ಜಮೀನು ಖರೀದಿ ಮತ್ತು ಗುತ್ತಿಗೆದಾರರಿಂದ ಮನೆ ಕಟ್ಟಿಸಿಕೊಳ್ಳುವಾಗ ವಂಚನೆಗೊಳಗಾಗದಂತೆ ಕಾನೂನುಬದ್ಧ ವಿಷಯಗಳನ್ನು ಪೂರ್ಣಗೊಳಿಸಿ !

ನಾವು ಅನೇಕ ಬಾರಿ ಖಾಲಿ ಸ್ಥಳವನ್ನು ಖರೀದಿಸುತ್ತೇವೆ ಅಥವಾ ಖಾಲಿ ಸ್ಥಳದಲ್ಲಿ ಕಟ್ಟಡವನ್ನು ಕಟ್ಟುತ್ತೇವೆ. ಎಲ್ಲಕ್ಕಿಂತ ಮೊದಲು ಆಪತ್ಕಾಲದ ದೃಷ್ಟಿಯಿಂದ ಕಟ್ಟಡ ಕಾಮಗಾರಿಗಾಗಿ ಸ್ಥಳವನ್ನು ಆಯ್ದುಕೊಳ್ಳುವಾಗ ಆ ಕುರಿತು ಎಲ್ಲ ಅಂಶಗಳನ್ನು ಪರಿಶೀಲಿಸಬೇಕು. ಖಾಲಿ ಜಾಗವನ್ನು ಖರೀದಿಸುವಾಗ ಅಥವಾ ಅಲ್ಲಿ ಕಟ್ಟಡ ಕಟ್ಟುವ ಮುನ್ನ ಅನೇಕ ಕಾಗದ ಪತ್ರಗಳನ್ನು ಪರಿಶೀಲಿಸುವುದು ಮಹತ್ವದ್ದಾಗಿರುತ್ತದೆ. ಆ ಸ್ಥಳದಲ್ಲಿ ಕಟ್ಟಡಕಾಮಗಾರಿ ಮಾಡಲಿಕ್ಕಿದ್ದರೆ ಅದಕ್ಕೂ ಅನೇಕ ಕಾಗದ ಪತ್ರಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಆ ಕುರಿತು ನಮಗೆ ಅಲ್ಪ ಜ್ಞಾನವಿರುವುದರಿಂದ ನಾವು ಸಂಬಂಧಪಟ್ಟ ಬಿಲ್ಡರ್‌ನನ್ನು ಅವಲಂಬಿಸಿರಬೇಕಾಗುತ್ತದೆ. ಅವರು ಹೇಳಿದಂತೆ ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಅದರಲ್ಲಿನ ಸೂಕ್ಷ್ಮ ವಿಷಯದ ಜ್ಞಾನವಿಲ್ಲದಿರುವುದರಿಂದ ಜನಸಾಮಾನ್ಯರು ಮೋಸಕ್ಕೊಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ರೀತಿ ಮೋಸಕ್ಕೊಳಗಾಗುವುದನ್ನು ತಡೆಗಟ್ಟಲು ಏನೆಲ್ಲ ಕಾಳಜಿ ವಹಿಸಬೇಕು, ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಶ್ರೀ. ಮಧುಸೂದನ ಕುಲಕರ್ಣಿ

೧. ಸ್ಥಳದ ಎಲ್ಲ ಕಾಗದಪತ್ರಗಳು ಕಾನೂನುರೀತ್ಯಾ ಯೋಗ್ಯವಿದೆಯೇ ಎಂದು ದೃಢಪಡಿಸಿಕೊಳ್ಳಬೇಕು !

