ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಮಹತ್ವದ ಸೂಚನೆ

ಆಕಾಶದಲ್ಲಿ ಸಿಡಿಲುಗಳ ಆರ್ಭಟವಿದ್ದರೆ, ಮುಂದಿನ ಎಚ್ಚರ ವಹಿಸಿ ಸುರಕ್ಷಿತವಿರಿ !

ಮಳೆಗಾಲದಲ್ಲಿ ಮಳೆಯ ಜೊತೆಗೆ ಗುಡುಗುಗಳ ಆರ್ಭಟವೂ ಇರುತ್ತದೆ. ಕೆಲವು ಸಲ ಇತರ ಋತುಗಳಲ್ಲಿಯೂ ಆಕಾಶದಲ್ಲಿ  ಮಿಂಚುಗಳು ಮಿಂಚುತ್ತವೆ. ಮಿಂಚಿನ ಪ್ರಕಾಶ ಮತ್ತು ಅದರ ಶಬ್ದ ಕೇಳಿಸುವುದು, ಇವುಗಳಲ್ಲಿ ೩೦ ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ, ಆ ಮಿಂಚು ಅಪಾಯಕಾರಿಯಾಗಿದೆ ಎಂದು ತಿಳಿದುಕೊಳ್ಳಬೇಕು. ಗುಡುಗುವ ಸಿಡಿಲು ಭೂಮಿಯ ಮೇಲೆ ಅಪ್ಪಳಿಸಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಮತ್ತು ಆರ್ಥಿಕ ಹಾನಿಯಾಗಬಹುದು. ‘ಇಂತಹ ಸಮಯದಲ್ಲಿ ಯಾವ ಮುಂಜಾಗರೂಕತೆಗಳನ್ನು ವಹಿಸಬೇಕು ? ಎನ್ನುವುದನ್ನು ಕೆಳಗೆ ನೀಡಲಾಗಿದೆ.

೧. ಮಹತ್ವದ ಸೂಚನೆಗಳು

ಅ. ‘ಸಿಡಿಲು ಬಡಿದರೆ ಕಟ್ಟಡಕ್ಕೆ ಅಪಾಯವಾಗಬಾರದು ಮತ್ತು ಜೀವಹಾನಿಯಾಗಬಾರದು, ಎಂದು ಪ್ರತಿಯೊಂದು ಕಟ್ಟಡಕ್ಕೆ ‘ಸಿಡಿಲು ನಿರೋಧಕ (‘ಲೈಟನಿಂಗ್ ಅರೆಸ್ಟರ್) ಯಂತ್ರವನ್ನು ಅಳವಡಿಸುವುದು ಅನಿವಾರ್ಯವಾಗಿದೆ. ‘ನಿಮ್ಮ ಕಟ್ಟಡದ ಮೇಲೆ ಸಿಡಿಲು ನಿರೋಧಕ ಯಂತ್ರವನ್ನು ಜೋಡಿಸಲಾಗಿದೆಯೇ ? ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು.

ಆ. ಮನೆಯ ಹಸಿ ಗೋಡೆಗಳು, ಲೋಹದ ಪೀಠೋಪಕರಣ ಇತ್ಯಾದಿಗಳು ವಿದ್ಯುತ್ ವಾಹಕಗಳಾಗಿವೆ. ಮನೆಯ ಹೊರಗೆ ಸಿಡಿಲು ಬಿದ್ದರೆ ಮನೆಯ ಹಸಿಯಿಂದ ಅಪಾಯ ಉದ್ಭವಿಸಬಹುದು. ಆದುದರಿಂದ ಮಳೆಗಾಲದ ಮೊದಲು ಮನೆಯ ಗೋಡೆಗಳು ಹಸಿ ಆಗದಂತೆ ನೋಡಿಕೊಳ್ಳಬೇಕು ಮತ್ತು ‘ಭವಿಷ್ಯದಲ್ಲಿ ಪುನಃ ಹಸಿಯಾಗಬಾರದು ಎಂದು ಕಟ್ಟಡ ತಜ್ಞರ ಮಾರ್ಗದರ್ಶನವನ್ನು ಪಡೆದು ಮನೆಯ ದುರಸ್ತಿ ಮಾಡಿಕೊಳ್ಳಬೇಕು.

