‘ಇಂತಹ ಒಂದು ಕಾರಣಕ್ಕಾಗಿ ಶ್ರಾದ್ಧವನ್ನು ಮಾಡಲು ಆಗುವುದಿಲ್ಲ ಎಂದು ಯಾರಿಗೂ ಹೇಳಲು ಸಾಧ್ಯವಾಗದಷ್ಟು ಪರಿಹಾರ ಮಾರ್ಗಗಳನ್ನು ಹಿಂದೂಧರ್ಮದಲ್ಲಿ ಹೇಳಲಾಗಿದೆ. ಇದರಿಂದ ಪ್ರತಿಯೊಬ್ಬರೂ ಶ್ರಾದ್ಧವನ್ನು ಮಾಡುವುದು ಎಷ್ಟು ಅವಶ್ಯಕವಾಗಿದೆ ಎಂಬುದು ತಿಳಿಯುತ್ತದೆ.
ಅ. ಯೋಗ್ಯ ಬ್ರಾಹ್ಮಣರು ಸಿಗದಿದ್ದರೆ ಯಾವ ಬ್ರಾಹ್ಮಣರು ಸಿಗುತ್ತಾರೆಯೋ, ಅವರಿಂದಲೇ ಶ್ರಾದ್ಧವನ್ನು ಮಾಡಿಸಿಕೊಳ್ಳಬೇಕು.
ಆ. ತಾಯಿಯ ಶ್ರಾದ್ಧಕ್ಕೆ ಬ್ರಾಹ್ಮಣರು ಸಿಗದಿದ್ದರೆ ಮುತ್ತೈದೆಯರನ್ನು ಕರೆದು ಶ್ರಾದ್ಧ ಮಾಡಬೇಕು.
ಇ. ಬ್ರಾಹ್ಮಣರು ಹೆಚ್ಚಿಗೆ ಸಿಗದಿದ್ದರೆ ಒಬ್ಬ ಬ್ರಾಹ್ಮಣನನ್ನು ಕರೆದು ಅವನನ್ನು ಪಿತೃಸ್ಥಾನದಲ್ಲಿ ಕುಳ್ಳಿರಿಸಿ ದೇವರ ಸ್ಥಾನದಲ್ಲಿ ಸಾಲಿಗ್ರಾಮ ಇತ್ಯಾದಿಗಳನ್ನು ಇಟ್ಟು, ಸಂಕಲ್ಪವನ್ನು ಮಾಡಿ ಶ್ರಾದ್ಧವನ್ನು ಮಾಡಬೇಕು ಮತ್ತು ಆ ಎಲೆಯನ್ನು ಹಸುವಿಗೆ ಕೊಡಬೇಕು ಅಥವಾ ನದಿ, ಕೆರೆ, ಸರೋವರ, ಬಾವಿ ಇತ್ಯಾದಿಗಳಲ್ಲಿ ವಿಸರ್ಜನೆ ಮಾಡಬೇಕು.
ಈ. ರಾಜಕಾರ್ಯ, ಕಾರಾಗೃಹವಾಸ, ರೋಗ ಅಥವಾ ಇತರ ಕಾರಣಗಳಿಂದಾಗಿ ತನಗೆ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಪುತ್ರ, ಶಿಷ್ಯ ಅಥವಾ ಬ್ರಾಹ್ಮಣರ ಮೂಲಕ ಶ್ರಾದ್ಧವನ್ನು ಮಾಡಿಸಬೇಕು.
ಉ. ಸಂಕಲ್ಪ ವಿಧಿಯನ್ನು ಮಾಡಬೇಕು, ಅಂದರೆ ಪಿಂಡದಾನವನ್ನು ಹೊರತುಪಡಿಸಿ ಬಾಕಿ ಎಲ್ಲ ವಿಧಿಗಳನ್ನು ಮಾಡಬೇಕು.
ಊ. ಬ್ರಹ್ಮಾರ್ಪಣವಿಧಿಯನ್ನು ಮಾಡಬೇಕು, ಅಂದರೆ ಬ್ರಾಹ್ಮಣನನ್ನು ಕರೆದು ಅವನು ಕೈಕಾಲುಗಳನ್ನು ತೊಳೆದುಕೊಂಡ ಮೇಲೆ ಅವನನ್ನು ಆಸನದ ಮೇಲೆ ಕುಳ್ಳಿರಿಸಿ ಪಂಚೋಪಚಾರ ಪೂಜೆ ಮಾಡಿ ಭೋಜನ ಬಡಿಸಬೇಕು.
ಎ. ಹೋಮಶ್ರಾದ್ಧ ಮಾಡಬೇಕು, ಅಂದರೆ ಹಣ ಮತ್ತು ಬ್ರಾಹ್ಮಣರು ಇಲ್ಲದಿದ್ದರೆ ಅನ್ನವನ್ನು ಬೇಯಿಸಿ ‘ಊದೀರತಾಮವರ ಈ ಸೂಕ್ತದ ಪ್ರತಿಯೊಂದು ಋಚೆಯನ್ನು ಹೇಳಿ ಹೋಮವನ್ನು ಮಾಡಬೇಕು.
ಏ. ಮೇಲೆ ಹೇಳಿದ ಯಾವುದನ್ನೂ ಮಾಡಲು ಸಾಧ್ಯವಿಲ್ಲದಿದ್ದರೆ ಮುಂದೆ ಹೇಳಿದಂತೆ ಶ್ರಾದ್ಧವನ್ನು ಮಾಡಬೇಕು.
೧. ಉದಕಪೂರ್ಣ ಕುಂಭವನ್ನು (ನೀರು ತುಂಬಿದ ತಂಬಿಗೆ) ನೀಡಬೇಕು.
೨. ಸ್ವಲ್ಪ ಅನ್ನವನ್ನು ಕೊಡಬೇಕು.
೩. ಎಳ್ಳನ್ನು ಅರ್ಪಿಸಬೇಕು.
೪. ಸ್ವಲ್ಪ ದಕ್ಷಿಣೆ ಕೊಡಬೇಕು.
೫. ಯಥಾ ಶಕ್ತಿ ಧಾನ್ಯ ಕೊಡಬೇಕು.
೬. ಹಸುವಿಗೆ ಹುಲ್ಲನ್ನು ಹಾಕಬೇಕು.
೭. ವಿಧಿ ಮುಂತಾದವುಗಳನ್ನು ಮಾಡದೇ ಪಿಂಡವನ್ನು ಕೊಡಬೇಕು.
೮. ಸ್ನಾನ ಮಾಡಿ ಎಳ್ಳು ನೀರಿನಿಂದ ಪಿತೃತರ್ಪಣ ಕೊಡಬೇಕು.
೯. ಶ್ರಾದ್ಧದ ತಿಥಿಯಂದು ಉಪವಾಸ ಮಾಡಬೇಕು.
೧೦. ಶ್ರಾದ್ಧದ ದಿನ ಶ್ರಾದ್ಧವಿಧಿಯನ್ನು ಓದಬೇಕು.
ಐ. ಮೇಲೆ ಹೇಳಿದ ಯಾವುದನ್ನೂ ಮಾಡಲು ಸಾಧ್ಯವಾಗದೇ ಇದ್ದಾಗ ಮುಂದೆ ನೀಡಿದಂತೆ ಶ್ರಾದ್ಧವನ್ನು ಮಾಡಬೇಕು.
೧. ಅಡವಿಗೆ ಹೋಗಿ ಎರಡೂ ಕೈಗಳನ್ನು ಮೇಲೆ ಮಾಡಿ ತನ್ನ ಕಂಕಳುಗಳನ್ನು ತೋರಿಸುತ್ತಾ ಸೂರ್ಯಾದಿ ಲೋಕಪಾಲಕರಿಗೆ ಹುಲ್ಲುಕಡ್ಡಿಯನ್ನು ತೋರಿಸಿ ಮುಂದಿನಂತೆ ಹೇಳಬೇಕು, ‘ನನ್ನ ಹತ್ತಿರ ಶ್ರಾಧ್ಧೋಪಯೋಗಿ ಧನಸಂಪತ್ತು ಇತ್ಯಾದಿ ಏನೂ ಇಲ್ಲ. ನಾನು ಎಲ್ಲ ಪಿತೃಗಳಿಗೆ ನಮಸ್ಕಾರ ಮಾಡುತ್ತೇನೆ. ನನ್ನ ಭಕ್ತಿಯಿಂದ ನನ್ನ ಎಲ್ಲ ಪಿತೃಗಳು ತೃಪ್ತರಾಗಲಿ. ನಾನು ನನ್ನ ಕೈಗಳನ್ನು ಮೇಲೆ ಎತ್ತಿದ್ದೇನೆ.
೨. ನಿರ್ಮಾನುಷ್ಯ (ನಿರ್ಜನ) ಅರಣ್ಯಕ್ಕೆ ಹೋಗಿ ಕೈಗಳನ್ನು ಮೇಲೆತ್ತಿ ‘ನಾನು ನಿರ್ಧನ (ಧನರಹಿತ) ಮತ್ತು ಅನ್ನರಹಿತವಾಗಿದ್ದೇನೆ. ನನ್ನನ್ನು ಪಿತೃಋಣದಿಂದ ಮುಕ್ತಗೊಳಿಸಿರಿ ಎಂದು ಗಟ್ಟಿಯಾಗಿ ಹೇಳಬೇಕು.
೩. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಳಬೇಕು.
ಮೇಲಿನ ಎಲ್ಲ ಪ್ರಕಾರಗಳಿಂದ ಪ್ರತಿವರ್ಷ ಬರುವ ಶ್ರಾದ್ಧದ ದಿನ ಪಿತೃಗಳನ್ನು ಉದ್ದೇಶಿಸಿ ಯಾವುದಾದರೊಂದು ಶ್ರಾದ್ಧವನ್ನು ಮಾಡಬೇಕು, ಯಾವುದೇ ಕಾರಣಕ್ಕಾಗಿ ಶ್ರಾದ್ಧವನ್ನು ಮಾಡದೇ ಇರಬಾರದು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ ಎನ್ನುವುದು ತಿಳಿಯುತ್ತದೆ.