ಖಾಲಿ ಸ್ಥಳವನ್ನು ಖರೀದಿಸುವಾಗ ಆ ಸ್ಥಳದ ಎಲ್ಲ ಕಾಗದಪತ್ರಗಳು ಕಾನೂನುರೀತ್ಯಾ ಸರಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮಹತ್ವದ್ದಾಗಿರುತ್ತದೆ. ಇದಕ್ಕಾಗಿ ನಾವು ಮುಂದಿನ ವಿಷಯಗಳನ್ನು ಖಚಿತಪಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಅ. ನಾವು ಯಾವ ವ್ಯಕ್ತಿಯಿಂದ ಸ್ಥಳವನ್ನು ಖರೀದಿಸಲಿರುವೆವೋ, ಅವರ ಬಳಿ ಆ ಸ್ಥಳದ ಮಾಲೀಕತ್ವವಿದೆ ಎಂದು ದೃಢ ಪಡಿಸಿಕೊಳ್ಳಬೇಕು.

ಆ. ನಾವು ಜಮೀನು ಖರೀದಿಸುವ ವ್ಯಕ್ತಿಯ ಬಳಿ ಆ ಜಮೀನಿನ ಮಾಲೀಕತ್ವವಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ‘೬ ಡಿ’ಯ ತಿದ್ದುಪಡಿ ನೋಂದಣಿ ನೋಡಬೇಕು. ಒಂದು ವೇಳೆ ನಗರದಲ್ಲಿ ಖರೀದಿಸುವುದಿದ್ದರೆ, ಆಸ್ತಿಪಾಸ್ತಿಯ ಕರಾರುಪತ್ರದ ಸಂಪೂರ್ಣ ಅಧ್ಯಯನ ಮಾಡಬೇಕು.

ಇ. ಆ ಸ್ಥಳದಲ್ಲಿ ಯಾರಿಂದಲೂ ಅತಿಕ್ರಮಣವಾಗಿಲ್ಲ, ಆ ಸ್ಥಳವನ್ನು ಒತ್ತೆ ಇಟ್ಟು ಯಾವುದೇ ರೀತಿಯ ಸಾಲವನ್ನು ಪಡೆದಿಲ್ಲವಲ್ಲ (ಒತ್ತೆ ಇಟ್ಟಿದ್ದರೆ ಅದರ ನೋಂದಣಿ ಆಸ್ತಿ ದಾಖಲೆ ಪತ್ರದಲ್ಲಿ ಇದ್ದೇ ಇರುತ್ತದೆ ಎಂದಿಲ್ಲ), ಹಾಗೆಯೇ ಆ ಸ್ಥಳದ ಸಂದರ್ಭದಲ್ಲಿ ಯಾವುದೇ ವಿವಾದವಿಲ್ಲವಲ್ಲ, ಎಂದು ಖಚಿತಪಡಿಸಿಕೊಳ್ಳಬೇಕು.

ಈ. ನಮಗೆ ತೋರಿಸಿದ ಸ್ಥಳ ಮತ್ತು ಆಸ್ತಿ ದಾಖಲೆ ಪತ್ರದಲ್ಲಿ ನಮೂದಿಸಲಾದ ಸ್ಥಳ ಇವೆರಡೂ ಒಂದೇ ಆಗಿದೆ ಎಂಬ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಹಾಗೆಯೇ ಆ ಕರಾರುಪತ್ರವು ೩ ತಿಂಗಳುಗಳ ಅವಧಿಯ ಒಳಗಿನದ್ದಾಗಿರಬೇಕು. ಕರಾರುಪತ್ರದ ಮೇಲಿನ ಕ್ಷೇತ್ರಫಲ ಮತ್ತು ತೋರಿಸಲಾದ ಕ್ಷೇತ್ರಫಲವು ಒಂದೇ ಆಗಿದೆಯಲ್ಲ, ಎಂದು ಖಚಿತಪಡಿಸಿಕೊಳ್ಳಬೇಕು. ಅದು ಇಲ್ಲದಿದ್ದರೆ, ಸಿಟಿ ಸರ್ವೆ ನಕಾಶೆ ಅಥವಾ ಅಳತೆ ನಕಾಶೆಯ ದುರಸ್ತಿ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಉ. ಈ ಸ್ಥಳದಿಂದ ಮುಖ್ಯ ರಸ್ತೆಗೆ ಹೋಗಲು ಯೋಗ್ಯ ರಸ್ತೆ ಇದೆಯಲ್ಲ ಮತ್ತು ಆ ಬಗ್ಗೆ ಯಾವುದೇ ವಿವಾದವಿಲ್ಲ ಎಂದೂ ಖಚಿತಪಡಿಸಿಕೊಳ್ಳಬೇಕು. ಹಾಗೆಯೇ ಈ ರಸ್ತೆಯ ಅಗಲವನ್ನು ಪರಿಶೀಲಿಸಬೇಕು. ಇದು ಖಾಸಗಿ ರಸ್ತೆ ಆಗಿರಬಾರದು ಮತ್ತು ಅದು ‘ಸರಕಾರಿ ರಸ್ತೆ’ ಎಂದು ದಾಖಲಾಗಿರುವ ಮತ್ತು ಅದಕ್ಕನುಸಾರ ಕಟ್ಟಡ ಕಟ್ಟಲು ಅನುಮತಿ ಸಿಗುವ ಬಗ್ಗೆ ದೃಢಪಡಿಸಿಕೊಳ್ಳಬೇಕು.

