ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು
ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರತವು ‘ಅಮ್ಫಾನ್ ಮತ್ತು ‘ನಿಸರ್ಗ ಎಂಬ ಎರಡು ಶಕ್ತಿಶಾಲಿ ಚಂಡಮಾರುತಗಳನ್ನು ಎದುರಿಸಬೇಕಾಯಿತು. ೨೦.೫.೨೦೨೦ ರಂದು ಭಾರತದ ಪೂರ್ವ ಸಮುದ್ರ ದಡಕ್ಕೆ ‘ಅಮ್ಫಾನ್ ಹಾಗೂ ೨ ಮತ್ತು ೩ ಜೂನ್ ೨೦೨೦ ರಂದು ಮುಂಬಯಿಯೊಂದಿಗೆ ಕರಾವಳಿಯ ಸಮುದ್ರದಡಕ್ಕೆ ‘ನಿಸರ್ಗವೆಂಬ ಚಂಡಮಾರುತದ ಆಘಾತವಾಯಿತು.
ಮನುಷ್ಯನಿಗೆ ತುಂಬಾ ಭಯವಾಗುವಂತಹ ಗಾಳಿಯ ಪ್ರಚಂಡ ವೇಗ ಮತ್ತು ತುಂಬಾ ಜೋರಾಗಿ ಸುರಿಯುವ ಮಳೆಯ ಈ ಚಂಡಮಾರುತದಿಂದಾಗಿ ದೊಡ್ಡ-ದೊಡ್ಡ ವೃಕ್ಷಗಳೂ ಬುಡಮೇಲಾಗಿ ಬಿದ್ದವು. ಮನೆಗಳ ಗೋಡೆಗಳು ಕುಸಿಯುವುದು, ಮೇಲ್ಛಾವಣಿಗಳು ಹಾರಿಹೋಗುವುದು, ಮುಂತಾದವುಗಳಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹಾನಿಯೂ ಆಯಿತು. ಬಹಳಷ್ಟು ಜನರು ತಮ್ಮ ಮನೆಗಳನ್ನು ಕಳೆದುಕೊಂಡರು. ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಸಂಚಾರವಾಣಿಯ ಜಾಲತಾಣವು ನಿಷ್ಕ್ರಿಯವಾಗಿದ್ದರಿಂದ ಸಂಪರ್ಕ ವ್ಯವಸ್ಥೆಯೂ ಖಂಡಿತವಾಯಿತು. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ನಿಸರ್ಗದ ಈ ರೌದ್ರ ರೂಪವನ್ನು ನೋಡಿ ನಾಗರಿಕರು ಭಯಭೀತರಾದರು.
‘ಚಂಡಮಾರುತ, ಅತೀವೃಷ್ಟಿ, ಭೂಕಂಪ ಇವುಗಳಂತಹ ನೈಸರ್ಗಿಕ ಆಪತ್ತುಗಳು ಯಾವಾಗ ಎದುರಾಗುವುದು ?, ಎಂದು ಹೇಳಲು ಬರುವುದಿಲ್ಲ. ಯಾವುದೇ ಕ್ಷಣ ಇಂತಹ ಸ್ಥಿತಿ ನಿರ್ಮಾಣವಾಗಬಹುದು. ಆದುದರಿಂದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಎಲ್ಲರೂ ಮುಂದಿನ ಸೂಚನೆಗಳನ್ನು ಗಾಂಭೀರ್ಯತೆಯಿಂದ ಓದಬೇಕು ಮತ್ತು ಪಾಲಿಸಬೇಕು.
ನೈಸರ್ಗಿಕ ಆಪತ್ತುಗಳ ದೃಷ್ಟಿಯಿಂದ ಮಾಡಬೇಕಾದ ಪೂರ್ವತಯಾರಿ
ಅ. ಹೊಸ ಮನೆಯನ್ನು ಕಟ್ಟುವುದಿದ್ದರೆ ತಗಡಿನ ಬದಲು ಗಟ್ಟಿ (ಉದಾ. ‘ಸ್ಲ್ಯಾಬ್’) ಮೇಲ್ಛಾವಣಿಯ ವಿಚಾರವನ್ನು ಮಾಡಬೇಕು.
