ಆಧ್ಯಾತ್ಮಿಕ ಲಾಭ ಮತ್ತು ಚೈತನ್ಯ ನೀಡುವ ಮಂಗಲಕರ ದೀಪಾವಳಿ !

ದೀಪಾವಳಿಯ ಭಾವಾರ್ಥ

‘ಶ್ರೀಕೃಷ್ಣನು ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ ಜನರಿಗೆ ಭೋಗವೃತ್ತಿ, ಲಾಲಸೆ, ಅನಾಚಾರ ಮತ್ತು ದುಷ್ಟಪ್ರವೃತ್ತಿಗಳಿಂದ ಮುಕ್ತಗೊಳಿಸಿದನು ಮತ್ತು ಪ್ರಭುವಿನ ವಿಚಾರಗಳನ್ನು ನೀಡಿ ಸುಖಿಯಾಗಿಸಿದನು, ಅದೇ ಈ ‘ದೀಪಾವಳಿ’. ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನವು ಜಾಗೃತವಾದಲ್ಲಿ ಅಜ್ಞಾನರೂಪಿ ಅಂಧಃಕಾರದ, ಹಾಗೆಯೇ ಭೋಗವೃತ್ತಿ ಮತ್ತು ಅನಾಚಾರಿ, ಅಸುರಿವೃತ್ತಿಯಿರುವ ಜನರ ಪ್ರಾಬಲ್ಯವು ಕಡಿಮೆಯಾಗಿ ಸಜ್ಜನಶಕ್ತಿಯ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು.

ದೀಪಾವಳಿಯ ಉತ್ಪತ್ತಿ ಮತ್ತು ಅರ್ಥ

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ `ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)

ಗೋವತ್ಸ ದ್ವಾದಶಿ (ನವೆಂಬರ್ ೧)

ಹಬ್ಬವನ್ನು ಆಚರಿಸುವ ಪದ್ಧತಿ : ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರು ಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.

ಗೋವತ್ಸದ್ವಾದಶಿಯ ಮಹತ್ವ

ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆ ಹಾಗೂ ಪೂಜ್ಯ ಭಾವದಿಂದ ಅವಳನ್ನು ಪೂಜಿಸಲಾಗುತ್ತದೆ. ಆಗ ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರವು ನಿಶ್ಚಿತವಾಗಿ ಸಮೃದ್ಧಿಗೊಳ್ಳುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜಿಸಿ ದೀಪಾವಳಿ ಆಚರಿಸಬೇಕು. – ಪ.ಪೂ. ಪರಶರಾಮ ಪಾಂಡೆ ಮಹಾರಾಜರು.

ಧನತ್ರಯೋದಶಿ (ನವೆಂಬರ್)

ಆಶ್ವಯುಜ ಕೃಷ್ಣ ತ್ರಯೋದಶಿ ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ಕೋಶಾಗಾರ) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ ಕಿರ್ದಿಗಳನ್ನು (ಪುಸ್ತಕ ಗಳನ್ನು) ಈ ದಿನವೇ ತರುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ ಪೂಜೆಯ ವೇಳೆ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ. ಜಮೆ-ಖರ್ಚಿನ ಬಗ್ಗೆ ವರದಿಯನ್ನಿಟ್ಟು ಲಕ್ಷ್ಮೀಯ ಪೂಜೆ ಮಾಡುತ್ತಾರೆ.

ಭಾವಾರ್ಥ: ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನ ವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮೀ.  ಶ್ರೀಸೂಕ್ತದಲ್ಲಿ ವಸು, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವೆಲ್ಲವನ್ನು ಧನವೆಂದೇ ಪರಿಗಣಿಸಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷ್ಮೀ !

ಧನತ್ರಯೋದಶಿಯವರೆಗೆ ಬಾಕಿ ಉಳಿದ ಸಂಪತ್ತನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಬೇಕು, ಸತ್‍ಕಾರ್ಯಕ್ಕೆ ಖರ್ಚು ಮಾಡಿದರೆ ಧನಲಕ್ಷ್ಮೀಯು ಶಾಶ್ವತವಾಗಿ ಲಕ್ಷ್ಮೀರೂಪದಲ್ಲಿ ಮನೆಯಲ್ಲಿರುತ್ತಾಳೆ.