ಊ. ನಮಗೆ ತೋರಿಸುತ್ತಿರುವ ಸ್ಥಳ ಇತರ ಯಾರಿಗೂ ಮಾರಾಟವಾಗಿಲ್ಲ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಆ ಸ್ಥಳವಿರುವ ಕ್ಷೇತ್ರದ ಉಪನೋಂದಣಿ ಕಛೇರಿಗೆ ಹೋಗಿ, ಹಾಗೆಯೇ ಆ ಗ್ರಾಮದಲ್ಲಿ ಕೆಲಸ ಮಾಡುವ ತಲಾಟಿ, ತಾಲೂಕು ಭೂ ದಾಖಲೆಗಳ ಕಛೇರಿ ಇವುಗಳ ಪೈಕಿ ಸಂಬಂಧಿತ ಕಾರ್ಯಾಲಯದಲ್ಲಿ ಆ ಕುರಿತು ದೃಢಪಡಿಸಿಕೊಳ್ಳಬೇಕು.

ಎ. ಖರೀದಿಯ ಮೊದಲು ಎಲ್ಲ ಕಾಗದಪತ್ರಗಳನ್ನು ಅನುಭವಿ ವಾಸ್ತುಶಿಲ್ಪ ಅಭಿಯಂತರು ಮತ್ತು ನ್ಯಾಯವಾದಿಗಳಿಗೆ ತೋರಿಸಬೇಕು. ಹಾಗೆಯೇ ಆ ಸ್ಥಳದ ಬೆಲೆಯ ಬಗ್ಗೆ ಅವರ ಸಲಹೆ ಪಡೆಯಬೇಕು. ನಂತರವೇ ಸ್ಥಳ ಖರೀದಿಸುವ ನಿರ್ಣಯ ತೆಗೆದುಕೊಳ್ಳಬೇಕು.

ಏ. ಸ್ಥಳವನ್ನು ಖರೀದಿಸುವುದೆಂದು ನಿಶ್ಚಯವಾದ ನಂತರ ಮಾಲೀಕತ್ವದ ಹಕ್ಕುಪತ್ರ, ಹಾಗೆಯೇ ಮೇಲೆ ನಮೂದಿಸಿದ ಎಲ್ಲ ಕಾಗದಪತ್ರಗಳನ್ನು ಈ ಕ್ಷೇತ್ರದಲ್ಲಿ ನಮ್ಮ ಪರಿಚಯದ ನ್ಯಾಯವಾದಿಗಳಿಗೆ ತೋರಿಸಿ ಸ್ಥಳ ಖರೀದಿಯಲ್ಲಿ ಯಾವುದೇ ಕಾನೂನಿನ ತೊಡಕು ಇಲ್ಲದ ಬಗ್ಗೆ ನ್ಯಾಯವಾದಿಗಳಿಂದ ಶೋಧ ವರದಿ (ಸರ್ಚ ರಿಪೋರ್ಟ) ಮತ್ತು ಟೈಟಲ್ ಓಪಿನಿಯನ್ (ಮಾಲೀಕತ್ವದ ಬಗೆಗಿನ ಅಭಿಪ್ರಾಯ) ಪಡೆದುಕೊಳ್ಳಬೇಕು. ಅನಂತರವೇ ಮುಂದಿನ ಕಾರ್ಯಾಚರಣೆಯನ್ನು ಮಾಡಬೇಕು.