ಆ. ಮನೆಗೆ ಮೇಲ್ಚಾವಣಿಯೆಂದು ಹಾಕಿದ ತಗಡಿನ ಶೆಡ್ ಎಷ್ಟೇ ಗಟ್ಟಿಮುಟ್ಟಾಗಿದ್ದರೂ, ಬಿರುಗಾಳಿಯಿಂದ ತಗಡುಗಳು ಹಾರಿ ಹೋಗುತ್ತವೆ. ಮೇಲ್ಛಾವಣಿಗೆ ಹಾಕಲಾದ ತಗಡುಗಳು ಗಾಳಿಯಿಂದ ಹಾರಿಹೋಗಬಾರದೆಂದು, ತಗಡುಗಳ ಮೇಲೆ ಉಸುಕು ತುಂಬಿದ ಚೀಲಗಳನ್ನು ಖಾಯಂ ಸ್ವರೂಪದಲ್ಲಿ ಇಡಬೇಕು; ಏಕೆಂದರೆ ‘ಬಿರುಗಾಳಿ ಯಾವಾಗ ಬರುವುದು ?’, ಎಂದು ಹೇಳಲು ಬರುವುದಿಲ್ಲ. (ತಗಡಿನ ಕ್ಷೇತ್ರವು ೫೦೦ ಚದರ ಅಡಿಗಳವರೆಗೆ ಇದ್ದರೆ ಪ್ರತಿಯೊಂದು ೫ ರಿಂದ ೧೦ ಕಿಲೋ ತೂಕದ ಕೆಲವು ಉಸಕಿನ ಚೀಲಗಳನ್ನು ಮೇಲ್ಛಾವಣಿಯ ಮೇಲೆ ನಾಲ್ಕೂ ಬದಿಗಳಲ್ಲಿ ಮತ್ತು ಮಧ್ಯಭಾಗದಲ್ಲಿ ಆವಶ್ಯಕತೆಗನುಸಾರ ಇಡಬೇಕು. ಈ ಚೀಲಗಳು ಒಳ್ಳೆಯ ಗುಣಮಟ್ಟದ್ದಾಗಿರುವುದು ಆವಶ್ಯಕವಾಗಿದೆ)
ಇ. ಬಿರುಗಾಳಿಯ ಸಮಯದಲ್ಲಿ ಗಿಡಗಳು ಬಿದ್ದು ಮನೆಗಳಿಗೆ ಹಾನಿಯಾಗಬಾರದೆಂದು, ಮನೆಯ ಅಕ್ಕಪಕ್ಕದಲ್ಲಿರುವ ತುಂಬಾ ಹಳೆಯ ಮತ್ತು ಅಪಾಯಕಾರಿ ಗಿಡಗಳನ್ನು ಕತ್ತರಿಸಿ.
