ಪಿ.ಎಫ್.ಐ.ಸಂಘಟನೆಯ ಇಬ್ಬರು ಸದಸ್ಯರ ವಿರುದ್ಧ ಭಯೋತ್ಪಾದನೆ ವಿಷಯದ ಪ್ರಕರಣದ ಅನ್ವೇಷಣೆಯನ್ನು ಸಿಬಿಐ.ಗೆ ಒಪ್ಪಿಸಲು ನಿರಾಕರಣೆ

ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖ್ನೌ ಖಂಡಪೀಠದ ತೀರ್ಪು

ಅಲಹಾಬಾದ್ ಉಚ್ಚ ನ್ಯಾಯಾಲಯ

ಲಕ್ಷ್ಮಣಪುರಿ (ಉತ್ತರಪ್ರದೇಶ)- ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖ್ನೌ ಖಂಡಪೀಠವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಈ ಜಿಹಾದಿ ವಿಚಾರಸರಣಿಯ ಸಂಘಟನೆಯ ಇಬ್ಬರ ಸದಸ್ಯರ ವಿರುದ್ಧದ ಆತಂಕವಾದ ವಿಷಯದ ಪ್ರಕರಣದ ಅನ್ವೇಷಣೆಯನ್ನು ಕೇಂದ್ರೀಯ ಅನ್ವೇಷಣಾ ವಿಭಾಗ (ಸಿಬಿಐ)ಕ್ಕೆ ಒಪ್ಪಿಸಲು ನಿರಾಕರಿಸಿದೆ. ಅನಶದ್ ಬದರುದ್ದಿನ್ ಮತ್ತು ಫಿರೋಜ್ ಕೆ.ಸಿ ಎಂಬುದು ಇಬ್ಬರು ಸದಸ್ಯರ ಹೆಸರುಗಳಾಗಿವೆ. ಆತಂಕವಾದ ನಿಗ್ರಹ ದಳವು ಇವರ ವಿರುದ್ಧ 16 ಫೆಬ್ರುವರಿ 2021 ರಂದು ಲಕ್ಷ್ಮಣಪುರಿಯಲ್ಲಿ ಅಪರಾಧವನ್ನು ದಾಖಲಿಸಿ ಅವರನ್ನು ಲಕ್ಷ್ಮಣಪುರಿಯ ಕುಕರೇಲ ಕಾಡಿನಿಂದ ಬಂಧಿಸಿತ್ತು.

ಆರೋಪಿ ಅನಶದ್ ಬದರುದ್ದಿನ್ ಮತ್ತು ಅವನ ಸಹೋದರ ಅಜಹರ್ ಇವರು ಈ ಪ್ರಕರಣದ ಅನ್ವೇಷಣೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಆರೋಪಿಯ ಪರ ವಕೀಲರು ಮಹಮ್ಮದ್ ತಾಹಿರ ಮತ್ತು ಎಸ್‍ಎಂ ಅಲ್ವಿ ಇವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಹೇಳಿದುದೇನೆಂದರೆ ಈ ಇಬ್ಬರು ಆರೋಪಿಗಳು ಪಿ.ಎಫ್.ಐ.ನ ಸದಸ್ಯರಾಗಿರುವುದರಿಂದ ಅನ್ವೇಷಣಾ ವಿಭಾಗವು ಅನ್ವೇಷಣೆಯಲ್ಲಿ ಆರೋಪಿಗಳ ಜೊತೆ ಪಕ್ಷಪಾತ ಮಾಡುತ್ತಿದೆ. ಆತಂಕವಾದ ನಿಗ್ರಹ ದಳಕ್ಕೆ ಅನ್ವೇಷಣೆಯ ಅಧಿಕಾರವಿಲ್ಲದಿದ್ದರೂ ಅದು ಈ ಪ್ರಕರಣದ ಅನ್ವೇಷಣೆಯನ್ನು ಪೂರ್ಣಗೊಳಿಸಿ ಆರೋಪಪತ್ರವನ್ನು ಸಹ ದಾಖಲಿಸಿದೆ. ಸಂಬಂಧಿತ ನ್ಯಾಯಾಲಯಕ್ಕೂ ಈ ಪ್ರಕರಣದ ನೋಂದಣಿ ಮಾಡುವ ಅಧಿಕಾರವಿರುವುದಿಲ್ಲ.

ನ್ಯಾಯಾಲಯವು ಇದರ ಬಗ್ಗೆ ಹೇಳುವಾಗ, ಈ ಪ್ರಕರಣದ ಅನ್ವೇಷಣೆಯು ಪೂರ್ಣವಾಗಿದ್ದು ಆರೋಪಪತ್ರವು ಸಹ ದಾಖಲಾಗಿದೆ. ಆತಂಕವಾದ ನಿಗ್ರಹ ದಳವು ಆರೋಪಿಗಳೊಂದಿಗೆ ಪಕ್ಷಪಾತದ ವರ್ತನೆ ಮಾಡುತ್ತಿದೆ ಎಂಬಂತಹ ಯಾವುದೇ ಪುರಾವೆಗಳನ್ನು ನೀಡಲು ಆರೋಪಿಗಳಿಂದಾಗಿಲ್ಲ ಎಂದು ಹೇಳಿದೆ.