ಐ. ಅಲ್ಲಿನ ಅತ್ಯಧಿಕ ಮಾರಾಟವಿರುವ ಸ್ಥಳೀಯ ದಿನಪತ್ರಿಕೆಯಲ್ಲಿ ನಮ್ಮ ನ್ಯಾಯವಾದಿಗಳಿಂದ ಖರೀದಿಯ ಮೊದಲು ಸಾರ್ವಜನಿಕ ನೋಟಿಸ್ ಪ್ರಕಟಿಸಬೇಕು. ಆ ಸೂಚನೆಯಲ್ಲಿ ಸ್ಥಳೀಯ ಪೂರ್ಣವರದಿಯನ್ನು ನೀಡಿ ‘ಈ ಸ್ಥಳವನ್ನು ನಾವು ಖರೀದಿಸುವವರಿದ್ದೇವೆ. ಈ ಬಗ್ಗೆ ಯಾರದೇ ತಕರಾರು ಇದ್ದರೆ ಸ್ಥಳದ ಮೂಲ ಕಾಗದಪತ್ರಗಳನ್ನು ತೆಗೆದುಕೊಂಡು ೮ ರಿಂದ ೧೫ ದಿನಗಳಲ್ಲಿ ನಮ್ಮ ನ್ಯಾಯವಾದಿಗಳಿಗೆ ತಿಳಿಸಬೇಕು ಮತ್ತು ಕಾಗದಪತ್ರಗಳ ಕುರಿತು ಖಚಿತಪಡಿಸಿಕೊಳ್ಳಬೇಕು’, ಎಂಬ ವಿಷಯ ನೀಡಿ ಅದರಲ್ಲಿ ತಮ್ಮ ನ್ಯಾಯವಾದಿಗಳ ಸಂಪರ್ಕದ ವಿವರವನ್ನು ನೀಡಬೇಕು. ಈ ಬಗ್ಗೆ ಯಾರೂ ತಕರಾರು ಮಾಡದಿದ್ದರೆ ಅಥವಾ ಆಕ್ಷೇಪಣೆ ಮಾಡದಿದ್ದರೆ ಮಾತ್ರ ಆ ಸ್ಥಳವನ್ನು ಖರೀದಿಸಬೇಕು. ಈ ಸ್ಥಳ ಆತಿಕ್ರಮಣರಹಿತ ( Non encumbrance) ಎಂಬ ಪ್ರಮಾಣಪತ್ರವನ್ನು ಸಂಬಂಧಿತ ಕಾರ್ಯಾಲಯದಿಂದ ಪಡೆಯಬೇಕು.

೨. ಖಾಲಿ ಸ್ಥಳದಲ್ಲಿ ಕಟ್ಟಡ ಕಟ್ಟುವ ಮೊದಲು ಮುಂದಿನ ಕಾಗದಪತ್ರಗಳ ಬಗ್ಗೆಯೂ ಖಚಿತಪಡಿಸಿಕೊಳ್ಳಬೇಕು

