ಭಾರತೀಯ ಸಂಸ್ಕೃತಿಯಂತೆ ಜನವರಿ ಒಂದಲ್ಲ ಯುಗಾದಿಯೇ ಹೊಸ ವರ್ಷ !

ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ತದ್ವಿರುದ್ಧ ಚೈತ್ರ ಶುಕ್ಲ ಪಾಡ್ಯದಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸ ವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು. ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯಾಸ್ತದ ನಂತರ ಪ್ರಾರಂಭವಾಗುವ ತಮೋಗುಣಿ ರಾತ್ರಿಯೊಂದಿಗೆ ಮಾಡಬಹುದು. ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕರವಾಗಿರುತ್ತವೆ. ಆದುದರಿಂದ ಯುಗಾದಿ ಪಾಡ್ಯದಂದೇ ಹೊಸ ವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)