ಈ. ನಿಮ್ಮ ಕಟ್ಟಡದ ಅಥವಾ ಮನೆಯ ಹೊರಗಿನ ರಸ್ತೆಯ ಮೇಲಿನಿಂದ ವಿದ್ಯುತ್ ತಂತಿಗಳು (ವಯರ್‌ಗಳು) ಹಾದು ಹೋಗಿದ್ದರೆ ಮತ್ತು ಪಕ್ಕದಲ್ಲಿ ಗಿಡ-ಮರಗಳಿದ್ದರೆ ಮಳೆ ಅಥವಾ ಗಾಳಿಯಿಂದ ಗಿಡಗಳು ತಂತಿಯ ಮೇಲೆ ಬಿದ್ದು ಜೀವಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸ್ಥಳೀಯ ವಿದ್ಯುತ್ ಮಂಡಳಿಯವರನ್ನು ಸಂಪರ್ಕಿಸಿ ವಿದ್ಯುತ್ ತಂತಿಯ ಹತ್ತಿರದ ಗಿಡಗಳ ಕೊಂಬೆಗಳನ್ನು ಕತ್ತರಿಸಲು ಹೇಳಬೇಕು. ಯಾವುದೇ ವಿದ್ಯುತ್ ತಂತಿಗಳ ಕೆಳಗೆ ನಿಂತುಕೊಳ್ಳಬಾರದು. ಹಾಗೆಯೇ ಅಲ್ಲಿ ಸಂಚಾರವಾಣಿಯಲ್ಲಿ (ಮೊಬೈಲ್‌ನಲ್ಲಿ) ಮಾತನಾಡಬಾರದು. ಅವುಗಳ ಕೆಳಗೆ ಪ್ರಾಣಿಗಳು ನಿಂತುಕೊಳ್ಳದಂತೆ ಜಾಗೃತೆ ವಹಿಸಬೇಕು. ವಿದ್ಯುತ್ ತಂತಿಗಳಿಂದ ಕಿಡಿಗಳು ಹಾರುತ್ತಿದ್ದರೆ (‘ಸ್ಪಾರ್ಕಿಂಗ್) ತಕ್ಷಣವೇ ವಿದ್ಯುತ್ ಮಂಡಳಿಗೆ ತಿಳಿಸಬೇಕು.
ಊ. ವಿದ್ಯುತ್ ಕಂಬ, ವಿದ್ಯುತ್ ತಂತಿ, ಹಾಗೆಯೇ ಮರಗಳ ಕೆಳಗೆ ದ್ವಿಚಕ್ರ ವಾಹನ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಿದರೆ ಬಿರುಗಾಳಿಯಿಂದ ಕಂಬ ಅಥವಾ ಮರಗಳು ಬುಡಮೇಲಾಗಿ ಅವುಗಳ ಮೇಲೆ ಬಿದ್ದರೆ ದೊಡ್ಡ ಹಾನಿಯಾಗಬಹುದು. ಆದುದರಿಂದ ಅಲ್ಲಿ ವಾಹನಗಳನ್ನು ನಿಲ್ಲಿಸುವುದು, ವಾಹನಗಳನ್ನು ನಡೆಸುವುದು ಇತ್ಯಾದಿ ಮಾಡಬಾರದು.
ಎ. ಮಳೆಗಾಲದಲ್ಲಿ ಅನಿಶ್ಚಿತ ಅವಧಿಗಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಬಹುದು. ಈ ಕಾರಣದಿಂದ ಮನೆಯಲ್ಲಿ ಹಣತೆ, ಮೇಣದಬತ್ತಿ, ಟಾರ್ಚ್, ಕಂದೀಲು ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.
ಐ. ‘ಮನೆಯ ಕಿಟಕಿಗಳು ಮತ್ತು ಬಾಗಿಲುಗಳು ಸರಿಯಾಗಿ ಮುಚ್ಚಲು ಬರುತ್ತವೆಯೋ ಇಲ್ಲವೋ’ ಎಂಬುದರ ಬಗ್ಗೆ ಖಚಿತ ಪಡಿಸಿ ಕೊಳ್ಳಬೇಕು. ಅವುಗಳನ್ನು ಸರಿಯಾಗಿ ಮುಚ್ಚಲು ಬರದಿದ್ದರೆ ದುರಸ್ತಿ ಮಾಡಿಸಿಕೊಳ್ಳಬೇಕು.
ಓ. ಸರಕಾರದ ಆಡಳಿತ ಮತ್ತು ಹವಾಮಾನ ಇಲಾಖೆಗಳಿಂದ ನೀಡುವ ಸೂಚನೆಗಳನ್ನು ಪಾಲಿಸಬೇಕು ಅವುಗಳನ್ನು ದುರ್ಲಕ್ಷಿಸಬಾರದು.