ತಮ್ಮ ಜಮೀನು ಗ್ರಾಮಪಂಚಾಯಿತಿ ಅಥವಾ ನಗರಪಾಲಿಕೆ ಪ್ರದೇಶದಲ್ಲಿದ್ದರೂ, ನಿರ್ಮಾಣ ಕಾರ್ಯದ ಪರವಾನಿಗೆಗಾಗಿ ನೀವು ನಿರ್ಮಾಣ ಯೋಜನೆಯ ‘ನೀಲನಕ್ಷೆಯನ್ನು ಸಲ್ಲಿಸಬೇಕಾಗುತ್ತದೆ. ಈ ನಕ್ಷೆಯನ್ನು ಒಪ್ಪಿಗೆಗಾಗಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದಾಗ ಅದರಲ್ಲಿ ಸಿವಿಲ್ ಎಂಜಿನಿಯರ್ ಅಥವಾ ಆರ್ಕಿಟೆಕ್ಟ್ ಇವರ ಹಸ್ತಾಕ್ಷರ ಇರಬೇಕಾಗುತ್ತದೆ, ಆಗ ಮಾತ್ರ ನಕಾಶೆಯು ಒಪ್ಪಿಗೆ ಯಾಗುತ್ತದೆ, ಇಲ್ಲದಿದ್ದರೆ ಅದಕ್ಕೆ ಸ್ವೀಕೃತಿ ಸಿಗುವುದಿಲ್ಲ.

ಹೆಚ್ಚಿನ ನಕ್ಷೆಯಲ್ಲಿ ಬಿಲ್ಡರ್‌ನ ಹಸ್ತಾಕ್ಷರ ಇರುತ್ತದೆ; ಆದರೆ ಅವರು ಸಿವಿಲ್ ಎಂಜಿನಿಯರ್ ಆಗಿರುತ್ತಾರೆ ಎಂದಿಲ್ಲ. ಆದ್ದರಿಂದ ನಾವು ಮೋಸಕ್ಕೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಖಾಲಿ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸುವಾಗ ವಂಚನೆಗೊಳಗಾಗದಿರಲು ಈ ಮುಂದಿನ ದಾಖಲೆಪತ್ರಗಳನ್ನು ಪರಿಶೀಲಿಸಬೇಕು.

ಅ. ಸ್ಥಳದ ಆಸ್ತಿ ಮಾಲಿಕತ್ವದ ಹಕ್ಕು ಮತ್ತು ನೀಲನಕ್ಷೆಯನ್ನು ತಜ್ಞರಿಂದ ಪರಿಶೀಲಿಸಿಕೊಳ್ಳಬೇಕು.

ಆ. ನಗರಪಾಲಿಕೆ ಅಥವಾ ಗ್ರಾಮ ಪಂಚಾಯಿತಿಯ ನಿಯಮಗಳ ಪ್ರಕಾರ, ಆ ಸ್ಥಳದಲ್ಲಿ ನಿರ್ಮಾಣ ಯೋಜನೆಯ ನೀಲನಕ್ಷೆಯು ಸರಿಹೊಂದುತ್ತದೆಯೇ, ಇದನ್ನು ದೃಢೀಕರಿಸಿಕೊಳ್ಳಬೇಕು. ನಿರ್ಮಾಣದ ಕ್ಷೇತ್ರಫಲವು ನಿಯಮಕ್ಕನುಸಾರ ಇದೆಯಲ್ಲವೇ (ಎಫ್.ಎಸ್.ಐ. ಮಾನ್ಯತೆ), ಎಂಬುದನ್ನು ದೃಢಿಕರಿಸಬೇಕು.

ಇ. ಅನುಮತಿ ಸಿಕ್ಕಿದ ನಕ್ಷೆಗೆ ಸಿವಿಲ್ ಎಂಜಿನಿಯರ್ ಅಥವಾ ಆರ್ಕಿಟೆಕ್ಟ್ ಹಸ್ತಾಕ್ಷರ ಮಾಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

ಟಿಪ್ಪಣಿ – ಮೇಲಿನ ಎಲ್ಲ ದಾಖಲೆಗಳನ್ನು ಪರಿಣಿತ ಸಿವಿಲ್ ಎಂಜಿನಿಯರ್ ಹಾಗೂ ನ್ಯಾಯವಾದಿಗಳಿಂದ ಪರಿಶೀಲಿಸಬೇಕು.

೩. ಖಾಲಿ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸುವಾಗ ಗುತ್ತಿಗೆದಾರ ಅಥವಾ ಬಿಲ್ಡರ್‌ನೊಂದಿಗೆ ಸಾಮಂಜಸ್ಯದ ಅಥವಾ ಇತರ ಲಿಖಿತ ಒಪ್ಪಂದ  ಮಾಡುವಾಗ ಆವಶ್ಯಕ ಅಂಶಗಳು

ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಿಸುವಾಗ, ನಾವು ನಿರ್ಮಾಣ ಕಾರ್ಯವನ್ನು ಯಾರಿಗೆ ವಹಿಸಿಕೊಡುತ್ತೇವೆಯೋ, ಆ ಬಿಲ್ಡರ್ ಅಥವಾ ಗುತ್ತಿಗೆದಾರರೊಂದಿಗೆ ತಾಲೂಕಿನ ಉಪನೋಂದಣಾಧಿಕಾರಿಯೊಂದಿಗೆ ಲಿಖಿತ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ, ಇದರಿಂದ ಯಾವುದೇ ದೂರು ಇದ್ದರೆ, ನೀವು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. (ಕೆಲವು ಬಿಲ್ಡರ್‌ಗಳು ಲಿಖಿತ ಒಪ್ಪಂದ ಮಾಡಿಕೊಳ್ಳುವುದಿಲ್ಲ.) ಈ ಒಪ್ಪಂದವನ್ನು ಮಾಡುವಾಗ ಈ ಕೆಳಗಿನ ಅಂಶಗಳಿರುವುದು ಅಗತ್ಯವಿದೆ.

ಅ. ಬಿಲ್ಡರ್ ಹೇಳುವ ದರದಲ್ಲಿ ನಿರ್ಮಾಣ ಪ್ರದೇಶವನ್ನು ಹೇಗೆ ಲೆಕ್ಕಹಾಕಲಾಗುವುದು (ಕಾರ್ಪೆಟ್ ಏರಿಯಾ, ಬಿಲ್ಟಪ್ ಏರಿಯಾ, ಸುಪರ್ ಬಿಲ್ಟಪ್ ಏರಿಯಾ ಇವುಗಳ ಪೈಕಿ ಯಾವುದು) ಎಂಬುದನ್ನು ಉಲ್ಲೇಖಿಸುವುದು ಅಗತ್ಯವಿದೆ. ನಿಗದಿತ ದರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಒಳಗೊಂಡಿರ ಬೇಕು ಮತ್ತು ಅದನ್ನು ಒಪ್ಪಂದದಲ್ಲಿ ದಾಖಲಿಸಬೇಕು.

ಆ. ನಮ್ಮ ನಿರ್ಮಾಣಕಾರ್ಯವು ಬಿಲ್ಡರ್‌ನಿಂದ ಜಿಎಸ್‌ಟಿ ತೆರಿಗೆ ಹಾಗೂ ನೇರ ಆದಾಯ ತೆರಿಗೆ ಕಡಿತದ ಅಡಿಯಲ್ಲಿ ನೊಂದಾಯಿಸಲ್ಪಡುತ್ತದೆಯೇ, ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ಅಲ್ಲದೆ ನಮ್ಮ ಕಟ್ಟಡವು ‘ರೆರಾ’ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ) ಕಾಯ್ದೆಯ ಅಡಿಯಲ್ಲಿದೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.

ಇ. ನಿರ್ಮಾಣದಲ್ಲಿ ಬಳಸುವ ವಸ್ತುಗಳು, ನಿರ್ಮಾಣದ ಗುಣಮಟ್ಟ ಮತ್ತು ನಿರ್ಮಾಣ ಪೂರ್ಣಗೊಳ್ಳಲು ಬೇಕಾದ ಸಮಯದ ಬಗ್ಗೆ ಉಲ್ಲೇಖಿಸಬೇಕು.

ಈ. ನಿರ್ಮಾಣದ ಗುತ್ತಿಗೆದಾರ ಅಥವಾ ಬಿಲ್ಡರ್‌ನ ನಡತೆ ವಿಶ್ವಾಸಾರ್ಹವಾಗಿದೆಯೇ ಮತ್ತು ಅವರು ಹಿಂದೆ ಮಾಡಿದ ಕೆಲಸವನ್ನು ತಮ್ಮ ಇಂಜಿನಿಯರ್‌ಗೆ ತೋರಿಸಿ ಅವರು ಗುಣಮಟ್ಟದ ಕೆಲಸ ಮಾಡುತ್ತಿದ್ದಾರೆ ಎಂದು ಹಳ್ಳಿಯಲ್ಲಿ ಖಚಿತಪಡಿಸಿಕೊಳ್ಳಬೇಕು. ಹಾಗಿದ್ದಲ್ಲಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು.

ಉ. ನಿರ್ಮಾಣ ಕಾರ್ಯ ಪ್ರಾರಂಭಿಸುವ ಮೊದಲು ಮತ್ತು ನಿರ್ಮಾಣದ ಸಮಯದಲ್ಲಿ ಪ್ರತಿಯೊಂದು ಹಂತದಲ್ಲಿ ನಾವು ಬಿಲ್ಡರ್‌ಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಎಲ್ಲ ಮೊತ್ತವನ್ನು ಚೆಕ್ ಮೂಲಕವೇ ಪಾವತಿಸಬೇಕು ಮತ್ತು ಖಚಿತ ರಶೀದಿಯನ್ನು ಅದೇ ಸಮಯದಲ್ಲಿ ತೆಗೆದುಕೊಳ್ಳಬೇಕು. ಇದರಿಂದ ಅದರ ನೋಂದಣಿ ಇರುವುದು. ನಗದು ಪಾವತಿಸಬೇಡಿ. (ಈ ಮೊತ್ತವನ್ನು ನಿಗದಿತ ನಿರ್ಮಾಣ ದರದಿಂದ ನಿಗದಿತ ಪ್ರದೇಶಕ್ಕೆ ಗುಣಿಸಲಾಗುತ್ತದೆ.)

ಊ. ಈ ಮೊತ್ತವನ್ನು ನೀಡುವಾಗ ಇಬ್ಬರಿಗೂ ಸಮಾನವಾಗಿ ಪರಿಚಯವಿರುವ ವ್ಯಕ್ತಿಯ ಮಧ್ಯಸ್ಥಿಕೆಯ ಮೂಲಕ ಪಾವತಿಸಬೇಕು. ನಿರ್ಮಾಣಕ್ಕಾಗಿ ನಗದು ಪಾವತಿಸುವ ಹಂತಗಳು ಈ ಕೆಳಗಿನಂತಿವೆ.

ಈ ಪದ್ಧತಿಯಲ್ಲಿ ವ್ಯವಹಾರ ಮಾಡುವುದು ಆದರ್ಶ ಪದ್ಧತಿ ಯಾಗಿದೆ. ತಾರತಮ್ಯದಿಂದ ಇದು ಸ್ವಲ್ಪ ಬದಲಾಗಬಹುದು. ಭಾರಿ

ಮೊತ್ತದ ವಹಿವಾಟುಗಳನ್ನು ಮಾಡಿದರೆ ಹಣ ಸಿಲುಕುವ ಅಥವಾ ವಂಚನೆಯಾಗುವ ಸಾಧ್ಯತೆಗಳಿರುತ್ತವೆ.