ಇ. ತಂತಿಗಳು ವಿದ್ಯುತ್ ವಾಹಕಗಳಾಗಿರುವುದರಿಂದ ಮನೆ, ಹೊಲ, ತೋಟ ಇತ್ಯಾದಿಗಳ ಸುತ್ತಲೂ ಸಾಧ್ಯವಾದಷ್ಟು ತಂತಿಯ ಬೇಲಿಯನ್ನು ಹಾಕಬಾರದು. ಈ ಹಿಂದೆಯೇ ಬೇಲಿಯನ್ನು ಹಾಕಿದ್ದರೆ, ಅದರಿಂದ ಅಪಾಯವಾಗಬಾರದೆಂದು ಅದಕ್ಕೆ ಒಳ್ಳೆಯ ರೀತಿಯಲ್ಲಿ ‘ಅರ್ಥಿಂಗ್ ಮಾಡಿಸಿಕೊಳ್ಳಬೇಕು.

ಈ. ನಿಮ್ಮ ಕಟ್ಟಡದ ಅಥವಾ ಮನೆಯ ಹೊರಗಿನ ರಸ್ತೆಯ ಮೇಲಿನಿಂದ ವಿದ್ಯುತ್ ತಂತಿಗಳು (ವೈಯರ್‌ಗಳು) ಹಾದು ಹೋಗಿದ್ದರೆ ಮತ್ತು ಪಕ್ಕದಲ್ಲಿ ಗಿಡ-ಮರಗಳಿದ್ದರೆ ಮಳೆ ಅಥವಾ ಗಾಳಿಯಿಂದ ಗಿಡಗಳು ತಂತಿಯ ಮೇಲೆ ಬಿದ್ದು ಜೀವಹಾನಿಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಸ್ಥಳೀಯ ವಿದ್ಯುತ್ ಮಂಡಳಿಯವರನ್ನು ಸಂಪರ್ಕಿಸಿ ವಿದ್ಯುತ್ ತಂತಿಯ ಹತ್ತಿರವಿರುವ ಗಿಡಗಳ ಕೊಂಬೆಗಳನ್ನು ಕತ್ತರಿಸಲು ಹೇಳಬೇಕು.

ಉ. ಸಿಡಿಲುಗಳು ಬೀಳುವಾಗ ಯಾವುದೇ ವಿದ್ಯುತ್ ತಂತಿಗಳ ಕೆಳಗೆ ನಿಂತುಕೊಳ್ಳಬಾರದು. ಹಾಗೆಯೇ ಅಲ್ಲಿ ಸಂಚಾರಿವಾಣಿಯಲ್ಲಿ (ಮೊಬೈಲ್‌ನಲ್ಲಿ) ಮಾತನಾಡಬಾರದು. ಅವುಗಳ ಕೆಳಗೆ ಪ್ರಾಣಿಗಳು ನಿಂತುಕೊಳ್ಳದಂತೆ ಜಾಗರೂಕತೆ ವಹಿಸಬೇಕು. ವಿದ್ಯುತ್ ತಂತಿಗಳಿಂದ ಕಿಡಿಗಳು ಹಾರುತ್ತಿದ್ದರೆ (‘ಸ್ಪಾರ್ಕಿಂಗ್) ತಕ್ಷಣವೇ  ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಊ. ವಿದ್ಯುತ್ ಕಂಬ, ವಿದ್ಯುತ್ ತಂತಿ, ಹಾಗೆಯೇ ಮರಗಳ ಕೆಳಗೆ ದ್ವಿಚಕ್ರ ವಾಹನ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಿದರೆ ಬಿರುಗಾಳಿಯಿಂದ ಕಂಬ ಅಥವಾ ಮರಗಳು ಬುಡಮೇಲಾಗಿ ಅವುಗಳ ಮೇಲೆ ಬಿದ್ದರೆ ದೊಡ್ಡ ಹಾನಿಯಾಗಬಹುದು. ಆದುದರಿಂದ ಅಲ್ಲಿ ವಾಹನಗಳನ್ನು ನಿಲ್ಲಿಸುವುದು, ವಾಹನಗಳನ್ನು ನಡೆಸುವುದು ಇತ್ಯಾದಿ ಮಾಡಬಾರದು.

