‘ಶರೀರಮಾದ್ಯಂ ಖಲು ಧರ್ಮ ಸಾಧನಮ್ | ಅಂದರೆ ‘ಧರ್ಮಾಚರಣೆಗಾಗಿ (ಸಾಧನೆ ಮಾಡಲು) ಶರೀರ ಆರೋಗ್ಯಶಾಲಿಯಾಗಿರುವುದು ಅತ್ಯಂತ ಆವಶ್ಯಕವಾಗಿದೆ. ಶರೀರ ಆರೋಗ್ಯವಂತವಾಗಿರಬೇಕೆಂದು ಆಯುರ್ವೇದದಲ್ಲಿ ದಿನಚರ್ಯೆ ಮತ್ತು ಋತುಚರ್ಯೆಯನ್ನು ಹೇಳಲಾಗಿದೆ. ಸಾಧಕರು ಅವುಗಳನ್ನು ಪಾಲಿಸಿದರೆ ಆರೋಗ್ಯವು ಸುಧಾರಣೆಯಾಗುವುದರೊಂದಿಗೆ ಸಾಧನೆಯ ಫಲಶ್ರುತಿಯೂ ಹೆಚ್ಚಾಗುತ್ತದೆ.
೧. ಬ್ರಾಹ್ಮಿಮುಹೂರ್ತದಲ್ಲಿ ಏಳುವುದು
‘ಬ್ರಾಹ್ಮಿಮುಹೂರ್ತದಲ್ಲಿ ಏಳಬೇಕು, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಬ್ರಾಹ್ಮಿಮುಹೂರ್ತವೆಂದರೆ ಸೂರ್ಯೋದಯದ ಮೊದಲಿನ ೯೬ ರಿಂದ ೪೮ ನಿಮಿಷಗಳ ಕಾಲ. ಈ ಸಮಯದಲ್ಲಿ ಏಳುವುದರಿಂದ ಶೌಚದ ಸಂವೇದನೆ ತನ್ನಿಂತಾನೇ ಉಂಟಾಗಿ ಹೊಟ್ಟೆ ಸ್ವಚ್ಛವಾಗುತ್ತದೆ. ಯಾರಿಗೆ ಬ್ರಾಹ್ಮಿಮುಹೂರ್ತದಲ್ಲಿ ಏಳಲು ಸಾಧ್ಯವಿಲ್ಲವೋ, ಅವರು ಕನಿಷ್ಠ ೭ ಗಂಟೆಯ ಒಳಗಾದರೂ ಏಳಬೇಕು. ಕ್ರಮೇಣ ಬೆಳಗ್ಗೆ ಬೇಗನೆ ಏಳಲು ಪ್ರಯತ್ನಿಸಬೇಕು. ಸೂರ್ಯೋದಯದ ನಂತರವೂ ಮಲಗಿದ್ದರೆ, ಶರೀರದಲ್ಲಿ ಜಡತ್ವ, ಆಲಸ್ಯ, ಪಚನವ್ಯವಸ್ಥೆ ಕೆಡುವುದು, ಮಲಬದ್ಧತೆ ಇತ್ಯಾದಿ ತೊಂದರೆಗಳಾಗಬಹುದು.
೨. ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಬಾರದು !
ಕೆಲವು ಯೋಗ ಶಿಕ್ಷಕರು ಬೆಳಗ್ಗೆ ಎದ್ದು ಒಂದು ತಂಬಿಗೆ ನೀರು ಕುಡಿಯಲು ಹೇಳುತ್ತಾರೆ. ಯೋಗಶಾಸ್ತ್ರದ ಎಲ್ಲ ನಿಯಮಗಳನ್ನು ಪಾಲಿಸಿ ನಿಯಮಿತವಾಗಿ ಆಸನ, ಪ್ರಾಣಾಯಾಮ ಇತ್ಯಾದಿ ಮಾಡುವವರಿಗೆ ನೀರು ಕುಡಿಯುವುದರಿಂದ ಯಾವುದೇ ಅಪಾಯವಾಗುವುದಿಲ್ಲ; ಆದರೆ ಜನಸಾಮಾನ್ಯರು ಬೆಳಗ್ಗೆ ಅನಾವಶ್ಯಕ ನೀರು ಕುಡಿದರೆ ಅವರ ಪಚನಶಕ್ತಿ ಮಂದವಾಗುತ್ತದೆ. ಪಚನಶಕ್ತಿಯೆಂದರೆ ಜಠರಾಗ್ನಿ. ಅದು ಮಂದವಾಗುವುದು ಎಲ್ಲ ರೋಗಗಳ ಮೂಲ ಕಾರಣವಾಗುತ್ತದೆ.
