೧. ಉತ್ತಮ ಗುರುಸೇವಕ
ಶಂಕರನಿಗೆ ಮಹಾವಿಷ್ಣುವಿನ ಮೇಲೆ ಅಪಾರ ಶ್ರದ್ಧೆಯಿದೆ. ಅವನು ಮಹಾವಿಷ್ಣುವಿನ ಕಾಲ್ಗೆಳಗಿರುವ ಗಂಗೆಯನ್ನು ತನ್ನ ಶಿರದ ಮೇಲೆ ಇಟ್ಟುಕೊಂಡಿದ್ದಾನೆ.
೨. ಮಹಾತಪಸ್ವಿ ಮತ್ತು ಮಹಾಯೋಗಿ
ಶಿವನೊಬ್ಬನೇ ಸತತ ನಾಮಸ್ಮರಣೆಯನ್ನು ಮಾಡುವ ದೇವನಾಗಿದ್ದಾನೆ. ಶಿವನು ಯಾವಾಗಲೂ ಬಂಧ-ಮುದ್ರೆಗಳನ್ನು ಮಾಡಿ ಆಸನಸ್ಥನಾಗಿರುತ್ತಾನೆ. ನಿರಂತರ ತಪಶ್ಚರ್ಯವನ್ನು ಮಾಡುವುದರಿಂದ ಹೆಚ್ಚಾದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಶಿವನು ಗಂಗೆ, ಚಂದ್ರ, ಸರ್ಪ ಮುಂತಾದ ಶೀತಲತೆಯನ್ನು ಕೊಡುವ ವಸ್ತುಗಳನ್ನು ಉಪಯೋಗಿಸುತ್ತಾನೆ ಮತ್ತು ಹಿಮಭರಿತ ಕೈಲಾಸ ಪರ್ವತದಲ್ಲಿ ವಾಸಿಸುತ್ತಾನೆ.
೩. ಕೋಪಿಷ್ಠ
ತಾನು ಮಾಡುತ್ತಿರುವ ಅಖಂಡ ನಾಮಸ್ಮರಣೆಯನ್ನು ಶಿವನು ತಾನಾಗಿಯೇ ನಿಲ್ಲಿಸಿದರೆ ಅವನು ಶಾಂತನಾಗಿಯೇ ಇರುತ್ತಾನೆ, ಆದರೆ ನಾಮಸ್ಮರಣೆಯಲ್ಲಿ ಯಾರಾದರೂ ವಿಘ್ನವನ್ನುಂಟು ಮಾಡಿದರೆ (ಉದಾಹರಣೆಗೆ ಮದನನು ವಿಘ್ನ ತಂದಂತೆ) ಸಾಧನೆಯಿಂದ ಹೆಚ್ಚಿರುವ ತೇಜಸ್ಸು ಒಮ್ಮೆಲೆ ಹೊರಗೆ ಬರುತ್ತದೆ ಮತ್ತು ಎದುರಿಗಿರುವ ವ್ಯಕ್ತಿಗೆ ಅದನ್ನು ಸಹಿಸಲಾಗದಿರುವುದರಿಂದ ಅವನು ನಾಶವಾಗುತ್ತಾನೆ. ಇದನ್ನೇ `ಶಿವನು ಮೂರನೆಯ ಕಣ್ಣನ್ನು ತೆರೆದು ಭಸ್ಮ ಮಾಡಿದನು’ ಎನ್ನುತ್ತಾರೆ. ಶಿವನಿಗೆ ತೊಂದರೆ ಕೊಡುವ ವ್ಯಕ್ತಿಗೆ ಶೇ. ೧೦೦ ರಷ್ಟು ತೊಂದರೆಯಾದರೆ, ಶಿವನಿಗೆ ಕೇವಲ ಶೇ. ೦.೦೧ ರಷ್ಟು ತೊಂದರೆಯಾಗುತ್ತದೆ. ಈ ತೊಂದರೆಯಿಂದ ಶಿವನ ನಾಡಿಬಂಧವು ಬಿಟ್ಟು ಹೋಗುತ್ತದೆ; ಆದರೆ ಆಸನವು ಸ್ಥಿರವಾಗಿಯೇ ಇರುತ್ತದೆ. ಶಿವನು ಮತ್ತೆ ಬಂಧವನ್ನು ಹಾಕುತ್ತಾನೆ.
