ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ

ತಥಾಕಥಿತ ಅದೀನಾ ಮಸೀದಿಯ ಬಳಿ ಪೂಜೆ ಆರಂಭ

ಮಾಲ್ದಾ (ಬಂಗಾಳ) – ಮಾಲ್ದಾ ಜಿಲ್ಲೆಯ ಪಾಂಡುವಾದಲ್ಲಿರುವ ಸುಮಾರು ೬೫೦ (650) ವರ್ಷಗಳಷ್ಟು ಹಳೆಯದಾದ ತಥಾಕಥಿತ ಅದೀನಾ ಮಸೀದಿಯ ಬಳಿ ಬಿಜೆಪಿ ಸ್ಥಳೀಯ ನಾಯಕರ ಬೆಂಬಲದೊಂದಿಗೆ ಹಿಂದೂ ಸಂಘಟನೆಯೊಂದು ಪೂಜೆ ಮಾಡಲು ಪ್ರಾರಂಭಿಸಿದೆ. ‘ಆದಿನಾಥ ಪುರಾತನ ಶಿವ ಮಂದಿರ’ ಎಂಬ ಸಂಘಟನೆಯು, ಈ ಮಸೀದಿ ಸಂಕೀರ್ಣದ ಹೊರಗೆ ೩.೬ (3.6) ಅಡಿ ಎತ್ತರ ಮತ್ತು ಸುಮಾರು ೧.೫ (1.5) ಟನ್ ತೂಕದ ಶಿವಲಿಂಗವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಈ ಶಿವಲಿಂಗವನ್ನು ಸುಮಾರು ೨೮೯ (289) ಕಿಲೋಮೀಟರ್ ದೂರದಲ್ಲಿರುವ ತಾರಕೇಶ್ವರದಿಂದ ತರಲಾಗುತ್ತಿದೆ.

ಆದಿನಾಥ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣ

ಈ ಸಂಘಟನೆಯ ಮುಖ್ಯ ಸಂರಕ್ಷಕ ಮತ್ತು ಬಿಜೆಪಿ ನಾಯಕರಾದ ಶ್ರೀ ಕಾಜೋಲ್ ಗೋಸ್ವಾಮಿ ಮಾತನಾಡಿ, “ಈ ತಥಾಕಥಿತ ಮಸೀದಿಯಲ್ಲಿ ಹಿಂದೂ ಮತ್ತು ಬೌದ್ಧ ಧರ್ಮದ ಮೂರ್ತಿಗಳಿವೆ. ಆದಿನಾಥ ದೇವಾಲಯವನ್ನು ಕೆಡವಿ ಇಲ್ಲಿ ಮಸೀದಿ ನಿರ್ಮಿಸಲಾಗಿದೆ. ದೇವಾಲಯವನ್ನು ಪುನಃ ಸ್ಥಾಪಿಸುವುದು ಮತ್ತು ಅದರೊಳಗೆ ಶಿವಲಿಂಗವನ್ನಿಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸಂಘಟನೆಯು ಕಾನೂನನ್ನು ಸಂಪೂರ್ಣವಾಗಿ ಪಾಲಿಸುತ್ತದೆ” ಎಂದು ಹೇಳಿದರು. ಭಾರತೀಯ ಪುರಾತತ್ವ ಸರ್ವೇಕ್ಷಣೆ (ASI) ಮತ್ತು ಪೊಲೀಸ್ ಅಧಿಕಾರಿಗಳು ಸಂರಕ್ಷಿತ ಸ್ಮಾರಕ ಪ್ರದೇಶದ ಹೊರಗೆ ಮಾತ್ರ ಪೂಜೆ ಮಾಡಲು ಈ ಸಂಘಟನೆಗೆ ನಿರ್ದೇಶನ ನೀಡಿದ್ದಾರೆ.

ಪುರಾತತ್ವ ಇಲಾಖೆಯಿಂದ ನಿಯಮಾವಳಿ ಪ್ರಕಟ

ಈ ಬೆಳವಣಿಗೆಗಳ ನಂತರ ಮಾಲ್ದಾ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪ್ರಕಟಿಸಿದ್ದಾರೆ. ಅದೀನಾ ಸ್ಮಾರಕವು ೧೯೫೮ (1958)ರ ‘ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ’ಯಡಿ ಕೇಂದ್ರ ಸರಕಾರದಿಂದ ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಲ್ಪಟ್ಟಿದೆ ಎಂಬುದನ್ನು ಪೊಲೀಸರು ಜನರಿಗೆ ನೆನಪಿಸಿದ್ದಾರೆ. ಆದ್ದರಿಂದ, ಅನುಮತಿಯಿಲ್ಲದೆ ಸಂಕೀರ್ಣದ ಒಳಗೆ ಯಾವುದೇ ರೀತಿಯ ಪೂಜೆ ಅಥವಾ ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಭಾಜಪ

ರಾಜ್ಯಸಭೆಯ ಬಿಜೆಪಿ ಸಂಸದ ಸಮಿತ್ ಭಟ್ಟಾಚಾರ್ಯ ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯು ಮೂಲ ಆದಿನಾಥ ದೇವಾಲಯದ ಸಂರಕ್ಷಣೆಯತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು. ಇನ್ನೊಂದೆಡೆ ಸಿಪಿಐ(ಎಂ) ಕಾರ್ಯಕಾರಿ ಸಮಿತಿ ಸದಸ್ಯ ಮೊಹಮ್ಮದ್ ಸಲೀಂ, “ಮುಂಬರುವ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಬಿಜೆಪಿ ತನ್ನ ಹಳೆಯ ರಾಜಕೀಯ ತಂತ್ರ ಬಳಸುತ್ತಿದೆ” ಎಂದು ಆರೋಪಿಸಿದರು.

ಆದಿನಾಥ ದೇವಾಲಯದ ಇತಿಹಾಸ

ಅದೀನಾ ಮಸೀದಿಯ ಬಗ್ಗೆ ಸರಕಾರಿ ದಾಖಲೆಗಳಲ್ಲಿ, ಇದರ ನಿರ್ಮಾಣವನ್ನು ಕ್ರಿ.ಶ. ೧೩೭೩ (1373) ರಿಂದ ೧೩೭೫ (1375) ರ ಅವಧಿಯಲ್ಲಿ ಸುಲ್ತಾನ್ ಸಿಕಂದರ್ ಶಾ ಮಾಡಿದನೆಂದು ನಮೂದಿಸಲಾಗಿದೆ. ಆದಾಗ್ಯೂ, ಅನೇಕ ಪುರಾತತ್ವ ಮತ್ತು ವಾಸ್ತುಶಿಲ್ಪದ ಸಾಕ್ಷ್ಯಗಳು ಈ ಸ್ಥಳದ ಇತಿಹಾಸವು ಅದಕ್ಕಿಂತಲೂ ಹಳೆಯದು ಎಂಬುದನ್ನು ತೋರಿಸುತ್ತವೆ. ಈ ದೇವಾಲಯ ನಿರ್ಮಾಣಕ್ಕೆ ಪ್ರಮುಖವಾಗಿ ಪಾಲ-ಸೇನ ಕಾಲದ (೮ ರಿಂದ ೧೨ ನೇ ಶತಮಾನದ) ಅಸ್ತಿತ್ವದಲ್ಲಿದ್ದ ಹಿಂದೂ ಮತ್ತು ಬೌದ್ಧ ಧಾರ್ಮಿಕ ಸ್ಥಳಗಳಿಂದ ತರಲಾದ ಕಲ್ಲುಗಳು, ಕಂಬಗಳು ಮತ್ತು ಕೆತ್ತನೆಯ ಸಾಮಗ್ರಿಗಳನ್ನು ಬಳಸಲಾಗಿದೆ.

