ಆಪತ್ಕಾಲದಲ್ಲಿ ಮಹಾಶಿವರಾತ್ರಿಯನ್ನು ಹೇಗೆ ಆಚರಿಸಬೇಕು ?

ಮಹಾಶಿವರಾತ್ರಿಯನ್ನು ಎಲ್ಲೆಡೆ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾಘ ಕೃಷ್ಣ ಪಕ್ಷ ಚತುರ್ದಶಿ ತಿಥಿಗೆ (೧೧ ಮಾರ್ಚ್ ೨೦೨೧ ರಂದು) ಬರುವ ಮಹಾಶಿವರಾತ್ರಿಯಂದು ಶಿವನ ವ್ರತವನ್ನು ಮಾಡುತ್ತಾರೆ. ಉಪವಾಸ, ಪೂಜೆ ಮತ್ತು ಜಾಗರಣೆ ಇವು ಮಹಾಶಿವರಾತ್ರಿ ವ್ರತದ ಮೂರು ಅಂಗಗಳಾಗಿವೆ.

ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಈ ವ್ರತವನ್ನು ಎಂದಿನಂತೆ ಆಚರಿಸಲು ಕೆಲವೊಂದು ನಿರ್ಬಂಧಗಳಿರಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು?, ಮಹಾಶಿವರಾತ್ರಿಯಂದು ಶಿವತತ್ತ್ವದ ಲಾಭವನ್ನು ಪಡೆದುಕೊಳ್ಳಲು ಯಾವ ಕೃತಿಯನ್ನು ಮಾಡಬೇಕು?, ಈ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

(ಟಿಪ್ಪಣಿ : ಈ ಅಂಶಗಳು ಯಾವ ಸ್ಥಳದಲ್ಲಿ ಮಹಾಶಿವರಾತ್ರಿಯ ವ್ರತವನ್ನು ಎಂದಿನಂತೆ ಆಚರಿಸಲು ನಿರ್ಬಂಧವಿದೆ ಅಥವಾ ಕಟ್ಟುಪಾಡುಗಳಿವೆ, ಅಂತಹವರಿ ಗಾಗಿ ಇದೆ. ಯಾವ ಸ್ಥಳದಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಎಂದಿನಂತೆ ವ್ರತವನ್ನು ಮತ್ತು ದೇವರ ದರ್ಶನವನ್ನು ಪಡೆದುಕೊಳ್ಳಲು ಸಾಧ್ಯವಿದೆಯೋ, ಆ ಸ್ಥಳದಲ್ಲಿ ಎಂದಿನಂತೆ ವ್ರತವನ್ನು ಆಚರಿಸಬೇಕು)

ಶ್ರೀ. ಚೇತನ ರಾಜಹಂಸ

ಅ. ಶಿವಪೂಜೆಯ ಪರ್ಯಾಯ

೧. ಕೊರೋನಾ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳಿಂದ ಯಾರಿಗೆ ಮಹಾಶಿವರಾತ್ರಿಯಂದು ಶಿವಮಂದಿರಕ್ಕೆ ಹೋಗಲು ಸಾಧ್ಯವಿಲ್ಲವೋ ಅವರು ತಮ್ಮ ಮನೆಯ ಶಿವಲಿಂಗದ ಪೂಜೆಯನ್ನು ಮಾಡಬೇಕು.

೨. ಒಂದು ವೇಳೆ ಶಿವಲಿಂಗ ಉಪಲಬ್ಧವಿಲ್ಲದಿದ್ದಲ್ಲಿ, ಶಿವನ ಚಿತ್ರದ ಪೂಜೆಯನ್ನು ಮಾಡಬೇಕು.

೩. ಶಿವನ ಚಿತ್ರ ಕೂಡ ಲಭ್ಯವಿಲ್ಲದಿದ್ದರೆ, ಮಣೆಯ ಮೇಲೆ ಶಿವಲಿಂಗದ ಅಥವಾ ಶಿವನ ಚಿತ್ರವನ್ನು ಬಿಡಿಸಿ ಅದರ ಪೂಜೆಯನ್ನು ಮಾಡಬೇಕು.

೪. ಇದರಲ್ಲಿ ಯಾವುದೂ ಸಾಧ್ಯವಿಲ್ಲದಿದ್ದರೆ, ಶಿವನ ‘ಓಂ ನಮಃ ಶಿವಾಯ |’ ಈ ನಾಮಮಂತ್ರವನ್ನು ಬರೆದು ಅದನ್ನು ಪೂಜಿಸಬಹುದು.’ ಶ್ರಾವಣ ಸೋಮವಾರದಂದು ಉಪವಾಸವನ್ನು ಮಾಡಿ ಶಿವನನ್ನು ವಿಧಿವತ್ತಾಗಿ ಪೂಜೆಯನ್ನು ಮಾಡಲು ಇಚ್ಛಿಸುವವರೂ ಈ ರೀತಿ ಮಾಡಬಹುದು.

೫. ಮಾನಸಪೂಜೆ : ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ, ಇದು ಅಧ್ಯಾತ್ಮದ ಒಂದು ಮಹತ್ವದ ಸಿದ್ಧಾಂತವಾಗಿದೆ. ಯಾವ ರೀತಿ ಬಾಂಬ್‍ಗಿಂತ ಅಣುಬಾಂಬ್ ಮತ್ತು ಅದಕ್ಕಿಂತ ಪರಮಾಣು ಬಾಂಬ್ ಅಧಿಕ ಶಕ್ತಿಶಾಲಿಯಾಗಿರುತ್ತದೆಯೋ, ಅದರಂತೆ ಸ್ಥೂಲ ವಿಷಯಗಳಿಗಿಂತ ಸೂಕ್ಷ್ಮ ವಿಷಯದಲ್ಲಿ ಅಧಿಕ ಸಾಮಥ್ರ್ಯವಿರುತ್ತದೆ.

