ದೀಪಾವಳಿಗೆ ರಜೆ ಸಿಗಲು ಅಮೇರಿಕಾದ ಸಂಸತ್ತಿನಲ್ಲಿ ವಿಧೇಯಕ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ದೀಪಾವಳಿಯಂದು ಸರಕಾರಿ ರಜಾದಿನವೆಂದು ಘೋಷಣೆಯಾಗಬಹುದು. ಅಮೇರಿಕಾದಲ್ಲಿರುವ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಅಮೇರಿಕಾದ ಸಂಸತ್ತಿನಲ್ಲಿ ಠರಾವನ್ನು ಮಂಡಿಸಿದ್ದಾರೆ. ಜೊತೆಗೆ ನ್ಯೂಯಾರ್ಕ್‌ನ ಸಂಸದೆ ಕ್ಯಾರೊಲಿನ್ ಮಲೋನಿ ಇವರೂ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನ ಸಭೆಯಲ್ಲಿ ‘ದೀಪಾವಳಿ ಡೆ’ ಈ ಮಸೂದೆಯನ್ನು ಮಂಡಿಸಿದ್ದಾರೆ.

೧. ಠರಾವನ್ನು ಮಂಡಿಸಿದ ನಂತರ ಕೃಷ್ಣಮೂರ್ತಿಯವರು ಮಾತನಾಡುತ್ತಾ, ಅಮೇರಿಕಾ ಸೇರಿದಂತೆ ಜಗತ್ತಿನಾದ್ಯಂತ ನೆಲೆಸಿರುವ ಸಿಖ್ಕ, ಜೈನ ಮತ್ತು ಹಿಂದೂಗಳಿಗೆ ದೀಪಾವಳಿ ಎಂದರೆ ಕತ್ತಲೆಯ ಮೇಲೆ ಬೆಳಕಿನ ಜಯ ಹಾಗೂ ಕೆಡುಕಿನ ವಿರುದ್ಧ ಒಳಿತಿನ ವಿಜಯದ ಉತ್ಸವವಾಗಿದೆ. ದೀಪಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸಿ, ಈ ಠರಾವನ್ನು ಮಂಡಿಸಲು ನಾನು ಹೆಮ್ಮೆಪಡುತ್ತೇನೆ. ಈ ಮಹಾಮಾರಿಯ ಸಮಯದಲ್ಲಿ ನಾವು ಮತ್ತೊಂದು ದೀಪಾವಳಿಯನ್ನು ಆಚರಿಸುತ್ತಿರುವಾಗ, ನಾವು ಪ್ರಪಂಚದ ಕತ್ತಲೆಯ ಮೇಲೆ ಬೆಳಕು ಚೆಲ್ಲಬಹುದು ಎಂದು ಭಾವಿಸುತ್ತೇನೆ. ತಮ್ಮ ತಮ್ಮ ಮನೆಯಲ್ಲಿ ಹಾಗೂ ಆಪ್ತರೊಂದಿಗೆ ದೀಪಾವಳಿಯನ್ನು ಆಚರಿಸಲು ಸೇರಿರುವ ಕುಟುಂಬಗಳಿಗೆ ಸುರಕ್ಷಿತ ಮತ್ತು ಸಂತೋಷದ ದೀಪಾವಳಿಯ ಶುಭಾಶಯಗಳನ್ನು ನೀಡಲು ಬಯಸುತ್ತೇನೆ ಮತ್ತು ಅವರೆಲ್ಲರಿಗೂ ಉತ್ತಮ ಆರೋಗ್ಯ ಮತ್ತು ಶಾಂತಿ ಸಿಗಲಿ, ಅದಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

೨. ಸಂಸದೆ ಕ್ಯಾರೊಲಿನ ಮಲೊನಿ ಇವರು ‘ದೀಪಾವಳಿ ಡೆ’ ಈ ಮಸೂದೆಯನ್ನು ಮಂಡಿಸುವಾಗ ‘ನಾನು ತುಂಬಾ ಸಂತೋಷ ಮತ್ತು ಉತ್ಸಾಹಿಯಾಗಿದ್ದೇನೆ’, ಎಂದು ಹೇಳಿದ್ದಾರೆ.

೩. ಈ ಮಸೂದೆಗೆ ಒಪ್ಪಿಗೆ ಸಿಕ್ಕಿದ ತಕ್ಷಣ ಅಮೇರಿಕಾದ ಹಲವು ಕಚೇರಿಗಳಿಗೆ ದೀಪಾವಳಿ ರಜೆ ಸಿಗಲಿದೆ. ಕ್ಯಾರೋಲಿನ್ ಮಲೋನಿ ಇವರೇ ೨೦೧೬ ರಲ್ಲಿ ದೀಪಾವಳಿ ಹಬ್ಬದ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು.