ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ !

ಶ್ರೀ. ಸಿದ್ದೇಶ ಕರಂದೀಕರ

“೫.೭.೨೦೨೦ ರಂದು ವ್ಯಾಸ ಪೂರ್ಣಿಮೆ, ಅಂದರೆ ಗುರು ಪೂರ್ಣಿಮೆ ಇದೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸುತ್ತಾರೆ;  ಆದರೆ ಈ ವರ್ಷ ಕೊರೋನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರುಪೂರ್ಣಿಮೆಯನ್ನು  ಆಚರಿಸಲು ಸಾಧ್ಯವಿಲ್ಲ. ಇಲ್ಲಿ ಒಂದು ಮಹತ್ವದ ವಿಷಯವೆಂದರೆ, ಹಿಂದೂ ಧರ್ಮದಲ್ಲಿ ಆಪತ್ಕಾಲದಲ್ಲಿ ಧರ್ಮಾಚರಣೆಗಾಗಿ ಕೆಲವು ಪರ್ಯಾಯಗಳನ್ನು ಹೇಳಲಾಗಿದೆ.

೧. ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೆ ಭಕ್ತಿಭಾವದಿಂದ ಗುರುಪೂಜೆ ಅಥವಾ ಮಾನಸಪೂಜೆ ಮಾಡಿದರೂ ಒಂದು ಸಾವಿರಪಟ್ಟು ಗುರುತತ್ತ್ವದ ಲಾಭವಾಗುವುದು ಗುರುಪೂರ್ಣಿಮೆಯಂದು ಹೆಚ್ಚಿನ ಜನರು ತಮ್ಮ ಶ್ರೀ ಗುರುಗಳ ಬಳಿ ಹೋಗಿ ಅವರಿಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತಾರೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಕೆಲವರು ಶ್ರೀಗುರುಗಳಿಗೆ, ಕೆಲವರು ಮಾತೃ- ತೃಗಳಿಗೆ, ಕೆಲವರು ವಿದ್ಯಾಗುರುಗಳಿಗೆ (ನಮಗೆ ಜ್ಞಾನ ನೀಡಿದವರಿಗೆ ಅಂದರೆ ಶಿಕ್ಷಕರಿಗೆ), ಕೆಲವರು ಆಚಾರ್ಯಗುರುಗಳಿಗೆ (ತಮ್ಮಲ್ಲಿ ಪರಂಪರೆಗನುಸಾರ ಪೂಜೆಗೆ ಬರುವ ಗುರೂಜಿಗಳು), ಇನ್ನು ಕೆಲವರು ಮೋಕ್ಷಗುರು (ನಮಗೆ ಸಾಧನೆಯ ದೃಷ್ಟಿಕೋನವನ್ನು ನೀಡಿ ಮೋಕ್ಷದ ಮಾರ್ಗವನ್ನು ತೋರಿಸಿದ ಗುರುಗಳು)ಗಳ ಬಳಿ ಹೋಗಿ ಅವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ವರ್ಷ ಕೊರೋನಾದ ಮಹಾಮಾರಿಯ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೆ ಇದ್ದು ಭಕ್ತಿಭಾವದಿಂದ ಶ್ರೀ ಗುರುಗಳ ಛಾಯಾಚಿತ್ರವನ್ನಿಟ್ಟು ಪೂಜೆ ಅಥವಾ ಮಾನಸಪೂಜೆಯನ್ನು ಭಾವಪೂರ್ಣ ವಾಗಿ ಮಾಡುವುದರಿಂದ ನಮಗೆ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುತ್ತದೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಉಪಾಸ್ಯದೇವತೆ, ಸಂತರು ಅಥವಾ ಶ್ರೀಗುರುಗಳು ಬೇರೆ ಬೇರೆ ಆಗಿದ್ದರೂ, ಗುರುತತ್ತ್ವವು ಒಂದೇ ಆಗಿರುತ್ತದೆ.

೨. ಎಲ್ಲ ಭಕ್ತರು ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತಶಕ್ತಿಯ ಲಾಭವಾಗುತ್ತದೆ

ಸಂಪ್ರದಾಯಗಳಲ್ಲಿನ ಎಲ್ಲ ಭಕ್ತರು ಸಾಧ್ಯವಾದರೆ ಒಂದೇ ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಬೇಕು. ‘ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಹೆಚ್ಚು ಸಂಘಟಿತಶಕ್ತಿಯ ಲಾಭವಾಗುತ್ತದೆ. ಆದ್ದರಿಂದ ಸಾಧ್ಯವಿದ್ದರೆ ಎಲ್ಲರೂ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ಪೂಜೆ ಮಾಡಬೇಕು.