೩. ಶೌಚ
ಅನೇಕರಿಗೆ ‘ಬೆಳಗ್ಗೆ ಚಹಾ ಸೇವಿಸದೆ ಮಲವಿಸರ್ಜನೆ ಆಗುವುದಿಲ್ಲ, ಎನ್ನುವ ದೂರು ಇರುತ್ತದೆ. ಹೆಚ್ಚಾಗಿ ಹವ್ಯಾಸದಿಂದಾಗಿ ಹೀಗಾಗುತ್ತದೆ. ಯಾರಿಗೆ ಬೆಳಗ್ಗೆ ಎದ್ದ ತಕ್ಷಣ ಮಲವಿಸರ್ಜನೆಯಾಗುವುದಿಲ್ಲವೋ, ಅವರು ಸುಮಾರು ೧ ವಾರ ರಾತ್ರಿ ಮಲಗುವ ಮೊದಲು ೧ ಚಮಚ ತ್ರಿಫಲಾ ಚೂರ್ಣವನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಬೆಳಗ್ಗೆ ಎದ್ದ ನಂತರ ೨ ನಿಮಿಷ ಸುತ್ತಾಡಿಕೊಂಡು ಶೌಚಾಲಯಕ್ಕೆ ಹೋಗಬೇಕು; ಆದರೆ ಒತ್ತಡ ಹಾಕಬಾರದು. ಹೀಗೆ ೮ ದಿನ ಮಾಡಿದರೆ ಕ್ರಮೇಣ ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಸ್ವಚ್ಛವಾಗುತ್ತದೆ.
೪. ಮುಖಮಾರ್ಜನ
ಮೊದಲಿಗೆ ಬ್ರಶ್‌ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಅನಂತರ ‘(ಸನಾತನ) ದಂತಮಂಜನ ಅಥವಾ ‘(ಸನಾತನ) ತ್ರಿಫಲಾ ಚೂರ್ಣದಿಂದ ನಿಧಾನವಾಗಿ ಹಲ್ಲುಗಳನ್ನು ಉಜ್ಜಬೇಕು ಹಾಗೂ ಒಸಡುಗಳಿಗೂ ಆ ಚೂರ್ಣವನ್ನು ಹಚ್ಚಬೇಕು. ಇದರಿಂದ ಒಸಡು ಗಟ್ಟಿಯಾಗುತ್ತದೆ. ಎಲ್ಲ ಟೂತಪೇಸ್ಟ್‌ಗಳಲ್ಲಿ ‘ಫ್ಲೋರೈಡ್ ಮತ್ತು ‘ಸೋಡಿಯಮ್ ಲಾರಿಲ್ ಸಲ್ಫೇಟ್ ಎಂಬ ಹಾನಿಕರ ಘಟಕಗಳಿರುತ್ತವೆ. ಆದ್ದರಿಂದ ಟೂತಪೇಸ್ಟ್‌ನಿಂದ ದೂರವಿರಬೇಕು.
೫. ಮೈಗೆ ಎಣ್ಣೆ ಹಚ್ಚುವುದು (ಅಭ್ಯಂಗ)
ಇಡೀ ಶರೀರಕ್ಕೆ ಆವಶ್ಯಕತೆಗನುಸಾರ ತೆಂಗಿನೆಣ್ಣೆ, ಎಳ್ಳೆಣ್ಣೆ, ಹತ್ತಿಯ ಕಾಳಿನ ಎಣ್ಣೆ ಇವುಗಳಲ್ಲಿ ಯಾವುದಾದರೊಂದು ಎಣ್ಣೆಯನ್ನು ೫ ನಿಮಿಷಗಳ ಕಾಲ ಉಜ್ಜಬೇಕು. ಅಭ್ಯಂಗ ಮಾಡುವುದರಿಂದ ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ, ಚರ್ಮ ಸುಕ್ಕುಗಟ್ಟುವುದಿಲ್ಲ, ನುಣುಪಾಗಿರುತ್ತದೆ, ದೃಷ್ಟಿ ಸುಧಾರಿಸುತ್ತದೆ ಹಾಗೂ ಮೈಕೈ ಪುಷ್ಟಿಯಾಗಿ ಗಟ್ಟಿಮುಟ್ಟಾಗುತ್ತದೆ. ಸಂಧುಗಳಿಗೆ ಕೀಲೆಣ್ಣೆ ಸಿಗುತ್ತದೆ. ಚಳಿಗಾಲದಲ್ಲಿ ಒಣ ಗಾಳಿ ಮತ್ತು ಚಳಿಯಿಂದಾಗಿ ಚರ್ಮ ಒಡೆಯುತ್ತದೆ ಹಾಗೂ ಹಿಮ್ಮಡಿ ಒಡೆಯುತ್ತದೆ. ಅಭ್ಯಂಗ ಮಾಡಿದರೆ ತಕ್ಷಣ ಇದರಿಂದ ಲಾಭವಾಗುತ್ತದೆ. ಅಭ್ಯಂಗದಿಂದ ಸ್ಥೂಲಕಾಯ ಶರೀರವಿರುವವರ ಕೊಬ್ಬು ಕಡಿಮೆಯಾಗುತ್ತದೆ ಹಾಗೂ ಕೃಶರಾಗಿರುವವರ ಶರೀರ ದಷ್ಟಪುಷ್ಟವಾಗುತ್ತದೆ. ಇದು ಮೇದ ಧಾತುವಿನಲ್ಲಿನ ಸೂಕ್ಷ್ಮ ಅನ್ನವನ್ನು ಪ್ರವಹಿಸುವ ವಾಹಿನಿಗಳು ಸ್ವಚ್ಛವಾಗುವುದರಿಂದ ಸಾಧ್ಯವಾಗುತ್ತದೆ.
೬. ಸ್ನಾನ
ಶರೀರಕ್ಕೆ ಎಣ್ಣೆ ಹಚ್ಚಿರುವುದರಿಂದ ಸ್ನಾನಕ್ಕೆ ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ಸ್ನಾನ ಮಾಡುವಾಗ ಮೊದಲು ನಮ್ಮ ತಲೆ ಅನಂತರ ಕಾಲನ್ನು ನೆನೆಸಬೇಕು. ಮೊದಲೇ ಕಾಲನ್ನು ನೆನೆಸಿದರೆ ಶರೀರದ ಉಷ್ಣತೆ ಮೇಲೆ ಹೋಗಿ ಆರೋಗ್ಯ ಕೆಡುವ ಸಾಧ್ಯತೆಯಿದೆ. ತಲೆಗೆ ಬಿಸಿ ನೀರನ್ನು ಹಾಕಿದರೆ ಕೂದಲು ಉದುರುತ್ತವೆ, ಆದ್ದರಿಂದ ತಲೆಗೆ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ತಣ್ಣೀರಿನಿಂದ ಸ್ನಾನ ಮಾಡುವವರು ತಲೆಗೆ ತಣ್ಣೀರು ಹಾಕಬಹುದು. ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡದಿದ್ದರೆ ಒಳಿತು. ಶರೀರದ ಮೇಲೆ ನೇರವಾಗಿ ನೀರನ್ನು ಸುರಿಯುವುದರಿಂದ ಪ್ರಾಣವಾಯು, ಉದಾನವಾಯುವಿನ ವೇಗದಲ್ಲಿ ಅಸಮತೋಲನವಾಗುತ್ತದೆ. ಕೆಲವರಿಗೆ ಸ್ನಾನವಾದ ನಂತರ ತಕ್ಷಣ ಆಯಾಸವಾಗುತ್ತದೆ. ಅದಕ್ಕೆ ಪ್ರಾಣ ಮತ್ತು ಉದಾನ ವಾಯುವಿನ ಅಸಮತೋಲನವೇ ಒಂದು ಕಾರಣವಾಗಿರಬಹುದು. ತಲೆಗೆ ಮೊದಲ ತಂಬಿಗೆಯ ನೀರನ್ನು ಹಾಕುವಾಗ ವೈಖರಿಯಲ್ಲಿ ನಾಮಜಪ ಅಥವಾ ಸ್ತೋತ್ರಪಠಣ ಮಾಡಿದರೆ ಪ್ರಾಣ ಮತ್ತು ಉದಾನ ವಾಯುವಿನ ವೇಗ ಸಮತೋಲನವಾಗಿ ಸ್ನಾನದ ನಂತರ ಆಯಾಸವಾಗುವುದಿಲ್ಲ.