ಭಕ್ತಿಭಾವದಿಂದ ಅಸಾಧ್ಯವಾದದ್ದು ಏನೂ ಇಲ್ಲ !

ಸಂತ ಜ್ಞಾನೇಶ್ವರರು ಮತ್ತು ಸಂತ ನಾಮದೇವರು ಒಂದು ಸಲ ಒಟ್ಟಾಗಿ ತೀರ್ಥಯಾತ್ರೆಗೆ ಹೊರಟರು. ಕಾಶಿ, ಗಯಾ, ಪ್ರಯಾಗ ಈ ಊರುಗಳಲ್ಲಿ ಪ್ರಯಾಣಿಸುತ್ತಾ ಅವರು ಔಂಢಾ ನಾಗನಾಥ ಎಂಬಲ್ಲಿಗೆ ಬಂದರು. ಅದು ಶಂಕರನ ಸ್ಥಾನವಾಗಿತ್ತು. ಇತರೆಡೆಯಂತೆ ಇಲ್ಲಿಯೂ ಕೀರ್ತನೆ ಮಾಡಿ ತಮ್ಮ ಸೇವೆಯನ್ನು ಈಶ್ವರನ ಚರಣಗಳಲ್ಲಿ ಅರ್ಪಿಸಬೇಕೆಂದು ಅವರು ನಿಶ್ಚಿಯಿಸಿದರು.

ಮಹಾದೇವನಿಗೆ ವಂದಿಸಿ ಸಂತ ನಾಮದೇವರು ಕೀರ್ತನೆಯನ್ನು ಪ್ರಾರಂಭಿಸಿದರು. ಕೀರ್ತನೆಗೆ ಬಹಳ ಜನರು ಬಂದಿದ್ದರು. ಅವರು ಕೀರ್ತನೆ ಕೇಳುವುದರಲ್ಲಿ ಮಗ್ನರಾದರು. ಅಷ್ಟರಲ್ಲಿಯೇ ಜನರ ಕೂಗಾಟ ಕೇಳಿ ಬಂದಿತು. ಜನರ ದೃಷ್ಟಿ ಹಿಂದೆ ತಿರುಗಿತು. ಕೀರ್ತನೆ ನಿಂತಿತು. ಬಾಗಿಲಿನಿಂದ ಕೆಲವು ವಿರೋಧಕರು ಒಳಗಡೆ ಬಂದರು. ಆ ವಿರೋಧಿಗಳು ಸಿಟ್ಟಿಗೆದ್ದು ಸಂತ ನಾಮದೇವರಿಗೆ, ‘ಇವರು ಕೈಲಾಸಪತಿ ಉಮಾರಮಣರಿದ್ದಾರೆ. ಇವರಿಗೆ ಹರಿಕೀರ್ತನೆ ಇಷ್ಟವಿಲ್ಲ. ನೀವು ಪಂಢರಾಪುರಕ್ಕೆ ಹೋಗಿ, ಅಲ್ಲಿ ಬೇಕಿದ್ದರೆ ಕುಣಿಯಿರಿ !’ ಎಂದರು.

ವಿರೋಧಿಗಳ ನುಡಿಯನ್ನು ಕೇಳಿ ಶ್ರೋತ್ರುಗಳು, ವಿಠ್ಠಲ ಆದರೇನು ಮತ್ತು ಶಂಕರ ಆದರೇನು, ಇಬ್ಬರಲ್ಲಿ ಭೇದವಿಲ್ಲ. ಶಂಕರನೆದುರು ಕೀರ್ತನೆ ಮಾಡಬಾರದೆಂದು ಎಲ್ಲಿ ಹೇಳಿದ್ದಾರೆ ? ಎಂದರು. ಇದನ್ನು ಕೇಳಿ ವಿರೋಧಿಗಳು ತುಂಬಾ ಸಿಟ್ಟಿಗೆದ್ದರು. ಅವರು, “ನೀವು ಅಭಿಮಾನದ ಅಹಂಕಾರ ಇಟ್ಟುಕೊಂಡು ನಮಗೆ ಜ್ಞಾನವನ್ನು ಕಲಿಸುತ್ತೀರಾ ? ನೀವು ಇಲ್ಲಿಂದ ಹೊರಡಿ ಇಲ್ಲದಿದ್ದರೆ ವ್ಯರ್ಥ ಹೊಡೆತ ತಿನ್ನುವಿರಿ”, ಎಂದರು. ಎಲ್ಲರೂ ಶಾಂತವಾಗಿ ಹಾಗೇ ಎದ್ದು ನಿಂತರು. ಅಲ್ಲಿಂದ ಯಾರೂ ಕದಲಲಿಲ್ಲ. ಅದನ್ನು ನೋಡಿ ವಿರೋಧಿಗಳು, ‘ಈ ನಾಮದೇವನನ್ನೇ ಇಲ್ಲಿಂದ ಕಳುಹಿಸಬೇಕು’, ಎಂದು ನಿಶ್ಚಯಿಸಿದರು. ಆ ವಿರೋಧಕರು ಸಂತ ನಾಮದೇವರಿಗೆ, “ನಿನ್ನ ಕೀರ್ತನೆಯಿಂದಾಗಿ ದೇವಸ್ಥಾನಕ್ಕೆ ಬರುವ ಮಾರ್ಗ ಮುಚ್ಚಿದೆ. ನೀನು ದೇವಸ್ಥಾನದ ಹಿಂದೆ ಹೋಗಿ ಕೀರ್ತನೆ ಮಾಡು”, ಎಂದರು.