ಎ. ಮಳೆಗಾಲದಲ್ಲಿ ಅನಿಶ್ಚಿತ ಅವಧಿಗಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಬಹುದು. ಈ ಕಾರಣದಿಂದ ಮನೆಯಲ್ಲಿ ಹಣತೆ, ಮೇಣದಬತ್ತಿ, ಟಾರ್ಚ್, ಕಂದೀಲು ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.

ಏ. ಸರಕಾರದಿಂದ ನೀಡುವ ಸೂಚನೆಗಳ ಪಾಲನೆಯನ್ನು ಮಾಡಬೇಕು. ಅವುಗಳನ್ನು ನಿರ್ಲಕ್ಷಿಸಬಾರದು.

೨. ಸಿಡಿಲುಗಳು ಬೀಳುತ್ತಿರುವಾಗ ಮನೆಯಲ್ಲಿದ್ದರೆ ಯಾವ ಕಾಳಜಿಗಳನ್ನು ತೆಗೆದುಕೊಳ್ಳಬೇಕು ?

ಅ. ಮನೆಯಿಂದ ಹೊರಗೆ ಹೋಗಬಾರದು, ಹಾಗೆಯೇ ಬಾಲ್ಕನಿಗೂ ಹೋಗಬಾರದು.

ಆ. ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ‘ಸಾಕೆಟ್ನಿಂದ ಹೊರಗೆ ತೆಗೆದಿಡಬೇಕು.

ಇ. ಈ ಅವವಧಿಯಲ್ಲಿ ಲಿಫ್ಟ್, ವಾತಾನುಕೂಲ ಯಂತ್ರ (ಎ.ಸಿ) ‘ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಪೆಟ್ಟಿಗೆಯನ್ನು (ಫ್ರಿಡ್ಜ) ಸ್ಪರ್ಶಿಸಬಾರದು. ‘ಸಂಚಾರವಾಣಿಯನ್ನು (ಮೊಬೈಲ್) ಉಪಯೋಗಿಸಬೇಕೋ ಅಥವಾ ಬಾರದೋ ? ಎನ್ನುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಸಂಚಾರಿವಾಣಿಯನ್ನು ಉಪಯೋಗಿಸಬಾರದು.

ಈ. ಹೊರಗಿನಿಂದ ನೀರು ಸರಬರಾಜು ಮಾಡುವ ನಲ್ಲಿಯು ಕಬ್ಬಿಣದ್ದಾಗಿದ್ದರೆ, ಅದನ್ನು ಸ್ಪರ್ಶಿಸಬಾರದು.

ಉ. ಹಸಿಯಾಗಿರುವ ಗೋಡೆಗಳನ್ನು ಸ್ಪರ್ಶಿಸಬಾರದು.

ಊ. ಕೆಲವು ಸಲ ಆಪತ್ಕಾಲೀನ ಸ್ಥಿತಿಯಲ್ಲಿ ಸುಳ್ಳು ಸಂದೇಶಗಳನ್ನು ಎಲ್ಲೆಡೆ ಹರಡಲಾಗುತ್ತದೆ. ಇಂತಹ ಯಾವುದೇ ವದಂತಿಗಳ ಮೇಲೆ ವಿಶ್ವಾಸ ಇಡಬಾರದು. ಸರಕಾರವು ಅಧಿಕೃತವಾಗಿ ಪ್ರಸಾರ ಮಾಡುವ ಮಾಹಿತಿಯನ್ನು ನಂಬಬೇಕು.

