ನಾಗಾಲ್ಯಾಂಡ್‌ನಲ್ಲಿ ಭದ್ರತಾಪಡೆಗಳು ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರ ಸಾವು

ಆಕ್ರೋಶಗೊಂಡು ಭದ್ರತಾಪಡೆಗಳ ವಾಹನಗಳನ್ನು ಸುಟ್ಟ ನಾಗರಿಕರು !

ಕೊಹಿಮಾ (ನಾಗಾಲ್ಯಾಂಡ್) – ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು. ಈ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊನ ಜಿಲ್ಲೆಯಲ್ಲಿ ಒಟಿಂಗ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಭದ್ರತಾಪಡೆಯ ವಾಹನಗಳನ್ನು ಸುಟ್ಟು ಹಾಕಿದರು. ಈ ಗುಂಡು ಹಾರಾಟದಲ್ಲಿ ಸಾವಿಗೀಡಾದವರು ಕಾರ್ಮಿಕರಾಗಿದ್ದರು ಮತ್ತು ಕೆಲಸ ಮುಗಿಸಿ ‘ಪಿಕಪ್ ಮಿನಿ ಟ್ರಕ್’ನಿಂದ ಮನೆಗೆ ಹೋಗುತ್ತಿದ್ದರು. ನಾಗಾಲ್ಯಾಂಡ್‌ನ ಮುಖ್ಯಮಂತ್ರಿ ನೆಫಿಯೋ ರಿಓರವರು ಜನರನ್ನು ಶಾಂತಿ ಕಾಪಾಡಲು ಕರೆ ನೀಡಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ಸ್ಥಾಪಿಸಲಾಗಿದೆ. ‘ಈ ವಿಚಾರಣೆಯಲ್ಲಿ ಯಾರ‍್ಯಾರು ತಪ್ಪಿತಸ್ಥರಾಗಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು’, ಎಂದು ರಿಓರವರು ಹೇಳಿದ್ದಾರೆ. ಗೃಹ ಸಚಿವ ಅಮಿತ ಶಹಾರವರು ಕೂಡ ಈ ಘಟನೆಯ ಬಗ್ಗೆ ಖೇದ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಭಾರತೀಯ ಸೈನ್ಯವು ಸಹ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದು ವಿಚಾರಣೆಯ ಆದೇಶ ನೀಡಿದೆ.

ಭಯೋತ್ಪಾದಕರು ಬರುವುದಾಗಿ ಭದ್ರತಾ ಪಡೆಗೆ ಮಾಹಿತಿ ಸಿಕ್ಕಿತ್ತು !

ಭದ್ರತಾ ಪಡೆಯವರಿಗೆ ಭಯೋತ್ಪಾದಕರು ವಾಹನದಿಂದ ಬರುತ್ತಿದ್ದಾರೆಂಬ ಮಾಹಿತಿ ಸಿಕ್ಕಿತ್ತು. ಆ ಸ್ಥಳದಲ್ಲಿ ‘ಎನ್.ಎಸ್.ಸಿ.ಎನ್.’ ಎಂಬ ಹೆಸರಿನ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರು ಇದ್ದಾರೆ ಮತ್ತು ಅವರು ದಾಳಿ ನಡೆಸುವ ಸಿದ್ಧತೆಯಲ್ಲಿದ್ದಾರೆ ಎಂದು ಭದ್ರತಾಪಡೆಗೆ ಮಾಹಿತಿ ಸಿಕ್ಕಿತ್ತು. ಆದ್ದರಿಂದ ಕಾರ್ಯಾಚರಣೆ ಮಾಡುವ ಆಯೋಜನೆಯಾಗಿತ್ತು. ಅಲ್ಲಿ ಯಾವ ಬಣ್ಣದ ವಾಹನದಿಂದ ಅವರು ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತೋ ಅದೇ ಬಣ್ಣದ ವಾಹನವು ಬಂದಾಗ ಭದ್ರತಾಪಡೆಯ ಸೈನಿಕರು ವಾಹನ ನಿಲ್ಲಿಸಲು ಹೇಳಿದರು; ಆದರೆ ವಾಹನವು ನಿಲ್ಲಿಸದೇ ಮುಂದೆ ಹೋಯಿತು. ಅನಂತರ ಭದ್ರತಾ ಪಡೆಯಿಂದ ಗುಂಡಿನ ಹಾರಾಟ ನಡೆಸಿದರು. ಮತ್ತು ಆ ವಾಹನದಲ್ಲಿ ಕಾರ್ಮಿಕರು ಇದ್ದದ್ದರಿಂದ ಅವರು ಸಾವಿಗೀಡಾದರು.

ಗ್ರಾಮಸ್ಥರೊಂದಿಗೆ ನಡೆದ ಘರ್ಷಣೆಯಲ್ಲಿ ಓರ್ವ ಸೈನಿಕ ಹುತಾತ್ಮ ?

ಈ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಸಿಕ್ಕಿದ ನಂತರ ಅವರು ಘಟನಾಸ್ಥಾನಕ್ಕೆ ಆಗಮಿಸಿದರು ಮತ್ತು ಅವರು ಸೈನಿಕರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾರಂಭಿಸಿದರು. ಅವರು ಸೈನಿಕರ ವಾಹನವನ್ನು ಸುಟ್ಟನಂತರ ಸೈನಿಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಗುಂಡು ಹಾರಿಸಿದರು. ಅದರಲ್ಲಿ ಕೆಲವು ನಾಗರಿಕರು ಸಾವಿಗೀಡಾಗಿರುವ ಸುದ್ದಿಯಿದೆ. ಈ ಘರ್ಷಣೆಯಲ್ಲಿ ಭದ್ರತಾಪಡೆಯ ಓರ್ವ ಸೈನಿಕ ಹುತಾತ್ಮನಾಗಿದ್ದಾನೆಂದು ಹೇಳಲಾಗುತ್ತಿದೆ; ಆದರೆ ಇನ್ನೂ ಈ ಘಟನೆಯ ಪುಷ್ಟಿ ಸಿಕ್ಕಿಲ್ಲ.

ಈ ದುರ್ದೈವಿ ಘಟನೆಯಿಂದ ನನಗೆ ದುಃಖವಾಗಿದೆ ! – ಕೇಂದ್ರಿಯ ಗೃಹ ಸಚಿವ ಅಮಿತ ಶಹಾ

ಗೃಹ ಸಚಿವ ಅಮಿತ ಶಹಾರವರು ಟ್ವಿಟ್ ಮಾಡಿ, ನಾಗಾಲ್ಯಾಂಡ್‌ನಲ್ಲಿ ಓಟಿಂಗ್‌ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ನನಗೆ ದುಃಖವಾಗಿದೆ. ಈ ಘಟನೆಯಲ್ಲಿ ಸಾವಿಗೀಡಾಗಿರುವವರ ಕುಟುಂಬದ ಬಗ್ಗೆ ನಾನು ನನ್ನ ಸಹಾನುಭೂತಿಯನ್ನು ವ್ಯಕ್ತ ಪಡಿಸುತ್ತೇನೆ. ಪೀಡಿತರ ಕುಟುಂಬದವರಿಗೆ ನ್ಯಾಯ ಸಿಗಲಿ, ಅದಕ್ಕಾಗಿ ರಾಜ್ಯ ಸರಕಾರವು ಉನ್ನತ ಮಟ್ಟದ ವಿಚಾರಣೆ ನಡೆಸಲಿದೆ ಎಂದು ಹೇಳಿದರು.