೋರ್ಚಾ ಹೇಳಿಕೆ ನೀಡಿದೆ. ಡಿಸೆಂಬರ 9 ರಂದು ಬೆಳಿಗ್ಗೆ ಕೇಂದ್ರ ಸರಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಅಧಿಕೃತ ಪತ್ರ ಸಿಕ್ಕಿದ ಬಳಿಕ ಮಧ್ಯಾಹ್ನ ರೈತರ ಸಭೆ ನಡೆಯಿತು. ಅನಂತರ ಆಂದೋಲನವನ್ನು ಮುಗಿಸುವುದಾಗಿ ಘೋಷಣೆ ನೀಡಲಾಯಿತು.

ಹೆಲಿಕಾಪ್ಟಾರ ಅಪಘಾತದಲ್ಲಿ ಮೃತಪಟ್ಟ ಸೈನಿಕರು ಮತ್ತು ಜನರಲ್ ಬಿಪೀನ ರಾವತರವರ ಅಂತ್ಯಕ್ರಿಯೆಯಿಂದಾಗಿ ರೈತರು ಇದನ್ನು ಆಚರಿಸುವುದಿಲ್ಲ, ಬದಲಿಗೆ ಸಂತಾಪ ಸಭೆಯನ್ನು ನಡೆಸಲಿದ್ದಾರೆ ನಂತರ ಡಿಸೆಂಬರ 11 ರಂದು ದೆಹಲಿಯ ಗಡಿಯಲ್ಲಿ ಸಂಭ್ರಮಾಚರಣೆ ನಡೆಯಲಿದ್ದು, ತದನಂತರ ರೈತರು ತಮ್ಮ ತಮ್ಮ ಮನೆಗಳಿಗೆ ಮರಳುವರು, ಎಂದು ಹೇಳಲಾಗಿದೆ. `ನಾವು ಆಂದೋಲನವನ್ನು ಹಿಂದಕ್ಕೆ ತೆಗೆದುಕೊಂಡಿದ್ದರೂ ಬೇಡಿಕೆಗಳು ಈಡೇರದೆ ಹೋದರೆ ಪುನಃ ಆಂದೋಲನ ನಡೆಸುವೆವು’, ಎಂದು ರೈತರ ಮುಖಂಡ ರಾಕೇಶ ಟಿಕೈತರವರು ಎಚ್ಚರಿಕೆಯನ್ನೂ ನೀಡಿದರು.

ಕೇಂದ್ರ ಸರಕಾರವು ಮೂರು ಕೃಷಿ ಕಾಯಿದೆಗಳನ್ನು ರದ್ದು ಪಡಿಸಿದ ಬಳಿಕವೂ ರೈತರು ಸರಕಾರದ ಮುಂದೆ ಹೊಸ ಬೇಡಿಕೆಗಳನ್ನು ಮಂಡಿಸಿದ್ದರು. ಅದರಲ್ಲಿ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಂದೋಲನದ ಕಾಲಾವಧಿಯಲ್ಲಿ ರೈತರ ಮೇಲೆ ಹೂಡಲಾಗಿದ್ದ ಎಲ್ಲಾ ಮೊಕದ್ದಮೆಗಳನ್ನು ಹಿಂದೆಗೆದುಕೊಳ್ಳುವುದು, ಆಂದೋಲನದ ಕಾಲದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬದವರಿಗೆ ನಷ್ಟ ಪರಿಹಾರ ಕೊಡುವುದು, ಹೊಲದಲ್ಲಿರುವ ತೆನೆ (ಬೆಳೆ ತೆಗೆದ ಬಳಿಕ ಉಳಿಯುವ ಭಾಗ) ಸುಟ್ಟಿರುವ ಪ್ರಕರಣದಲ್ಲಿ ಅಪರಾಧ ನೋಂದಾಯಿಸದಿರುವುದು ಇತ್ಯಾದಿ ಬೇಡಿಕೆಗಳ ಸಮಾವೇಶವಿದೆ. ಎಮ್.ಎಸ್.ಪಿ. ಬಗ್ಗೆ ಚರ್ಚೆ ನಡೆಸಲು ಒಂದು ಸಮಿತಿಯನ್ನು ಸ್ಥಾಪನೆ ಮಾಡಬೇಕೆಂಬ ಬೇಡಿಕೆಯನ್ನು ರೈತರು ನೀಡಿದ್ದರು. ಈ ಸಮಿತಿಯ ಸದಸ್ಯರನ್ನು ಸಂಯುಕ್ತ ಕಿಸಾನ ಮೋರ್ಚಾ ಆರಿಸಲಿದೆ.