೩. ಮನೆಯ ಹೊರಗಿರುವಾಗ ತೆಗೆದುಕೊಳ್ಳಬೇಕಾದ ಮುಂಜಾಗರೂತೆ

ಅ. ಖಾಲಿ ಪ್ರದೇಶಗಳಲ್ಲಿ (ಉದಾ. ಬಯಲು ಪ್ರದೇಶ, ಸಮುದ್ರ ದಂಡೆ, ಮೈದಾನ) ಹಾಗೆಯೇ ವಿದ್ಯುತ್ ಕಂಬ, ‘ಮೊಬೈಲ್ ಟವರ್, ಕೆಸರಿನಿಂದ ತುಂಬಿರುವ ಸ್ಥಳ, ನೀರಿನ ಸಂಪು, ತಗಡಿನ ಶೆಡ್ ಇತ್ಯಾದಿ ಸ್ಥಳಗಳಲ್ಲಿ ನಿಲ್ಲಬಾರದು.

ಆ. ದ್ವಿಚಕ್ರ ವಾಹನ ಅಥವಾ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರೆ ಅಥವಾ ದೋಣಿಯಲ್ಲಿ ಹೋಗುತ್ತಿದ್ದರೆ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಚತುಷ್ಚಕ್ರ ವಾಹನದಿಂದ ಪ್ರವಾಸ ಮಾಡುತ್ತಿದ್ದರೆ ವಾಹನವನ್ನು ನಿಲ್ಲಿಸಿ ವಾಹನದಲ್ಲಿಯೇ ಕುಳಿತಿರಬೇಕು.

ಇ. ಮರಗಳು ಮತ್ತು ವಿದ್ಯುತ್ ಕಂಬಗಳಿಗಿಂತ ದೂರ ಸುರಕ್ಷಿತ ಸ್ಥಳಗಳಲ್ಲಿ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಬೇಕು. ಚತುಷ್ಚಕ್ರ ವಾಹನಗಳ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಾಹನದ ಗಾಲಿಗಳ ಅಡಿಯಲ್ಲಿ ಭಾರವಾದ ವೇಗ ನಿಯಂತ್ರಕ ವಸ್ತುಗಳನ್ನು ಹಚ್ಚಬೇಕು. ಏಕೆಂದರೆ, ಬಿರುಗಾಳಿಯ ಗಾಳಿಯಿಂದ ವಾಹನ ಸರಿದಾಡುವ ಸಾಧ್ಯತೆಯಿರುತ್ತದೆ.

ಈ. ಸಿಡಿಲುಗಳು ಮರಗಳಿಂದ ಆಕರ್ಷಿಸಲ್ಪಡುವುದರಿಂದ ಮರಗಳ ಕೆಳಗೆ ನಿಲ್ಲಬಾರದು. ಸಿಡಿಲುಗಳು ಭೂಮಿಗಿಂತ ಎತ್ತರದ ಸ್ಥಳಗಳಲ್ಲಿ ಅಧಿಕ ಆಕರ್ಷಿಸಲ್ಪಡುವುದರಿಂದ ಅಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಉ. ಮಳೆ ಬೀಳುತ್ತಿದ್ದರೆ ಅಥವಾ ಮಳೆಯಿಂದ ಎಲ್ಲ ಕಡೆಗೆ ಒದ್ದೆಯಾಗಿದ್ದರೆ ಯಾವುದೇ ವಿದ್ಯುತ್ ಕಂಬವನ್ನು ಸ್ಪರ್ಶಿಸಬಾರದು; ಏಕೆಂದರೆ ಒದ್ದೆಯಾಗಿರುವುದರಿಂದ ವಿದ್ಯುತ್ ಶಾಕ್ ತಗುಲಬಹುದು.

ಊ. ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ಮುಟ್ಟಬಾರದು. ಆ ಮರಗಳ ಮೇಲೆ ವಿದ್ಯುತ್‌ವಾಹಕ ತಂತಿಗಳು ಬಿದ್ದಿರುವ ಸಾಧ್ಯತೆಯಿರುತ್ತದೆ.

