‘ಸ್ವಾವಲಂಬಿ ರೆಕ್ಕೆಯ ಬಾನೆತ್ತರದ ನೆಗೆತ

ಕೊರೋನಾದಿಂದ ಉದ್ಭವಿಸಿರುವ ಭಯಂಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ‘ಸ್ವಾವಲಂಬಿಯನ್ನಾಗಿಸಲು ಆಯ್ಕೆ ಮಾಡಿರುವ ಮಾರ್ಗವು ಖಂಡಿತವಾಗಿಯೂ ಸ್ವಾಗತಾರ್ಹವಾಗಿದೆ. ಕೊರೋನಾದಿಂದ ನಲುಗಿರುವ ಅರ್ಥವ್ಯವಸ್ಥೆಗೆ ವೇಗವನ್ನು ತರಲು ಮೋದಿಯವರು ೨೦ ಲಕ್ಷ ಕೋಟಿ ರೂಪಾಯಿಗಳ ಬೃಹತ್ ‘ಪ್ಯಾಕೇಜ್ ಘೋಷಿಸಿದರು. ಇದರ ಮೌಲ್ಯವು ಭಾರತದ ಜಿ.ಡಿ.ಪಿ.ಯ ಶೇ. ೧೦ ರಷ್ಟಿದೆ. ಈ ಬಹುದೊಡ್ಡ ಆರ್ಥಿಕ ಸಹಾಯವನ್ನು ಘೋಷಿಸುವಾಗ ಸರಕಾರವು ದೇಶವನ್ನು ‘ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನಿಲುವು ಭಾರತದ ಅಭಿವೃದ್ಧಿಯ ಪ್ರಯತ್ನಗಳಿಗೆ ಖಂಡಿತವಾಗಿಯೂ ಶಾಶ್ವತ ಆಯಾಮವನ್ನು ನೀಡಲಿದೆ.

೨೦ ಲಕ್ಷ ಕೋಟಿ ರೂಪಾಯಿಗಳ ಸರಕಾರಿ ‘ಪ್ಯಾಕೇಜ್ಗಳಲ್ಲಿ ೮ ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ‘ರಿಸರ್ವ ಬ್ಯಾಂಕ್ ಮತ್ತು ಕೇಂದ್ರ ಸರಕಾರವು ಕೊರೋನಾದ ವಿರುದ್ಧ ಹೋರಾಡುವ ಯೋಜನೆಯಲ್ಲಿ ತೊಡಗಿಸಿದೆ. ಇನ್ನುಳಿದ ೧೨ ಲಕ್ಷ ಕೋಟಿಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಪುನಃಶ್ಚೇತನಗೊಳಿಸಲು ಸರಕಾರವು ೩ ಲಕ್ಷ ಕೋಟಿ ರೂಪಾಯಿಗಳ ನೇರ ಸಾಲ (ಯಾವುದೇ ಅಡಮಾನವಿಟ್ಟುಕೊಳ್ಳದೇ) ಮತ್ತು ಸುಲಭ ಸಾಲವನ್ನು ಒದಗಿಸಲು ನಿರ್ಣಯಿಸಿದೆ. ಸಾಲಸೌಲಭ್ಯದ ಕೊರತೆಯಿಂದ ಹಾಗೂ ಕ್ಲಿಷ್ಟಕರವಾದ ಷರತ್ತುಗಳ ಕಾರಣದಿಂದ ಮುಚ್ಚುವ ಸ್ಥಿತಿಯಲ್ಲಿರುವ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು ಕೈಗೊಂಡಿರುವ ಈ ನಿರ್ಣಯ ಮಹತ್ವಪೂರ್ಣವಾಗಿದೆ. ‘ಪ್ಯಾಕೇಜ್ನಲ್ಲಿ ಇತರೆ ಮೊತ್ತಗಳು ಯಾವ ಯಾವ ವಲಯಗಳಿಗೆ ಮತ್ತು ಯಾವ ಸ್ವರೂಪದಲ್ಲಿ ನೀಡಲು ನಿರ್ಧರಿಸಲಾಗಿದೆಯೆಂದು ವಿತ್ತಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರ ವಿವರಗಳಿಂದ ಬಹಿರಂಗವಾಗಿದೆ. ಈ ನಿಮಿತ್ತದಿಂದ ಸರಕಾರವು ದೇಶಿ ಕೈಗಾರಿಕೆಗಳಿಗೆ ಬೆಂಬಲವನ್ನು ನೀಡಿ ‘ಸ್ವದೇಶಿ ಬ್ರ್ಯಾಂಡ್ ನಿರ್ಮಾಣ ಮಾಡಲು ಪ್ರಾರಂಭಿಸಿರುವ ಪ್ರಯತ್ನಗಳು ಸ್ತುತ್ಯಾರ್ಹವಾಗಿದೆ. ಜನತೆಯೂ ಈ ಪ್ರಯತ್ನಗಳನ್ನು ಸದುಪಯೋಗ ಪಡಿಸಿಕೊಂಡು ಅದನ್ನು ಸಮರ್ಥಿಸಬೇಕು.

ಆತ್ಮತೇಜವನ್ನು ಜಾಗೃತಗೊಳಿಸುವ ಶಿಕ್ಷಣ

ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ‘ಯಾವುದು ವಿದೇಶಿ ಇದೆಯೋ, ಅದು ಒಳ್ಳೆಯದು ಎನ್ನುವ ಭ್ರಮೆಯನ್ನು ಭಾರತದಲ್ಲಿ ಉದ್ದೇಶಪೂರ್ವಕವಾಗಿ ಬಿಂಬಿಸಲಾಗಿತ್ತು. ಅದಕ್ಕೆ ಪೂರಕವಾಗಿ ಭಾರತೀಯತೆಯ ವಿಷಯದಲ್ಲಿ ಹೀನ ಭಾವನೆಯನ್ನು ನಿರ್ಮಾಣ ಮಾಡಿ ಆಂಗ್ಲಮಯ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ‘ಮೆಕಾಲೆ ಶಿಕ್ಷಣ ಪದ್ಧತಿ ಕಾರಣವಾಗಿದೆ. ಇದರಿಂದ ವಿದೇಶಿ ಬಟ್ಟೆಗಳನ್ನು ಪ್ರೀತಿಸುವ ಮತ್ತು ಸ್ವದೇಶಿ ವಸ್ತ್ರಗಳನ್ನು ತಿರಸ್ಕಾರದಿಂದ ನೋಡುವ ಒಂದು ದೊಡ್ಡ ಗುಂಪೇ ನಿರ್ಮಾಣವಾಯಿತು. ಕೀಳರಿಮೆಯ ಭಾವನೆಯನ್ನು ಬಲಪಡಿಸುವ ಶಿಕ್ಷಣಪದ್ಧತಿ ಇಂದಿಗೂ ಮುಂದುವರಿದೆ. ಈ ನಿರರ್ಥಕ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿ ವಿದ್ಯಾರ್ಥಿಗಳ ಸರ್ವೋತೋಮುಖ ಕಲ್ಯಾಣ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುವ, ರಾಷ್ಟ್ರಪ್ರೇಮವನ್ನು ಬಿಂಬಿಸುವ, ಪ್ರಾಚೀನ ಸಂಸ್ಕೃತಿಯ ವಿಷಯದಲ್ಲಿ ಅಭಿಮಾನ ನಿರ್ಮಾಣ ಮಾಡುವ ಮತ್ತು ವಿದ್ಯಾರ್ಥಿಗಳಲ್ಲಿರುವ ಆತ್ಮತೇಜವನ್ನು ಜಾಗೃತಗೊಳಿಸುವ ಶಿಕ್ಷಣಪದ್ಧತಿ ಜಾರಿಗೊಳ್ಳುವ ವರೆಗೆ ವಿಚಾರಗಳಲ್ಲಿ ‘ಸ್ವಾವಲಂಬಿತನ ಬರುವುದು ಕಠಿಣವಾಗಿದೆ. ಕೇವಲ ಆರ್ಥಿಕ ಸ್ತರದಲ್ಲಿ ಸ್ವಾವಲಂಬನೆ ಒಂದು ಹಂತದವರೆಗೆ ಯಶಸ್ಸು ತರಬಲ್ಲದು; ಆದರೆ ಈ ಯಶಸ್ಸಿನ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದ್ದರೆ, ‘ಸ್ವಾವಲಂಬಿ ಗಳನ್ನಾಗಿಸುವ ಶಿಕ್ಷಣವೂ ವಿದ್ಯಾರ್ಥಿಗಳಿಗೆ ದೊರೆಯುವಂತಾಗುವ ದಿಕ್ಕಿನಲ್ಲಿ ಸರಕಾರವು ಹೆಜ್ಜೆ ಇಡಬೇಕು.

ಸ್ವದೇಶಿ ಬೆಂಬಲ

‘ಸ್ವಾವಲಂಬಿ ಭಾರತ ಈ ಅಭಿಯಾನದಲ್ಲಿ ‘ಸ್ವದೇಶಿ ಬೆಂಬಲ ಒಂದು ಬದಲಾಯಿಸಲಾಗದ ಅಂಗವಾಗಿದೆ. ಜಾಗತೀಕರಣದ ಹೆಸರಿನಲ್ಲಿ ಭಾರತವು ಅನೇಕ ವಿದೇಶಿ ಕಂಪನಿಗಳಿಗೆ ರತ್ನಗಂಬಳಿಯನ್ನು ಹಾಸಿತು ಮತ್ತು ಸಂಸ್ಕೃತದಂತೆ ಸ್ವದೇಶಿ ವಸ್ತುಗಳ ಪಾಲಿಗೆ ತಿರಸ್ಕಾರವೇ ಬಂದಿತು. ಸ್ವದೇಶಿ ವಸ್ತುಗಳೆಂದರೆ ಕಡಿಮೆ ಗುಣಮಟ್ಟದ ಅಥವಾ ದುಬಾರಿ ಹಾಗೂ ವಿದೇಶಿ ವಸ್ತುಗಳೆಂದರೆ ಗುಣಮಟ್ಟ ಹೊಂದಿರುವ ಹಾಗೂ ಕಡಿಮೆ ಬೆಲೆ ಈ ರೀತಿ ಬಿಂಬಿಸಲಾಯಿತು. ಇದರಿಂದ ಅನೇಕ ದೇಶಿ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿದವು. ಮುಕ್ತ ಮಾರುಕಟ್ಟೆ ವ್ಯವಸ್ಥೆಯ ವಾತಾವರಣದಲ್ಲಿ ಭಾರತೀಯ ಸ್ವದೇಶಿ ಕವಚ ಕಳಚಿದಂತಾಯಿತು. ಇಂತಹ ಸಮಯದಲ್ಲಿ ಸ್ವದೇಶಿ ವಸ್ತುಗಳ ಹರಿಕಾರರಾದ ದಿವಂಗತ ರಾಜೀವ ದೀಕ್ಷಿತ್ ಇವರು ವಿದೇಶಿ ಕಂಪನಿಗಳ ಲಾಭಗಳಿಸುವ ಹಾಗೂ ಲೂಟಿ ಮಾಡುವ ವೃತ್ತಿಗಳನ್ನು ಬಯಲಿಗೆಳೆಯುವ ಕಾರ್ಯವನ್ನು ವೇಗವಾಗಿ ಮಾಡಿದರು. ಸ್ವಾತಂತ್ರ್ಯದ ಪೂರ್ವದಲ್ಲಿ ಇದೇ ಸ್ವದೇಶಿ ಚಳುವಳಿಯು ಲಕ್ಷಾಂತರ ಭಾರತೀಯರ ಮನಸ್ಸಿನಲ್ಲಿ ದೇಶಪ್ರೇಮವನ್ನು ತುಂಬಿ ಅವರನ್ನು ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಲು ಪ್ರೇರಣೆ ನೀಡಿತ್ತು. ಸ್ವಾತಂತ್ರ್ಯ ಪ್ರಾಪ್ತಿಯ ಸಮಯದಲ್ಲಿ ಭಾರತದಲ್ಲಿ ೭೩೩ ವಿದೇಶಿ ಕಂಪನಿಗಳು ಸಕ್ರಿಯವಾಗಿದ್ದವು. ಅಧಿಕಾರ ಹಸ್ತಾಂತರದ ಒಪ್ಪಂದದ ಸಮಯದಲ್ಲಿ ‘ಈಸ್ಟ್ ಇಂಡಿಯಾ ಕಂಪನಿಯನ್ನು ಭಾರತದಿಂದ ಹೊರದಬ್ಬಲಾಯಿತು. ಇದೇ ಕಂಪನಿಯಿಂದ ಭಾರತದಲ್ಲಿ ಆಂಗ್ಲರ ಆಳ್ವಿಕೆ ಬಂದಿತ್ತು. ಇಂದಿನ ಸಮಯದಲ್ಲಿ ಭಾರತದಲ್ಲಿ ೫ ಸಾವಿರಕ್ಕಿಂತ ಅಧಿಕ ವಿದೇಶಿ ಕಂಪನಿಗಳು ಭಾರತೀಯ ಕೈಗಾರಿಕೆಗಳ ಶ್ವಾಸವನ್ನು ಅದುಮಿ ಸಕ್ರಿಯವಾಗಿವೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ಚಳುವಳಿಯ ಪುನರುಜ್ಜೀವಗೊಳಿಸಲು ಕೆಲವು ನಿರ್ದಿಷ್ಟ ಉಪಾಯಯೋಜನೆಗಳನ್ನು ಮಾಡುವುದು ಮತ್ತು ಜನರ ಮನಸ್ಸಿನಲ್ಲಿ ಆತ್ಮವಿಶ್ವಾಸದ ಹಾಗೂ ‘ಏನಾದರೂ ಮಾಡಿ ತೋರಿಸುವ ಪ್ರೇರಣೆಯನ್ನು ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಈ ಪ್ರಯತ್ನಗಳ ಭಾಗವೆಂದು ಸರಕಾರವು ೨೦೦ ಕೋಟಿ ರೂಪಾಯಿಗಳ ವರೆಗಿನ ವ್ಯವಹಾರಗಳಿಗೆ ವಿದೇಶಿ ಕಂಪನಿಗಳನ್ನು ನಿರ್ಬಂಧಿಸಿದೆ. ಇದು ಒಳ್ಳೆಯ ನಿರ್ಣಯವಾಗಿದೆ. ‘ಸ್ವದೇಶಿ ಕೇವಲ ವಸ್ತುವಷ್ಟೇ ಅಲ್ಲ, ಅದು ವಿಚಾರವೂ ಆಗಿದೆ. ಒಂದು ಸ್ವದೇಶಿ ಕೈಗಾರಿಕೆ ತೀವ್ರ ಪೈಪೋಟಿಯ ಕಾಲದಲ್ಲಿಯೂ ಅಲ್ಪ ಕಾಲಾವಧಿಯಲ್ಲಿಯೂ ವಿದೇಶಿ ಕಂಪನಿಗಳ ಏಕಸ್ವಾಮ್ಯವನ್ನು ಕಿತ್ತೆಸೆಯಬಲ್ಲದು. ಇದನ್ನು ‘ಪತಂಜಲಿ ಕೈಗಾರಿಕಾ ಸಮೂಹವು ಸಾಧಿಸಿ ತೋರಿಸಿದೆ. ಇಂತಹ ಎಷ್ಟೋ ಉದಾಹರಣೆಗಳನ್ನು ಹೇಳಬಹುದು. ಜಗತ್ತಿನಾದ್ಯಂತ ಕೊರೋನಾ ಪೀಡಿತರಿಗೆ ಸಮಾಧಾನ ನೀಡಿದ ‘ಹೈಡ್ರೊಕ್ಸಿಕ್ಲೊರೊಕ್ವೀನ್ ಈ ಔಷಧಿಯೂ ಭಾರತದ ದೇಣಿಗೆಯಾಗಿದೆ.