ಇದನ್ನು ಕೇಳಿ ಸಂತ ನಾಮದೇವರು ವಿರೋಧಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು ಮತ್ತು ಅವರು ದೇವಸ್ಥಾನದ ಹಿಂದಿನ ಬದಿಗೆ ಬಂದರು ಮತ್ತು ಅಲ್ಲಿ ಕೀರ್ತನೆ ಮಾಡತೊಡಗಿದರು. ಭಗವಂತನ ಕೀರ್ತನೆಯಲ್ಲಿ ವ್ಯತ್ಯಯವಾದುದಕ್ಕೆ ಕಂಠ ತುಂಬಿದ ಅಂತಃಕರಣದಿಂದ ಅವರು ಪಾಂಡುರಂಗನಿಗೆ ಮೊರೆ ಇಟ್ಟರು. ಅವರ ವಿಠ್ಠಲನಾಮದಲ್ಲಿನ ತಳಮಳವು ಎಷ್ಟು ಹೆಚ್ಚಾಯಿತೆಂದರೆ, ಅವರ ಆರ್ತ ಕೂಗು ಭಗವಂತನಿಗೆ ಕೇಳಿಸಿತು. ಪೂರ್ವ ದಿಕ್ಕಿಗೆ ಮುಖವಿರುವ ಶಂಕರನ ದೇವಸ್ಥಾನವು ನಾಮದೇವರ ಎದುರು ಬಂದು ನಿಂತಿತು. ಈ ಚಮತ್ಕಾರ ನೋಡಿ ನೆರೆದ ಎಲ್ಲ ಶ್ರೋತುಗಳು ಆಶ್ಚರ್ಯಗೊಂಡರು. ‘ಕೈಲಾಸಪತಿಯು ನಾಮದೇವನಿಗೆ ಪ್ರಸನ್ನರಾದರು’, ಎಂದು ಎಲ್ಲರೂ ಹೇಳತೊಡಗಿದರು. ಅಷ್ಟರಲ್ಲಿ ಶಂಕರನ ಪೂಜೆ ಮುಗಿಸಿ ವಿರೋಧಿಗಳು ದೇವಸ್ಥಾನದಿಂದ ಹೊರಬಂದರು, ಆದರೆ ಪುನಃ ನಾಮದೇವರ ಕೀರ್ತನೆ ಎದುರು ನಡೆದೇ ಇದೆ  ! ಏನೋ ಗೊಂದಲವಾಗಿದೆ, ಎಂದು ಅವರ ಗಮನಕ್ಕೆ ಬಂದಿತು. ಭಗವಂತನು ದೇವಸ್ಥಾನವನ್ನು ತಿರುಗಿಸಿದ್ದಾನೆ, ಎಂದು ತಿಳಿದಾಗ ವಿರೋಧಿಗಳು ಲಜ್ಜಿತರಾದರು. ಪರಮೇಶ್ವರನ ಪ್ರಿಯ ಭಕ್ತರು ಯಾರು, ಎಂದು ಪರಮೇಶ್ವರನು ಸ್ವತಃ ತೋರಿಸಿದನು. ದುಃಖಿತರಾದ ವಿರೋಧಕರು ಕೀರ್ತನೆಗೆ ಕುಳಿತರು. ತಿರುಗಿದ ದೇವಸ್ಥಾನವು ಇಂದಿಗೂ ಹಾಗೇ ಇದೆ. (ಆಧಾರ : ಹಿಂದೂ ಜನಜಾಗೃತಿ ಸಮಿತಿಯ ‘HinduJagruti.org’ ಜಾಲತಾಣ)