ಎ. ನೀರು ವಿದ್ಯುತ್‌ವಾಹಕವಾಗಿರುವುದರಿಂದ ನೀರಿನ ಮೂಲದಿಂದ ದೂರವಿರಬೇಕು.

ಏ. ಹೊಲದಲ್ಲಿ ಅಥವಾ ನೀರಿನಲ್ಲಿ ಕೆಲಸ ಮಾಡುವ ವ್ಯಕ್ತಿಗಳು ತಕ್ಷಣವೇ ಒಣಗಿದ ಮತ್ತು ಸುರಕ್ಷಿತ ಸ್ಥಳಕ್ಕೆ ಹೋಗಬೇಕು.

ಓ. ವಿದ್ಯುತ್ತಿನಿಂದ ನಡೆಯುವ ಯಂತ್ರಗಳು, ಹಾಗೆಯೇ ಧಾತುಗಳಿಂದ (ಮೆಟಲ್) ತಯಾರಿಸಲಾಗಿರುವ ವಸ್ತುಗಳು ವಿದ್ಯುತ್ ವಾಹಕಗಳಾಗಿರುವುದರಿಂದ ಅವುಗಳನ್ನು ಉಪಯೋಗಿಸಬಾರದು. ಧಾತುಗಳ ತಂತಿಗಳಿರುವ ಕೊಡೆಯನ್ನೂ ಉಪಯೋಗಿಸಬಾರದು.

೪. ಮಿಂಚು ಮಿಂಚುವುದು ಅಥವಾ ಗುಡುಗು ಗುಡುಗುವುದು ಕಡಿಮೆಯಾದ ಬಳಿಕ ಮಾಡಬೇಕಾದ ಕೃತಿಗಳು

ಅ. ವಾತಾವರಣ ಮೊದಲಿನಂತೆ ಆಗುವವರೆಗೆ ಮನೆಯಿಂದ ಹೊರಗೆ ಹೋಗಬಾರದು.

ಆ. ಬಿರುಗಾಳಿ ಮತ್ತು ಮಳೆಯಿಂದ ಪರಿಸರದಲ್ಲಿನ ಮರಗಳು ಬಿದ್ದಿದ್ದರೆ ಅಥವಾ ವಿದ್ಯುತ್‌ವಾಹಕ ತಂತಿಗಳು ತುಂಡಾಗಿದ್ದರೆ, ಅವುಗಳನ್ನು ಸ್ಪರ್ಶಿಸ ಬಾರದು. ಅಗ್ನಿಶಾಮಕ ದಳ ಮತ್ತು ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಇ. ಮನೆಯ ಗ್ಯಾಸ್ ‘ಸಿಲಿಂಡರನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದರೆ ವಿದ್ಯುತ್ ಪ್ರವಾಹದ  ಮೇನ್ ಸ್ವಿಚ್ ಕಡಿತಗೊಳಿಸಬೇಕು. ಸಿಲಿಂಡರ್ ಗಾಳಿಯ ಸಂಪರ್ಕಕ್ಕೆ ಬರುವ ಸ್ಥಳದಲ್ಲಿ (ಉದಾ. ಬಾಲ್ಕನಿಯಲ್ಲಿ) ಇಡಬೇಕು. ಮನೆಯಲ್ಲಿ ಗ್ಯಾಸ್ ವಾಸನೆ ಹರಡಿದ್ದರೆ ವಿದ್ಯುತ್ ಸ್ವಿಚ್ ಆನ್-ಆಫ್ ಮಾಡಬಾರದು.