‘ಮೇಕ್ ಇನ್ ಇಂಡಿಯಾ ಅಭಿಯಾನ ಅಥವಾ ವಿದೇಶಿ ಉತ್ಪಾದನೆಗಳ ಆಮದಿನ ಮೇಲಿನ ತೆರಿಗೆ ಹೆಚ್ಚಳವು ‘ಸ್ವದೇಶಿ ವಸ್ತುಗಳಿಗೆ ಚಾಲನೆ ನೀಡುವ ದಿಶೆಯಲ್ಲಿ ಸರಕಾರದ ಕೆಲವು ದಿಟ್ಟ ಹೆಜ್ಜೆಗಳಾಗಿವೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಸರಕಾರದ ಮಟ್ಟದಲ್ಲಿ ಕೆಲವು ವಿಷಯಗಳನ್ನು ಕೈಗೊಳ್ಳುವಲ್ಲಿ ನಿರ್ಬಂಧಗಳಿದ್ದರೂ, ಸರಕಾರವು ಜನಜಾಗೃತಿಯನ್ನು ಮಾತ್ರ ಖಂಡಿತವಾಗಿಯೂ ಮಾಡಬಹುದು. ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ ವಿಷಯದಲ್ಲಿ ಜನಜಾಗೃತಿ ಮಾಡುವ ಜಾಹೀರಾತು ನೀಡುವುದು, ವಿವಿಧ ಸ್ಥಳಗಳಲ್ಲಿ ಸ್ವದೇಶ ವಸ್ತುಗಳ ಕೇಂದ್ರಗಳನ್ನು ನಿರ್ಮಾಣ ಮಾಡುವುದು, ಇದಕ್ಕಾಗಿ ಅನುದಾನವನ್ನು ನೀಡುವುದು ಇಂತಹ ಪ್ರಯತ್ನಗಳನ್ನು ಈಗ ಮಾಡಬೇಕು. ಸ್ವದೇಶಿ ವಸ್ತುಗಳಿಗೆ ಗೌರವವನ್ನು ದೊರಕಿಸಿ ಕೊಡಲು ವಿದೇಶಿ ವಸ್ತುಗಳ ರೂಢಿ, ದೊಡ್ಡಸ್ತಿಕೆ ಮತ್ತು ಜನತೆಯಲ್ಲಿ ಮೈಗೂಡಿರುವ ಗುಲಾಮಗಿರಿಯ ಮಾನಸಿಕತೆಯನ್ನು ಕಿತ್ತೆಸೆಯಬೇಕಾಗಿದೆ. ಆಂಗ್ಲರು ಭಾರತಕ್ಕೆ ಬರುವ ಮೊದಲು ಭಾರತ ಒಂದು ಆರ್ಥಿಕ ಮಹಾಶಕ್ತಿ ಮತ್ತು ಸಾಂಸ್ಕೃತಿಕ ಗುರುವಾಗಿತ್ತು. ಆಗಸ್ ಮೆಡಿಸನ್ ಹೆಸರಿನ ವಿದೇಶಿ ಅರ್ಥಶಾಸ್ತ್ರಜ್ಞನು ೧೭ ನೇ ಶತಮಾನದಲ್ಲಿ ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲು ಸರಿಸುಮಾರು ಶೇ. ೨೫ ರಷ್ಟು ಇತ್ತು ಎಂದು ನಮೂದಿಸಿದ್ದನು. ಈ ಗೌರವ ವಿದೇಶಿಗರ ಅಡಿಯಾಳಾಗಿ ಅಲ್ಲ, ಸ್ವಾವಲಂಬಿಗಳಾಗಿಯೇ ದೊರೆಯಬಲ್ಲದು. ಸ್ವಾವಲಂಬಿತನದ ರೆಕ್ಕೆ ಭಾರತವನ್ನು ಬಾನೆತ್ತರಕ್ಕೆ ನೆಗೆಯ್ಯುವಲ್ಲಿ ಸಹಾಯವಾಗಲಿದೆ.