ಚಂಡಮಾರುತದ ಬಗ್ಗೆ ಮುನ್ಸೂಚನೆ ಸಿಕ್ಕಿದ್ದರೆ ಮಾಡಬೇಕಾದ ಕೃತಿಗಳು
ಅ. ಮನೆಯ ಅಂಗಳ, ಬಾಲ್ಕನಿ ಅಥವಾ ಟೆರೇಸ್‌ಗಳಲ್ಲಿ ಹಗುರವಾದ (ಕಡಿಮೆ ಭಾರವಿರುವ) ಸಾಹಿತ್ಯಗಳನ್ನು ಇಟ್ಟಿದ್ದರೆ ಅವುಗಳನ್ನು ತಕ್ಷಣ ಒಳಗೆ ತರಬೇಕು ಅಥವಾ ವ್ಯವಸ್ಥಿತವಾಗಿ ಕಟ್ಟಿಡಬೇಕು.
ಆ. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು.
ಇ. ಮನೆಯಲ್ಲಿ ಕುಡಿಯುಲು ಮತ್ತು ಇತರ ಕಾರಣಕ್ಕಾಗಿ ಬಳಸಲು ನೀರನ್ನು ಶೇಖರಿಸಿಡಬೇಕು ಮತ್ತು ಒಣ ತಿಂಡಿತಿನಸಗಳನ್ನು ತಂದಿಡಬೇಕು.
ಈ. ‘ಗಾಳಿಯ ವೇಗವು ಹೆಚ್ಚಾಗುತ್ತಿದೆ’, ಎಂದು ಗಮನಕ್ಕೆ ಬಂದರೆ, ಅಡುಗೆಮನೆಯಲ್ಲಿನ ಗ್ಯಾಸ್ ಮತ್ತು ಅದರ ಮುಖ್ಯ ‘ವಾಲ್ವ್’ವನ್ನು ಬಂದ ಮಾಡಬೇಕು. ಬಿರುಗಾಳಿಯ ತೀವ್ರತೆ ಮುಗಿಯುವವರೆಗೆ ಅದನ್ನು ಚಾಲು ಮಾಡಬಾರದು.
ಬಿರುಗಾಳಿಯ ಸಮಯದಲ್ಲಿ ಮನೆಯಲ್ಲಿದ್ದರೆ ಏನು ಮಾಡಬೇಕು ?
ಅ. ಮನೆಯಿಂದ ಹೊರಗೆ ಹೋಗಬಾರದು. ಟೆರೇಸ್/ಬಾಲ್ಕನಿ ಅಥವಾ ತಗಡಿನ ಶೆಡ್ ಇದ್ದಲ್ಲಿ ಹೋಗಬಾರದು. ಅಕ್ಕಪಕ್ಕದ ಮನೆಗಳ ಮೇಲ್ಛಾವಣಿ, ಹಾಗೆಯೇ ವಸ್ತುಗಳು ಗಾಳಿಗೆ ಹಾರಿ ಬಂದು ಹಾನಿಯಾಗಬಹುದು.
ಆ. ಮನೆಯ ಕಿಟಕಿಗಳನ್ನು ಮತ್ತು ಬಾಗಿಲುಗಳನ್ನು ಸರಿಯಾಗಿ ಮುಚ್ಚಬೇಕು. ಗಾಳಿಯ ವೇಗದಿಂದಾಗಿ ಬಾಗಿಲುಗಳು ತಾನಾಗಿಯೇ ತೆರೆಯಬಾರದೆಂದು ಬಾಗಿಲ ಹತ್ತಿರ ಒಳಗಿನಿಂದ ಭಾರವಾದ ವಸ್ತುಗಳನ್ನು ಇಡಬಹುದು.
ಇ. ಕಿಟಕಿಯ ಗಾಜುಗಳು ಒಡೆದು ಗಾಯಗಳಾಗಬಾರದೆಂದು ಕಿಟಕಿಯ ಹತ್ತಿರ ನಿಲ್ಲುವುದು, ಮಲಗುವುದು ಇತ್ಯಾದಿಗಳನ್ನು ಮಾಡಬಾರದು.