೪. ವೈರಾಗಿ
ವಿಷಯಭೋಗದ ಸಾಮಗ್ರಿಗಳು ಸಮೀಪದಲ್ಲಿದ್ದರೂ ಯಾರ ಚಿತ್ತವು ನಿರ್ವಿಕಾರವಾಗಿರುತ್ತದೆಯೋ, ಅವನು ಕೂಟಸ್ಥನಾಗಿರುತ್ತಾನೆ. ಪಾರ್ವತಿಯು ತೊಡೆಯ ಮೇಲೆ ಕುಳಿತಿರುವಾಗಲೂ ಶಿವನು ನಿರ್ವಿಕಾರನಾಗಿರುತ್ತಾನೆ, ಕಾಮವಾಸನೆಯು ಅವನನ್ನು ಸ್ಪರ್ಶಿಸುವುದಿಲ್ಲ. ಶಿವನು ನಿಜವಾದ ಜಿತೇಂದ್ರಿಯನಾಗಿದ್ದಾನೆ.
೫. ಇತರರ ಸುಖಕ್ಕಾಗಿ ಎಂತಹ ಕಷ್ಟವನ್ನೂ ಅನುಭವಿಸಲು ಸಿದ್ಧನಾಗಿರುವವನು
ಸಮುದ್ರಮಥನದಿಂದ ಉತ್ಪನ್ನವಾದ ಹಾಲಾಹಲ ವಿಷವು ಇಡೀ ವಿಶ್ವವನ್ನೇ ಸುಟ್ಟು ಹಾಕುತ್ತಿತ್ತು. ಆದರೆ ಯಾವ ದೇವರೂ ಅದನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಆಗ ಶಿವನು ಹಾಲಾಹಲವನ್ನು ಸೇವಿಸಿ ಜಗತ್ತನ್ನು ವಿನಾಶದಿಂದ ಕಾಪಾಡಿದನು. ವಿಷದ ಸೇವನೆಯಿಂದ ಅವನ ಕಂಠವು ನೀಲಿಗಪ್ಪಾಯಿತು ಮತ್ತು ಅವನಿಗೆ ನೀಲಕಂಠ ಎಂಬ ಹೆಸರು ಬಂದಿತು.
೬. ಮಹಾಕಾಳಿಯ ಆವೇಶವನ್ನು ಶಾಂತಗೊಳಿಸುವವನು
`ದೈತ್ಯರ ಸಂಹಾರ ಮಾಡುವಾಗ ಮಹಾಕಾಳಿಯು ಬಿರುಗಾಳಿಯಂತೆ ಭಯಂಕರವಾದಳು. ಅವಳನ್ನು ಶಾಂತ ಮಾಡುವುದು ಅಸಾಧ್ಯವಾಯಿತು ! ಆಗ ಶಂಕರನು ಶವರೂಪವನ್ನು ಧರಿಸಿದನು ಮತ್ತು ಅವಳ ಕಾಲನೃತ್ಯದ ದಾರಿಯಲ್ಲಿ ಆ ಶವ ಬಿದ್ದಿತು. ಅಸುರರ ಶವಗಳನ್ನು ತುಳಿಯುತ್ತ ಮಹಾಕಾಳಿಯು ಶಂಕರನ ಶವದ ಮೇಲೆ ಬಂದಳು. ಆ ಶವದ ಸ್ಪರ್ಶವಾದೊಡನೆ ಕಾಳರಾತ್ರಿಯ ನೃತ್ಯದ ಭಯಂಕರ ಬಿರುಗಾಳಿಯು ಶಾಂತವಾಯಿತು, ಆವೇಗವೂ ಶಾಂತವಾಯಿತು. ಇದೇ ಆ ಶಿವತ್ವ ! ಅದುವೇ ಪರಮತತ್ತ್ವ !’
– ಗುರುದೇವ ಡಾ. ಕಾಟೇಸ್ವಾಮೀಜಿ