ಈ ತತ್ತ್ವಗಳಿನುಸಾರ ಪ್ರತ್ಯಕ್ಷ ಶಿವಪೂಜೆಯನ್ನು ಮಾಡುವುದು ಸಾಧ್ಯವಿಲ್ಲದಿದ್ದರೆ ಶಿವನ ಮಾನಸಪೂಜೆಯನ್ನೂ ಮಾಡಬಹುದು.

ಶಿವನ ಮಾನಸಪೂಜೆ ಸನಾತನದ www.sanatan.org  ಈ ಜಾಲತಾಣದಲ್ಲಿ www.sanatan.org/kannada/58.html ಈ ಲಿಂಕ್ ನಲ್ಲಿ ಲಭ್ಯವಿದೆ.

ಆ. ‘ಓಂ ನಮಃ ಶಿವಾಯ’ ಈ ನಾಮಜಪವನ್ನು ಎಷ್ಟು ಮಾಡಲು ಸಾಧ್ಯವಿದೆಯೋ ಅಷ್ಟು ಹೆಚ್ಚು ನಾಮಜಪ ಮಾಡಿ : ಕಲಿಯುಗದಲ್ಲಿ ನಾಮ ಸ್ಮರಣೆಯೇ ಸಾಧನೆಯೆಂದು ಹೇಳಲಾಗಿದೆ. ಮಹಾಶಿವರಾತ್ರಿಯಂದು ೧ ಸಾವಿರ ಪಟ್ಟುಗಳಷ್ಟು ಕಾರ್ಯನಿರತವಾಗುವ ಶಿವತತ್ತ್ವದಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆದುಕೊಳ್ಳಲು ‘ಓಂ ನಮಃ ಶಿವಾಯ’ ಈ ನಾಮಜಪವನ್ನು ಎಷ್ಟು ಸಾಧ್ಯವಿದೆಯೋ ಅಷ್ಟು ಅಧಿಕ ಮಾಡಬೇಕು. ಆ ಸಮಯದಲ್ಲಿ ನಾವು ಶಿವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಿದ್ದೇವೆ ಎಂದು ಭಾವವನ್ನು ಇಟ್ಟುಕೊಳ್ಳಬೇಕು.

ಇ. ಶಿವತತ್ತ್ವವನ್ನು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿರಿ ! : ಶಿವತತ್ತ್ವ ಗ್ರಹಣವಾಗಲು ನಾವು ಆ ದಿನದಂದು ಮನೆಯ ಬಾಗಿಲಿನ ಎದುರಿಗೆ ಶಿವತತ್ತವನ್ನು ಆಕರ್ಷಿಸುವ ರಂಗೋಲಿಯನ್ನು ಬಿಡಿಸಬೇಕು.

ದೃಷ್ಟಿಕೋನ : ಪ್ರಸ್ತುತ ಎಲ್ಲೆಡೆ ಕೊರೋನಾದ ಎರಡನೇ ಅಲೆಯ ಭಯ ಆವರಿಸಿದೆ. ಜಗತ್ತಿನಾದ್ಯಂತ ಅನೇಕ ಕಡೆ ನೈಸರ್ಗಿಕ ವಿಕೋಪಗಳಾಗುತ್ತಿವೆ. ಭಾರತ ಮತ್ತು ಚೀನಾದ ಸ್ಥಿತಿ ಉದ್ವಿಗ್ನವಾಗಿದೆ. ಈ ಘಟನೆಗಳು ಆಪತ್ಕಾಲದ ಸಂಕೇತಗಳಾಗಿವೆ. ಅನೇಕ ಸಂತರು ಮತ್ತು ಭವಿಷ್ಯಕಾರರು ಹೇಳಿದಂತೆ ಆಪತ್ಕಾಲ ಆರಂಭವಾಗಿದೆ. ಆಪತ್ಕಾಲವನ್ನು ಪಾರು ಮಾಡಲಿಕ್ಕಿದ್ದರೆ ಸಾಧನೆಯ ಬಲ ಆವಶ್ಯಕವಾಗಿದೆ. ಅದಕ್ಕಾಗಿ ಎಂದಿನಂತೆ ವ್ರತ ಮಾಡಲು ಮಿತಿ ಇದ್ದರೆ, ಅದರಿಂದ ಬೇಸರ ಪಡದೇ ಹೆಚ್ಚೆಚ್ಚು ಪರಿಶ್ರಮ ವಹಿಸಿ ಸಾಧನೆ ಮಾಡಲು ಗಮನವನ್ನು ಕೇಂದ್ರೀಕರಿಸಿ. ಶಿವರಾತ್ರಿ ನಿಮಿತ್ತ ಭಗವಾನ ಶಿವನಲ್ಲಿ ಶರಣಾಗಿ ಪ್ರಾರ್ಥಿಸೊಣ. `ಹೇ ಶಿವಶಂಕರಾ ಸಾಧನೆ ಮಾಡಲು ನಮಗೆ ಶಕ್ತಿ, ಬುದ್ಧಿ ಹಾಗೂ ಪ್ರೇರಣೆ ನೀಡಿ. ನಮ್ಮ ಸಾಧನೆಯಲ್ಲಿ ಬರುವ ಅಡಚಣೆಗಳ ಲಯವಾಗಲಿ’ ಎಂದು ಶರಣಾಗತ ಭಾವದಿಂದ ಪ್ರಾರ್ಥನೆ.

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.