೨೦೨೫ ರ ತನಕ ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಯುದ್ಧ !

ಅಮೇರಿಕಾದ ಗುಪ್ತಚರ ವಿಭಾಗದ ದಾವೆ

ವಾಷಿಂಗ್ಟನ್ (ಅಮೇರಿಕಾ) – ೨೦೨೫ ರ ವೇಳೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಯುದ್ಧವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾದ ನ್ಯಾಶನಲ್ ಇಂಟಲಿಜನ್ಸ್ ಕೌನ್ಸಿಲ್ ಹೇಳಿದೆ. ಈ ಸಂಸ್ಥೆಯು ‘ಗ್ಲೋಬಲ್ ಟ್ರೆಂಡ್ಸ್ ರಿಪೋರ್ಟ್’ ಅಮೇರಿಕಾದ ಸರಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಇದನ್ನು ಉಲ್ಲೇಖಿಸಿದೆ. ಈ ಯುದ್ಧವು ಹಲವಾರು ದಿನಗಳವರೆಗೆ ನಡೆಯಲಿದ್ದು ಎರಡೂ ದೇಶಗಳ ಅನೇಕ ಸೈನಿಕರು ಬಲಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ವರದಿಯನ್ನು ಜಗತ್ತಿನ ಎಲ್ಲ ದೇಶಗಳು ಮತ್ತು ಗೂಢಾಚಾರ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ.

ಈ ವರದಿಯಲ್ಲಿ ಯುದ್ಧದ ಕಾರಣವನ್ನೂ ಹೇಳಿದೆ. ಈ ೫ ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗಳಾಗಲಿವೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಸರಕಾರವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಯುದ್ಧ ಪ್ರಾರಂಭಿಸಲಿದೆ.

ಪರಮಾಣು ಯುದ್ಧದ ಸಾಧ್ಯತೆ ಇಲ್ಲ

ಉಭಯ ದೇಶಗಳ ನಡುವೆ ಯುದ್ಧವು ಭುಗಿಲೆದ್ದರೂ ಅದು ಪರಮಾಣು ಯುದ್ಧವಾಗಿ ಬದಲಾಗುವ ಸಾಧ್ಯತೆ ಇಲ್ಲ ಎಂದು ವರದಿಯಲ್ಲಿ ಹೇಳಿದೆ. ಪರಮಾಣು ಬಾಂಬ್ ನಿಂದ ದಾಳಿ ಮಾಡುವ ತಪ್ಪು ಹೆಜ್ಜೆಯನ್ನು ಉಭಯ ದೇಶಗಳ ಸರಕಾರಗಳು ಇಡಲಾರವು. ಯುದ್ಧದಿಂದ ಮುಂದಿನ ಅನೇಕ ವರ್ಷಗಳಲ್ಲಿ ಉಭಯ ದೇಶಗಳು ಮತ್ತು ದಕ್ಷಿಣ ಏಷ್ಯಾವು ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು, ಎಂದು ಹೇಳಿದೆ.

ಭಾರತ ಮತ್ತು ಚೀನಾ ನಡುವಿನ ಪುನಃ ಸಂಘರ್ಷ; ಆದರೆ ಯುದ್ಧವಿಲ್ಲ !

ಈ ವರದಿಯ ಪ್ರಕಾರ, ಭಾರತ ಮತ್ತು ಚೀನಾ ನಡುವೆ ಗಲವಾನ ಕಣಿವೆಯಂತೆ ಮತ್ತೊಂದು ಘಟನೆ ಐದು ವರ್ಷಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇದಲ್ಲದೆ ಭಾರತ ಮತ್ತು ಚೀನಾ ನಡುವೆ ಯಾವುದೇ ಯುದ್ಧ ನಡೆಯುವುದಿಲ್ಲ, ಎಂದು ಹೇಳಿದೆ.

ನೀರಿನ ಕಾರಣದಿಂದಲೂ ಭಾರತ-ಪಾಕ್ ಯುದ್ಧದ ಸಾಧ್ಯತೆ

೨೦೨೫ ರ ವೇಳೆಗೆ ಪಾಕಿಸ್ತಾನವು ತೀವ್ರವಾಗಿ ನೀರಿನ ಕೊರತೆಯನ್ನು ಎದುರಿಸಲಿದೆ ಅಲ್ಲಿ ನೀರಿನ ಸಂರಕ್ಷಣೆಗಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಮಳೆನೀರಿನ ಬಗ್ಗೆಯೂ ಯಾವುದೇ ಆಯೋಜನೆ ಇಲ್ಲ. ಅದಕ್ಕಾಗಿಯೇ ಹೆಚ್ಚಿನ ಜನಸಂಖ್ಯೆಯು ಮುಂದಿನ ೫ ವರ್ಷಗಳಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಸರಕಾರದ ವಿರುದ್ಧ ದೇಶದ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತದೆ ಮತ್ತು ಅದರಿಂದ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನವು ಭಾರತದ ಜೊತೆ ಯುದ್ಧ ಮಾಡಲು ಪ್ರಯತ್ನಿಸುತ್ತದೆ ಎಂದು ವರದಿ ತಿಳಿಸಿದೆ.