ಈ ಪ್ರತಿಯೊಂದು ಹಂತದಲ್ಲೂ ಪಾವತಿಸಬೇಕಾದ ಮೊತ್ತವನ್ನು ಲಿಖಿತ ಒಪ್ಪಂದದಲ್ಲಿ ನಮೂದಿಸಬೇಕು. ಈ ವೇಳಾಪಟ್ಟಿ ನೆಲಮಹಡಿ ನಿರ್ಮಾಣಕ್ಕಾಗಿ ಇದೆ. ಬಿಲ್ಡರ್‌ನ ಯಾವುದೇ ಮಾತಿಗೆ ಮರುಳಾಗಬೇಡಿ ಅಥವಾ ಗೊಂದಲ ಕ್ಕೀಡಾಗಬೇಡಿ. ಕಟ್ಟಡದ ಒಪ್ಪಂದಕ್ಕಾಗಿ ಯಾರನ್ನು ಸಾಕ್ಷಿದಾರ ಮಾಡಬಹುದು ಎಂದು ನ್ಯಾಯವಾದಿಯಿಂದ ಸಲಹೆ ಪಡೆಯಬೇಕು. ಬಿಲ್ಡರ್ ಒಪ್ಪಂದವನ್ನು ಕರಾರುಪತ್ರವನ್ನು ನೀಡಿದ ನಂತರ ಅದನ್ನು ನ್ಯಾಯವಾದಿಗಳಿಂದ ಪರಿಶೀಲಿಸಬೇಕು. ಅನಂತರವೇ ಅಂತಿಮ ಒಪ್ಪಂದವನ್ನು ಮಾಡಬೇಕು. ಸಾಧ್ಯವಾದರೆ, ಕರಾರಿನಂತೆ ಮೊದಲ ಕಂತು ನೀಡುವಾಗ ಅಥವಾ ಕರಾರನ್ನು ಮಾಡುತ್ತಿರುವಾಗ ನಮ್ಮ ಪರಿಚಯದ ಸಿವಿಲ್ ಎಂಜಿನಿಯರ್‌ನನ್ನು ನಮ್ಮೊಂದಿಗೆ ಕರೆದೊಯ್ಯಬೇಕು, ಇದರಿಂದ ಯಾವುದೇ ವಂಚನೆ ಸಂಭವಿಸುವುದಿಲ್ಲ.

ಕೆಲವು ಬಿಲ್ಡರ್‌ಗಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ಮೌಖಿಕ ಆಶ್ವಾಸನೆಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಲಿಖಿತ ಒಪ್ಪಂದದಲ್ಲಿ ಪ್ರಸ್ತಾಪಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಬಾಯಿ ಮಾತಿಗೆ ನಂಬದೇ ಅಥವಾ ಬಲಿಯಾಗದೆ ಎಲ್ಲ ಅಂಶಗಳನ್ನು ಕಾಗದಪತ್ರದಲ್ಲಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಕೆಲವೊಮ್ಮೆ ನಿರ್ಮಾಣದಲ್ಲಿ ಏನಾದರೂ ಬದಲಾವಣೆಗಳಿದ್ದರೆ, ಮುಂಗಡಪತ್ರವನ್ನು ಬಿಲ್ಡರ್‌ನಿಂದ ತೆಗೆದುಕೊಳ್ಳಬೇಕು ಮತ್ತು ನಂತರವೇ ಅದನ್ನು ಬದಲಾಯಿಸಬೇಕು. ಅದರ ಬಗ್ಗೆ ಮೌಖಿಕ ವಾಗಿ ಮಾತನಾಡದೇ ಅದನ್ನು ಬಿಲ್ಡರ್‌ನಿಂದ ಲಿಖಿತವಾಗಿ ತೆಗೆದುಕೊಂಡು ಅದನ್ನು ನಮ್ಮ ಸಿವಿಲ್ ಎಂಜಿನಿಯರ್‌ಗೆ ಹಾಗೂ ನ್ಯಾಯವಾದಿಗಳಿಗೆ ತೋರಿಸಿಕೊಳ್ಳಬೇಕು.

(ಫ್ಲ್ಯಾಟ್‌ಗಳಿಗೆ ಸಹ ಸಾಮಾನ್ಯ ಇದೇ ಕಂತುಗಳಲ್ಲಿ ಹಣವನ್ನು ಪಾವತಿಸಬಹುದು.)

– ಶ್ರೀ. ಮಧುಸೂದನ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೧೦.೨೦೨೦)

ವಾಚಕರಲ್ಲಿ ವಿನಂತಿ ! : ಸಾಧಕರು ಮತ್ತು ಓದುಗರು ಈ ಲೇಖನವನ್ನು ಸಂಗ್ರಹದಲ್ಲಿಡಬೇಕು.