ಈ. ವಾಹನಗಳು, ವಿದ್ಯುತ್ ಉಪಕರಣಗಳು, ಹಾಗೆಯೇ ಮನೆಯಲ್ಲಿನ ಸಾಮಗ್ರಿಗಳು ಹೊಸದಾಗಿದ್ದರೆ, ಅವುಗಳ ವಿಮೆ ಮಾಡಿಸಿದ್ದರೆ ಮತ್ತು ನೈಸರ್ಗಿಕ ವಿಪತ್ತಿನಿಂದ ಆಗಿರುವ ಹಾನಿ ದೊರೆಯುತ್ತಿದ್ದರೆ, ವಿಮಾ ಪ್ರತಿನಿಧಿಯ ಮಾರ್ಗದರ್ಶನವನ್ನು ಪಡೆಯ ಬೇಕು. ಹಾನಿಯಾಗಿರುವ ಮನೆಯಲ್ಲಿನ ವಸ್ತುಗಳನ್ನು ಸರಿಪಡಿಸುವ ಮೊದಲು ಅವುಗಳ ಛಾಯಾಚಿತ್ರಗಳನ್ನು ತೆಗೆಯಬೇಕು ಮತ್ತು ಅವುಗಳ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು.

ವಿಪತ್ತುಗಳ ಪ್ರಸಂಗದಲ್ಲಿ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ (National Disaster Management Authority)  ೦೧೧-೧೦೭೮ ಈ ಹೆಲ್ಪಲೈನ್ ಕ್ರಮಾಂಕವನ್ನು ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.

ಆಪತ್ಕಾಲೀನ ಸ್ಥಿತಿಯಲ್ಲಿ ಕೇವಲ ಭಗವಂತನೇ ನಮ್ಮ ರಕ್ಷಣೆ ಮಾಡಬಹುದು ಆದುದರಿಂದ ಪ್ರತಿನಿತ್ಯ ಸಾಧನೆಯನ್ನು ಮಾಡಿರಿ !

ನೈಸರ್ಗಿಕ ವಿಪತ್ತುಗಳ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಉಪಾಯಯೋಜನೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಭಗವಂತನನ್ನು ಪ್ರತಿನಿತ್ಯ ಆರಾಧಿಸಬೇಕು. ಇಂತಹ ಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಪ್ರತಿದಿನ ಸಾಧನೆಯ ಪ್ರಯತ್ನಗಳನ್ನು ಮಾಡಿ ಆತ್ಮಬಲವನ್ನು ನಿರ್ಮಾಣ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆದುದರಿಂದ ವಿಪತ್ತು ಎದುರಾದಾಗ ಅಲ್ಲ, ಈಗಿನಿಂದಲೇ ಸಾಧನೆಯನ್ನು ಪ್ರಾರಂಭಿಸಿರಿ.

‘ನ ಮೆ ಭಕ್ತಃ ಪ್ರಣಶ್ಯತಿ | (ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೧) ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ ಎಂದು ಭಗವಂತನ ವಚನವಿದೆ. ಮುಂಬರುವ ಆಪತ್ಕಾಲದಿಂದ ರಕ್ಷಣೆಗಾಗಿ ಭಗವಂತನಿಗೆ ಶರಣಾಗಿ ಈಗಿನಿಂದಲೇ ಭಕ್ತಿಭಾವದಿಂದ ಸಾಧನೆಯನ್ನು ಮಾಡಿರಿ ಮತ್ತು ಭಗವಂತನ ಭಕ್ತರಾಗಿರಿ.

ಓದುಗರಿಗೆ ಕರೆ

ಸಿಡಿಲುಗಳು ಬೀಳುವುದು, ಈ ವಿಷಯದ ಬಗ್ಗೆ ಓದುಗರಿಗೆ ಯಾವುದಾದರೂ ಅಂಶವನ್ನು ತಿಳಿಸುವುದಿದ್ದರೆ, ಅವರು ಅದನ್ನು ಕೆಳಗಿನ ಗಣಕಯಂತ್ರ ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕು ಎಂದು ವಿನಂತಿ. ಇದರಿಂದ ಈ ವಿಷಯವನ್ನು ಸಮಾಜದ ಎದುರಿಗೆ ಆಳವಾಗಿ ಮಂಡಿಸಲು ಸಹಾಯವಾಗುವುದು.

ಸಂಗಣಕ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ – ೪೦೩೪೦೧.