ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು !

‘ಯಾವುದಾದರೊಂದು ವರ್ಷ ಸಾಕಷ್ಟು ಮಳೆ ಬೀಳದಿದ್ದರೆ ನದಿ, ಹಳ್ಳ, ಕೊಳ ಒಣಗುತ್ತವೆ. ಇದರಿಂದ ಶ್ರೀ ಗಣೇಶಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲು ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿಯೂ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದ ತತ್ತ್ವಗಳಿಗನುಸಾರ ಆಚರಿಸಿದರೆ ಅದು ಧರ್ಮಶಾಸ್ತ್ರಕ್ಕೆ ಸಮ್ಮತವಾಗಿರುತ್ತದೆ. ಇದಕ್ಕನುಸಾರ ಬರಗಾಲದ ಸಮಯದಲ್ಲಿ ಶ್ರೀ ಗಣೇಶ ಮೂರ್ತಿಯ ವಿಸರ್ಜನೆಗೆ ಮುಂದಿನ ಪರ್ಯಾಯಗಳನ್ನು ಉಪಯೋಗಿಸಬಹುದು.

೧. ಚಿಕ್ಕ ಮೂರ್ತಿಯನ್ನು ಪೂಜಿಸುವುದು

ಅ. ಪ್ರತಿವರ್ಷ ದೊಡ್ಡ ಮೂರ್ತಿಯನ್ನು ತರುವ ರೂಢಿಯಿದ್ದರೂ, ಬರಗಾಲದಲ್ಲಿ ವಿಸರ್ಜನೆ ಸುಲಭವಾಗಿ ಆಗುವಂತಹ ಚಿಕ್ಕ (೬-೭ ಇಂಚು ಎತ್ತರದ) ಮೂರ್ತಿಯನ್ನು ಪೂಜಿಸಬೇಕು.

ಆ. ಉತ್ತರಪೂಜೆಯ ನಂತರ ಮೂರ್ತಿಯನ್ನು ಮನೆಯ ಹೊರಗೆ ಒಯ್ಯಬೇಕು. ತುಳಸಿ ವೃಂದಾವನದ ಹತ್ತಿರ ಅಥವಾ ಅಂಗಳದಲ್ಲಿ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಮೂರ್ತಿಯನ್ನು ಆ ನೀರಿನಲ್ಲಿ ವಿಸರ್ಜನೆ ಮಾಡಬೇಕು. ನಗರಗಳಲ್ಲಿ ಬಡಾವಣೆಗಳಲ್ಲಿ (‘ಫ್ಲ್ಯಾಟ್‌ಗಳಲ್ಲಿ) ಇರುವವರಿಗೆ ತುಳಸಿ ವೃಂದಾವನ / ಅಂಗಳ ಲಭ್ಯವಿಲ್ಲದಿದ್ದರೆ ಅವರು ಮನೆಯಲ್ಲೇ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ವಿಸರ್ಜನೆ ಮಾಡಬೇಕು.

ಇ. ಮೂರ್ತಿಯು ನೀರಿನಲ್ಲಿ ಪೂರ್ತಿ ಕರಗಿದ ನಂತರ ಆ ನೀರು ಮತ್ತು ಮಣ್ಣು ಕಾಲಿನಡಿ ಬರದಂತೆ ಮಂದಾರ, ಆಲ, ಅರಳೀ ಮುಂತಾದ ಸಾತ್ತ್ವಿಕ ಮರಗಳ ಬುಡದಲ್ಲಿ ಹಾಕಬೇಕು.