ಮಸೀದಿಯಲ್ಲಿರುವ ಅನೇಕ ಮೂರ್ತಿಗಳು ಮತ್ತು ಇತರ ಅವಶೇಷಗಳು ಇಲ್ಲಿ ಹಿಂದೆ ಭವ್ಯವಾದ ಆದಿನಾಥ ದೇವಾಲಯ ಮತ್ತು ಭಗವಾನ್ ವಿಷ್ಣುವಿನ ದೇವಾಲಯವಿತ್ತು ಎಂಬುದನ್ನು ತೋರಿಸುತ್ತವೆ. ಮಸೀದಿಯ ಮಿಂಬರ್ (ಇಮಾಮ್ ಬೋಧನೆ ಮಾಡುವ ಸ್ಥಳ) ಕೂಡ ಕಪ್ಪು ಬಸಾಲ್ಟ್ ಕಲ್ಲಿನಿಂದ ಮಾಡಿದ ಬಾಗಿಲನ್ನು ಬಳಸಿ ನಿರ್ಮಿಸಲಾಗಿದೆ, ಬಸಾಲ್ಟ್ ಕಲ್ಲನ್ನು ದೇವಾಲಯದ ಅವಶೇಷಗಳಿಂದ ತೆಗೆದುಕೊಳ್ಳಲಾಗಿತ್ತು.

ಇಲ್ಲಿನ ಗೋಡೆಗಳು, ಬಾಗಿಲುಗಳು ಮತ್ತು ಕಮಾನುಗಳ ಮೇಲೆ ಭಗವಾನ್ ಶಿವ, ಭಗವಾನ್ ಗಣೇಶ ಮತ್ತು ಇತರ ಹಿಂದೂ ಸಂಕೇತಗಳ ಕೆತ್ತನೆಗಳು ಕಂಡುಬರುತ್ತವೆ. ಇಲ್ಲಿ ಹೂವಿನ ಆಕೃತಿಗಳು, ಚೈತ್ಯ ಕಮಾನುಗಳು, ಕೀರ್ತಿಮುಖ, ಮುತ್ತಿನ ಮಾಲೆಗಳು ಮತ್ತು ಸರಪಳಿ-ಗಂಟೆಯಂತಹ ಅನೇಕ ಕೆತ್ತನೆಗಳೂ ಇವೆ. ಇಂತಹ ಅಲಂಕಾರಗಳನ್ನು ಸಾಮಾನ್ಯವಾಗಿ ಇಸ್ಲಾಮಿಕ್ ವಾಸ್ತುಶಿಲ್ಪದ ಭಾಗವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಕೆತ್ತನೆ ಮತ್ತು ರಚನೆಯು ಪಾಲ-ಸೇನ ಕಾಲದ್ದು ಎಂದು ನಂಬಲಾಗಿದೆ. ಇಂದಿಗೂ ಈ ಸಂಕೀರ್ಣದಲ್ಲಿ ಮತ್ತು ಸುತ್ತ-ಮುತ್ತಲಿನ ಗೋಡೆಗಳಲ್ಲಿ ಒಡೆದ ಶಿವಲಿಂಗಗಳು ಮತ್ತು ಉರುಳಿಸಿದ ಹಿಂದೂ ದೇವತೆಗಳ ಮೂರ್ತಿಗಳು ಕಂಡುಬರುತ್ತವೆ.

ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ಹಿರಿಯ ವಕೀಲ ಪೂ. ಹರಿ ಶಂಕರ್ ಜೈನ್

ಹಿರಿಯ ವಕೀಲ ಪೂ. ಹರಿ ಶಂಕರ್ ಜೈನ್ ಅವರು ಈ ಸ್ಥಳದಲ್ಲಿ ಪೂಜೆ ಮಾಡುವ ಹಕ್ಕನ್ನು ಮರಳಿ ಪಡೆಯಲು ಹಿಂದೂಗಳಿಗೆ ಕರೆ ನೀಡಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸುಲ್ತಾನ್ ಸಿಕಂದರ್ ಶಾ ಆಡಳಿತದ ಅವಧಿಯಲ್ಲಿ ನಡೆದ ವಿನಾಶದ ವಿಷಯವನ್ನೂ ಎತ್ತಿ ತೋರಿಸಿದ್ದಾರೆ.