ಅ. ಬೆಳಗ್ಗಿನ ಸಮಯ ಪೂಜೆಗೆ ಉತ್ತಮವೆಂದು ಹೇಳಲಾಗುತ್ತದೆ. ಬೆಳಗ್ಗೆ ಪೂಜೆ ಮಾಡಲು ಸಮಯವಿರುವವರು ಬೆಳಗ್ಗಿನ ಸಮಯವನ್ನು ನಿರ್ಧರಿಸಿ ಪೂಜೆ ಮಾಡಬಹುದು.

ಆ. ಕೆಲವು ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಪೂಜೆ ಮಾಡಲು ಸಾಧ್ಯವಿಲ್ಲದವರು ಸಾಯಂಕಾಲ ಒಂದು ಸಮಯವನ್ನು ನಿಶ್ಚಯಿಸಿ ಆ ಸಮಯದಲ್ಲಿ ಆದರೆ ಸೂರ್ಯಾಸ್ತದ ಮೊದಲು ಅಂದರೆ ಸಂಜೆ ೭ ಗಂಟೆ ಒಳಗೆ ಪೂಜೆ ಮಾಡಬಹುದು.

ಇ. ನಿರ್ಧರಿತ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲದವರು ತಮ್ಮತಮ್ಮ ಸಮಯಕ್ಕನುಸಾರ ಸೂರ್ಯಾಸ್ತದ ಮೊದಲು ಪೂಜೆ ಮಾಡಬಹುದು.

ಈ. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಪ್ರದಾಯಕ್ಕನುಸಾರ ಶ್ರೀ ಗುರುಗಳು ಅಥವಾ ಉಪಾಸ್ಯದೇವತೆಯ ಚಿತ್ರ, ಮೂರ್ತಿ ಅಥವಾ ಪಾದುಕೆಗಳನ್ನಿಟ್ಟು ಮನೆಯಲ್ಲಿ ಪೂಜೆ ಮಾಡಬೇಕು.

ಉ. ಚಿತ್ರ, ಮೂರ್ತಿ ಅಥವಾ ಪಾದುಕೆಗಳಿಗೆ ಗಂಧವನ್ನು ಹಚ್ಚಿ ಪುಷ್ಪವನ್ನು ಅರ್ಪಿಸಬೇಕು. ಧೂಪ, ದೀಪ ಮತ್ತು ನೈವೇದ್ಯ ವನ್ನು ತೋರಿಸಿ ಪಂಚೋಪಚಾರ ಪೂಜೆ ಮಾಡಬೇಕು. ನಂತರ ಶ್ರೀಗುರುಗಳ ಆರತಿ ಮಾಡಬೇಕು.

ಊ. ಸಾಮಗ್ರಿಗಳ ಅಭಾವದಿಂದಾಗಿ ಪ್ರತ್ಯಕ್ಷ ಪೂಜೆ ಮಾಡಲು ಸಾಧ್ಯವಿಲ್ಲದಿರುವವರು ಶ್ರೀಗುರುಗಳ ಅಥವಾ ಉಪಾಸ್ಯ ದೇವತೆಯ ಮಾನಸಪೂಜೆ ಮಾಡಬೇಕು.

ಎ. ನಂತರ ಶ್ರೀ ಗುರುಗಳು ನೀಡಿರುವ ಮಂತ್ರವನ್ನು ಜಪಿಸಬೇಕು. ಶ್ರೀ ಗುರುಗಳು ನಮ್ಮ ಜೀವನದಲ್ಲಿ ಬಂದ ನಂತರದ ನಮ್ಮ ಅನುಭೂತಿಗಳನ್ನು ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆ ಯನ್ನು ಸಲ್ಲಿಸಬೇಕು.

ಐ. ಆ ಸಮಯದಲ್ಲಿ ‘ವರ್ಷವಿಡೀ ನಾವು ಸಾಧನೆ ಮಾಡುವಾಗ ಎಲ್ಲಿ ಹಿಂದೆ ಉಳಿದೆವು ? ನಾವು ಶ್ರೀ ಗುರುಗಳ ಬೋಧನೆಯನ್ನು ಎಷ್ಟು ಪ್ರಮಾಣದಲ್ಲಿ ಆಚರಣೆ ಮಾಡಿದ್ದೇವೆ ?, ಎಂಬುದರ ಸಿಂಹಾವಲೋಕನ ಮಾಡಿ ಅದರ ಬಗ್ಗೆ ಚಿಂತನೆ ಮಾಡಬೇಕು.

– ಶ್ರೀ. ಸಿದ್ದೇಶ ಕರಂದೀಕರ, ಪುರೋಹಿತ ಪಾಠಶಾಲೆ ಸನಾತನ ಆಶ್ರಮ, ರಾಮನಾಥಿ ಗೋವಾ (೧೪.೬.೨೦೨೦)