ಈ. ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೈನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ‘ಸಾಕೆಟ್ನಿಂದ ಹೊರಗೆ ತೆಗೆದಿಡಬೇಕು.
ಉ. ಈ ಅವವಧಿಯಲ್ಲಿ ಲಿಫ್ಟ್, ವಾತಾನುಕೂಲ ಯಂತ್ರ (ಎ.ಸಿ) ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಪೆಟ್ಟಿಗೆಯನ್ನು (ಫ್ರಿಡ್ಜ) ಸ್ಪರ್ಶಿಸಬಾರದು.
ಊ. ಕೆಲವು ಸಲ ಆಪತ್ಕಾಲೀನ ಸ್ಥಿತಿಯಲ್ಲಿ ಸುಳ್ಳು ಸಂದೇಶಗಳನ್ನು ಹರಡಲಾಗುತ್ತದೆ. ಇಂತಹ ಯಾವುದೇ ವದಂತಿಗಳ ಮೇಲೆ ವಿಶ್ವಾಸವನ್ನಿಡಬಾರದು. ಸರಕಾರವು ಅಧಿಕೃತವಾಗಿ ಪ್ರಸಾರ ಮಾಡುವ ಮಾಹಿತಿಯನ್ನು ನಂಬಬೇಕು.
ಮನೆಯ ಹೊರಗೆ ಇರುವಾಗ ತೆಗೆದುಕೊಳ್ಳಬೇಕಾದ ದಕ್ಷತೆ
ಅ. ಬಿರುಗಾಳಿಯ ಸಮಯದಲ್ಲಿ ಸುರಕ್ಷಿತ ಸ್ಥಳವನ್ನು ಹುಡುಕಿ ಅಲ್ಲಿ ನಿಲ್ಲಬೇಕು. ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಇತ್ಯಾದಿಗಳು ಇಲ್ಲದಿರುವ ಸ್ಥಳಗಳನ್ನು ಸುರಕ್ಷಿತವೆಂದು ಹೇಳಬಹುದು. ಮರಗಳು ಅಥವಾ ವಿದ್ಯುತ್ ಕಂಬಗಳ ಕೆಳಗೆ ನಿಲ್ಲಬಾರದು.
ಆ. ಮರಗಳು ಮತ್ತು ವಿದ್ಯುತ್ ಕಂಬಗಳಿಗಿಂತ ದೂರ ಸುರಕ್ಷಿತ ಸ್ಥಳಗಳಲ್ಲಿ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಬೇಕು. ಚತುಷ್ಚಕ್ರ ವಾಹನಗಳ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಮುಚ್ಚಿರುವುದನ್ನು ದೃಢಪಡಿಸಿಕೊಳ್ಳಬೇಕು. ವಾಹನದ ಚಕ್ರಗಳ ಅಡಿಯಲ್ಲಿ ಭಾರವಾದ ವೇಗ ನಿಯಂತ್ರಕ ವಸ್ತುಗಳನ್ನು ಹಚ್ಚಬೇಕು. ಏಕೆಂದರೆ, ಬಿರುಗಾಳಿಯ ಗಾಳಿಯಿಂದ ವಾಹನ ಸರಿದಾಡುವ ಸಾಧ್ಯತೆಯಿರುತ್ತದೆ.
ಇ. ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ಮುಟ್ಟಬಾರದು. ಆ ಮರಗಳ ಮೇಲೆ ವಿದ್ಯುತ್‌ವಾಹಕ ತಂತಿಗಳು ಬಿದ್ದಿರುವ ಸಾಧ್ಯತೆಯಿರುತ್ತದೆ.
ಈ. ಮಳೆಯಿಂದಾಗಿ ಎಲ್ಲ ಕಡೆಗಳಲ್ಲಿ ಹಸಿಯಾಗಿದ್ದರೆ ಯಾವುದೇ ವಿದ್ಯುತ್ ಕಂಬವನ್ನು ಸ್ಪರ್ಶಿಸಬಾರದು; ಏಕೆಂದರೆ ತೇವಾಂಶದಿಂದಾಗಿ ವಿದ್ಯುತ್ತಿನ ಆಘಾತ (‘ಶಾಕ್) ಆಗಬಹುದು.
