ಮ್ಯಾನ್ಮಾರ್‌ನ ಮಾಜಿ ನಾಯಕಿ ಆಂಗ್ ಸಾಂಗ್ ಸ್ಯು ಕಿ ಇವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ

ಪ್ರತಿಭಟನಾಕಾರರ ಮೇಲೆ ವಾಹನ ಹಾಯಿಸಿದ ಸೈನ್ಯ!

ಯಾಂಗೂನ್ (ಮ್ಯಾನ್ಮಾರ್) – ಮ್ಯಾನ್ಮಾರ್‌ನ ನಾಯಕಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾಂಗ್ ಸ್ಯು ಕಿ ಇವರಿಗೆ ಸ್ಥಳೀಯ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸ್ಯೂ ಕಿ ಇವರಿಗೆ ಕೊರೊನಾ ನಿಯಮಗಳ ಉಲ್ಲಂಘನೆ ಮತ್ತು ಭಾವನೆಗಳ ಪ್ರಚೋದನೆ ಈ ಅಪರಾಧಗಳಿಗಾಗಿ ಶಿಕ್ಷೆ ನೀಡಲಾಗಿದೆ. ಮ್ಯಾನ್ಮಾರ್‌ನಲ್ಲಿ ನಡೆದ ಸೇನೆಯ ಬಂಡಾಯದ ನಂತರ ಫೆಬ್ರವರಿ ೧ ರಿಂದ ಸ್ಯೂ ಕಿ ಬಂಧನದಲ್ಲಿದ್ದರು. ಇದೀಗ ಶಿಕ್ಷೆ ಜಾರಿಯಾಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸ್ಯೂ ಕಿ ಇವರನ್ನು ಪದಚ್ಯುತಗೊಳಿಸಿದ ಮ್ಯಾನ್ಮಾರ್‌ನಲ್ಲಿ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಿದೆ.

ಮತ್ತೊಂದೆಡೆ, ಯಾಂಗೂನ್‌ನಲ್ಲಿ ಸರಕಾರ ವಿರೋಧಿ ಪ್ರತಿಭಟನಾಕಾರರ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ನಾಗರಿಕರ ಮೇಲೆ ಸೇನೆಯು ವಾಹನಗಳನ್ನು ಹಾಯಿಸಿದ್ದರಿಂದ ಮೂವರು ಸಾವನ್ನಪ್ಪಿದರು. ಕೆಲವು ನಾಗರಿಕರು ವಾಹನದ ಚಕ್ರಗಳ ಅಡಿಯಲ್ಲಿ ನಜ್ಜುಗುಜ್ಜಾದರು. ಈ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಆಂದೋಲನ ವರದಿ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತರನ್ನೂ ಬಂಧಿಸಲಾಗಿದೆ.