ಅಲಹಾಬಾದ್ ಉಚ್ಚನ್ಯಾಯಾಲಯದಿಂದ ‘ಲಿವ್ ಇನ್ ರಿಲೇಶನ್‌ಶಿಪ್’ ನಲ್ಲಿ ವಾಸಿಸುತ್ತಿರುವ ವಿವಾಹಿತ ಮಹಿಳೆಗೆ ರಕ್ಷಣೆ ನೀಡಲು ನಕಾರ

ಭದ್ರತೆಯನ್ನು ಒದಗಿಸಿದರೆ, ಒಂದು ರೀತಿಯಲ್ಲಿ ಅದು ಅಕ್ರಮ ಸಂಬಂಧವನ್ನು ಒಪ್ಪಿಗೆ ನೀಡಿದಂತೆ ಆಗುತ್ತದೆ ! – ನ್ಯಾಯಾಲಯದಿಂದ ಸ್ಪಷ್ಟನೆ

ಪ್ರಯಾಗರಾಜ (ಉತ್ತರಪ್ರದೇಶ) – ತನ್ನ ಪತಿಯನ್ನು ಬಿಟ್ಟು ಇತರ ವ್ಯಕ್ತಿಯೊಂದಿಗೆ ‘ಲಿವ್ – ಇನ್ ರಿಲೇಶನ್ ಶಿಪ್’ ನಲ್ಲಿ ವಾಸಿಸುತ್ತಿರುವ ವಿವಾಹಿತ ಮಹಿಳೆಗೆ ಭದ್ರತೆ ನೀಡಲು ಅಲಾಹಾಬಾದ ಉಚ್ಚನ್ಯಾಯಾಲಯವು ನಿರಾಕರಿಸಿದೆ. ಮಹಿಳೆಯು ಮತ್ತು ಆಕೆಯ ‘ಲಿವ್ ಇನ್’ನಲ್ಲಿರುವ ಸಂಗಾತಿ(ಪ್ರಿಯಕರನೊಂದಿಗೆ ವಾಸಿಸುತ್ತಿದ್ದ)ಯು ಭದ್ರತೆ ನಿಡುವಂತೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಅದೇ ರೀತಿ ಅವರಿಗೆ ೫,೦೦೦ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ‘ಇತರ ಸಮುದಾಯಗಳು ಮತ್ತು ಜಾತಿಗಳ ವ್ಯಕ್ತಿಯೊಂದಿಗೆ ವಾಸಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಭದ್ರತೆ ನೀಡುವುದಕ್ಕೆ ನಮ್ಮ ವಿರೋಧವಿಲ್ಲ,’ ಎಂದು ಸಹ ನ್ಯಾಯಾಲಯವು ಸ್ಪಷ್ಟಪಡಿಸಿದೆ.

೧. ನ್ಯಾಯಾಲಯವು, ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ಈಗಾಗಲೇ ಮದುವೆಯಾದ ಮತ್ತು ಕಾನೂನನ್ನು ಪಾಲಿಸುವ ಯಾವುದೇ ವ್ಯಕ್ತಿಯು ಅಕ್ರಮ ಸಂಬಂಧಕ್ಕಾಗಿ ನ್ಯಾಯಾಲಯದ ಬಳಿ ರಕ್ಷಣೆಗಾಗಿ ಬೇಡಿಕೆ ಸಲ್ಲಿಸಲು ಸಾಧ್ಯವಿಲ್ಲ; ಏಕೆಂದರೆ ಅಕ್ರಮ ಸಂಬಂಧಗಳು ಈ ದೇಶದ ಸಾಮಾಜಿಕ ಮಿತಿಯೊಳಗೆ ಬರುವುದಿಲ್ಲ. ನ್ಯಾಯಾಲಯದಿಂದ ರಕ್ಷಣೆ ಒದಗಿಸಿದರೆ, ಅದು ಅಕ್ರಮ ಸಂಬಂಧವನ್ನು ಒಪ್ಪಿಕೊಂಡಂತಾಗುತ್ತದೆ.

೨. ಅರ್ಜಿ ಸಲ್ಲಿಸಿದ ಮಹಿಳೆಯ ಪ್ರಕಾರ, ಆಕೆಯ ಪತಿಯು ಆಕೆಗೆ ಹೊಡೆಯುತ್ತಿದ್ದನು. ಆದ್ದರಿಂದ ಅವಳು ಅವನನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ವಾಸಿಸಲು ಪ್ರಾರಂಭಿಸಿದಳು; ಆದರೆ ಪತಿಯು ತನ್ನ ಪ್ರಿಯಕರನ ಮನೆಗೆ ನುಗ್ಗಿ ಅವರ ಶಾಂತಿಯುತ ಜೀವನಕ್ಕೆ ಅಡ್ಡಿಪಡಿಸಿದನು.

೩. ನ್ಯಾಯಾಲಯವು, ಮಹಿಳೆಯ ಪತಿಯು ಆಕೆಯ ಸಂಗಾತಿಯ ಮನೆಗೆ ನುಗ್ಗಿದರೆ ಅದು ಕ್ರಿಮಿನಲ್ ಪ್ರಕರಣ ಎಂದಾಗುತ್ತದೆ. ಅದಕ್ಕಾಗಿ ಮಹಿಳೆಯು ಖಂಡಿತವಾಗಿಯೂ ಪೊಲೀಸರಿಗೆ ದೂರು ನೀಡಬಹುದು ಎಂದೂ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಅದೇ ರೀತಿ ನ್ಯಾಯಾಲಯವು ಮಹಿಳೆಗೆ ವಿಚ್ಛೇದನಕ್ಕಾಗಿ ಕಾನೂನು ವಿಧಾನವನ್ನು ಅನುಸರಿಸುವಂತೆ ಸೂಚಿಸಿದೆ.