ಚಂಡಮಾರುತ ಬಂದು ಹೋದನಂತರ ಮಾಡಬೇಕಾದ ಕೃತಿಗಳು
ಅ. ವಾತಾವರಣವು ಮೊದಲಿನಂತೆ ಆಗುವವರೆಗೆ ಮನೆಯ ಹೊರಗೆ ಹೋಗಬಾರದು.
ಆ. ಬಿರುಗಾಳಿ ಮತ್ತು ಮಳೆಯಿಂದ ಪರಿಸರದಲ್ಲಿನ ಮರಗಳು ಬಿದ್ದಿದ್ದರೆ ಅಥವಾ ವಿದ್ಯುತ್‌ವಾಹಕ ತಂತಿಗಳು ಹರಿದು (ತುಂಡಾಗಿ) ಬಿದ್ದಿದ್ದರೆ, ಅವುಗಳನ್ನು ಸ್ಪರ್ಶಿಸಬಾರದು. ಅಗ್ನಿಶಾಮಕ ದಳ ಮತ್ತು ವಿದ್ಯುತ್ ಮಂಡಳಿಗೆ ತಿಳಿಸಬೇಕು.
ಇ. ಮನೆಯಲ್ಲಿನ ಗ್ಯಾಸ್ ‘ಸಿಲಿಂಡರನಿಂದ ಗ್ಯಾಸ ಸೋರಿಕೆಯಾಗುತ್ತಿದ್ದರೆ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್‌ನ್ನು ಸ್ಥಗಿತಗೊಳಿಸಬೇಕು. ಸಿಲಿಂಡರ್ ಗಾಳಿಯ ಸಂಪರ್ಕಕ್ಕೆ ಬರುವ ಸ್ಥಳದಲ್ಲಿ (ಉದಾ. ಬಾಲ್ಕನಿಯಲ್ಲಿ) ಇಡಬೇಕು. ಸಂಪೂರ್ಣ ಮನೆಯಲ್ಲಿ ಗ್ಯಾಸ್ ವಾಸನೆ ಹರಡಿದ್ದರೆ ಯಾವುದೇ ವಿದ್ಯುತ್ ಸ್ವಿಚ್ ಆನ್-ಆಫ್ ಮಾಡಬಾರದು.
ಈ. ವಾಹನಗಳು, ವಿದ್ಯುತ್ ಉಪಕರಣಗಳು, ಹಾಗೆಯೇ ಮನೆಯಲ್ಲಿನ ಸಾಮಗ್ರಿಗಳು ಹೊಸದಾಗಿದ್ದರೆ, ಅವುಗಳ ವಿಮೆ ಮಾಡಿಸಿದ್ದರೆ ಮತ್ತು ನೈಸರ್ಗಿಕ ವಿಪತ್ತಿನಿಂದ ಆಗಿರುವ ಹಾನಿ ಸಿಗುತ್ತಿದ್ದರೆ, ವಿಮಾ ಪ್ರತಿನಿಧಿಯ ಮಾರ್ಗದರ್ಶನವನ್ನು ಪಡೆಯಬೇಕು. ಹಾನಿಯಾಗಿರುವ ಮನೆಯಲ್ಲಿನ ವಸ್ತುಗಳನ್ನು ಸರಿಪಡಿಸುವ ಮೊದಲು ಅವುಗಳ ಛಾಯಾಚಿತ್ರಗಳನ್ನು ತೆಗೆಯಬೇಕು ಮತ್ತು ಅವುಗಳ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು.
ಆಪತ್ತುಗಳ ಪ್ರಸಂಗಗಳಲ್ಲಿ ‘ರಾಷ್ಟ್ರೀಯ ಆಪತ್ತು ವ್ಯವಸ್ಥಾಪನೆಯ ಪ್ರಾಧಿಕಾರರವರ (National Disaster Management Authority) 011-1078 ಈ ಸಹಾಯವಾಣಿ ಕ್ರಮಾಂಕವನ್ನು ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆಯಬಹುದು.
