ಕೊಲಕಾತಾ ಉಚ್ಚ ನ್ಯಾಯಾಲಯದಲ್ಲಿ ದೇಶದ ಎಲ್ಲಕ್ಕಿಂತ ಹಳೆಯದಾದ ಅಂದರೆ 221 ವರ್ಷಗಳ ಹಿಂದಿನ ಖಟ್ಲೆ ಇನ್ನೂ ಇತ್ಯರ್ಥವಾಗಲು ಬಾಕಿ

ಸರಕಾರದ ಸಮೀಕ್ಷೆಯ ಪ್ರಕಾರ ಎಲ್ಲಾ ಪ್ರಕರಣಗಳು ಇತ್ಯರ್ಥವಾಗಲು 324 ವರ್ಷಗಳು ತಗಲಬಹುದು !

ಈ ವೇಗದಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಜನರಿಗೆ ನ್ಯಾಯ ಸಿಗುವುದೇ ? ಇದು ಪ್ರಜೆಗಳ ಮೇಲಾಗುತ್ತಿರುವ ಅನ್ಯಾಯವಲ್ಲವೇ ?- ಸಂಪಾದಕರು 

ಮುಂಬಯಿ : ದೇಶದಲ್ಲಿ ಒಟ್ಟು ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 3 ಕೋಟಿ 60 ಲಕ್ಷದಷ್ಟಿದೆ. ಪ್ರಸ್ತುತ ದೇಶದ 24 ಉಚ್ಚ ನ್ಯಾಯಾಲಯಗಳಲ್ಲಿ ಅಂದಾಜು 56 ಲಕ್ಷ ಪ್ರಕರಣಗಳು ಇತ್ಯರ್ಥವಾಗಲು ಬಾಕಿಯಿವೆ. ಈ ಪೈಕಿ 59,595 ಪ್ರಕರಣಗಳು ಕಳೆದ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿಯಿವೆ. ದೇಶದ ಅತಿದೊಡ್ಡ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿರುವ 42,764 ಪ್ರಕರಣಗಳು 30 ವರ್ಷಗಷ್ಟು ಹಳೆಯದಾಗಿವೆ. ದೇಶದ ಕೋಲಕತಾ ಉಚ್ಚ ನ್ಯಾಯಾಲಯ ಇಲ್ಲಿ ಅತಿ ಹೆಚ್ಚು ಬಾಕಿ ಇರುವ ಪ್ರಕರಣಗಳಿರುವ ನ್ಯಾಯಾಲಯ ಎಂದು ಗುರುತಿಸಿಕೊಂಡಿದೆ. ಈ ಉಚ್ಚ ನ್ಯಾಯಾಲಯದಲ್ಲಿ ಸದ್ಯ ಅಂದಾಜು 2 ಲಕ್ಷದ 24 ಸಾವಿರ ಪ್ರಕರಣಗಳು ಬಾಕಿ ಇವೆ. ಈ ಪೈಕಿ 10,129 ಪ್ರಕರಣಗಳು 30 ವರ್ಷಗಳಿಂದ ಬಾಕಿಯಿವೆ. ಈ ನ್ಯಾಯಾಲಯದಲ್ಲಿನ ಒಂದು ಪ್ರಕರಣವು 221 ವರ್ಷಗಳಿಂದ ವಿಚಾರಣೆಯಲ್ಲಿದೆ. ಈ ಮೊಕದ್ದಮೆ ದೇಶದಲ್ಲೇ ಬಾಕಿ ಉಳಿದಿರುವ ಅತ್ಯಂತ ಹಳೆಯ ಪ್ರಕರಣ ಎಂದು ಪರಿಗಣಿಸಲಾಗಿದೆ.

1. ಸರಕಾರದ ಮಾಡಿದ ಒಂದು ಸಮೀಕ್ಷೆಯ ಪ್ರಕಾರ, ಪ್ರಸ್ತುತ ವೇಗದಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿದ್ದರೆ, ಎಲ್ಲಾ ಪ್ರಕರಣಗಳು ಇತ್ಯರ್ಥವಾಗಲು 324 ವರ್ಷಗಳು ಬೇಕಾಗುತ್ತವೆ.

2. `ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಗ್ರಿಡ್’ನ (`ಎಜೆಡಿಜಿ’ಯ) ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ 17 ಸಾವಿರ ಜಿಲ್ಲಾ ನ್ಯಾಯಾಲಯಗಳಲ್ಲಿ 79 ಸಾವಿರ ಮೊಕದ್ದಮೆಗಳು ಬಾಕಿ ಉಳಿದಿದ್ದು ಅದು 30 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ. ಕೆಳಹಂತದ ನ್ಯಾಯಾಲಯಗಳಲ್ಲಿಯೂ 140 ಮೊಕದ್ದಮೆಗಳು 60 ವರ್ಷಕ್ಕಿಂತಲೂ ಹಳೆಯದಾಗಿದೆ.

3. ಮಾಧ್ಯಮಗಳ ವರದಿಗನುಸಾರ, ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಸಂಖ್ಯೆ ‘ಎಎಸ್‍ಟಿ/1/1800′ ಅನ್ನು ದೇಶದ ಅತ್ಯಂತ ಹಳೆಯ ಪ್ರಕರಣವೆಂದು ಪರಿಗಣಿಸಲಾಗಿದೆ. 221 ವರ್ಷಗಳ ಹಿಂದಿನ ಈ ಪ್ರಕರಣ 1800 ರಲ್ಲಿ ಮೊಟ್ಟಮೊದಲ ಬಾರಿಗೆ ಕೆಳಹಂತದ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಈ ಪ್ರಕರಣದ ಕೊನೆಯ ವಿಚಾರಣೆಯನ್ನು ನವೆಂಬರ್ 20, 2018 ರಂದು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ನಡೆಸಲಾಗಿತ್ತು. ಈ ಮೊಕದ್ದಮೆಯ ಕಡತಗಳು ಕೆಳ ಹಂತದ ನ್ಯಾಯಾಲಯದಲ್ಲಿ ಸುಮಾರು 170 ವರ್ಷಗಳಿಂದ ಬಾಕಿ ಉಳಿದಿದ್ದವು. ಇದರ ವಿಚಾರಣೆಯನ್ನು ತ್ವರಿತಗೊಳಿಸುವ ದೃಷ್ಟಿಯಿಂದ ಜನವರಿ 1, 1970 ರಂದು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ನೋಂದಾಯಿಸಲಾಯಿತು; ಆದರೆ ಉಚ್ಚ ನ್ಯಾಯಾಲಯದಲ್ಲಿಯೂ ಕಳೆದ 51 ವರ್ಷಗಳಿಂದ ದಿನಾಂಕಗಳಲ್ಲಿ ಸಿಲುಕಿದೆ.