ಗಣಕೀಯ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧
ಮುಂಬರುವ ಮೂರನೇ ಮಹಾಯುದ್ಧದ ಕಾಲದಲ್ಲಿಯೂ ಇಂತಹ ಸ್ಥಿತಿಯು ನಿರ್ಮಾಣವಾಗಬಹದು. ಅದಕ್ಕಾಗಿಯೂ ಈ ಮಾಹಿತಿಯು ಉಪಯುಕ್ತವಾಗಬಹುದು; ಆದುದರಿಂದ ಇದನ್ನು ಸಂಗ್ರಹಿಸಿಡಬೇಕು.
ವಾಚಕರಿಗೆ ಕರೆ !
ಇಲ್ಲಿ ಚಂಡಮಾರುತದ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಕೊಡಲಾಗಿದೆ. ವಾಚಕರಿಗೆ ಈ ವಿಷಯದ ಬಗ್ಗೆ ಇನ್ನೂ ಏನಾದರೂ ಸೂಚಿಸುವುದಿದ್ದರೆ ಅವರು ಈ ಕೆಳಗಿನ ಗಣಕೀಯ ಅಥವಾ ಅಂಚೆಯ ವಿಳಾಸಕ್ಕೆ ಕಳುಹಿಸಬೇಕೆಂದು, ವಿನಂತಿಸುತ್ತೇವೆ ! ಇದರಿಂದ ಈ ವಿಷಯವನ್ನು ಸಮಾಜದೆದುರು ಇನ್ನೂ ಆಳವಾಗಿ ಮಂಡಿಸಲು ಸಹಾಯವಾಗುವುದು.
ಸಂಕಟ ಕಾಲದಲ್ಲಿ ಮನೋಧೈರ್ಯವನ್ನು ಉಳಿಸಿಡಲು ಸಾಧನೆಯ ಹೊರತು ಬೇರೆ ಮಾರ್ಗವಿಲ್ಲ !
ಇಂದು ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಎಷ್ಟೇ ಪ್ರಗತಿ ಮಾಡಿದ್ದರೂ, ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳು ಉತ್ಪನ್ನವಾಗಬಾರದಂತೆ ಮಾಡುವುದು ಮಾನವಿ ಶಕ್ತಿಯ ಆಚೆಗಿನ ದಾಗಿದೆ. ಇಂತಹ ಪ್ರಸಂಗಗಳಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟು ಕೊಂಡು ಮನೋಧೈರ್ಯವನ್ನು ಉಳಿಸಿಕೊಳ್ಳುವುದಷ್ಟೇ, ನಮ್ಮ ಕೈಯಲ್ಲಿರುತ್ತದೆ. ಇದಕ್ಕಾಗಿ ದೈನಂದಿನ ಜೀವನದಲ್ಲಿ ಸಾಧನೆಯ ಪ್ರಯತ್ನವನ್ನು ಮಾಡುವುದು ಅನಿವಾರ್ಯವಾಗಿದೆ. ಸಾಧನೆಯಿಂದಾಗಿ ಕಠಿಣ ಪರಿಸ್ಥಿತಿಗಳನ್ನೂ ಧೈರ್ಯದಿಂದ ಮತ್ತು ಆನಂದದಿಂದ ಎದುರಿಸಲು ಸಾಧ್ಯವಾಗುತ್ತದೆ. ವಾಚಕರೇ, ಆಪತ್ಕಾಲದಲ್ಲಿ ಅಲ್ಲ, ಈಗಿನಿಂದಲೇ ಸಾಧನೆಯನ್ನು ಪ್ರಾರಂಭಿಸಿರಿ ಮತ್ತು ತಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು (ಈಶ್ವರೀ ಶಕ್ತಿಯ) ಬೆಳೆಸಿಕೊಂಡು ನಿಶ್ಚಿಂತರಾಗಿರಿ !