ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಯಾವುದೇ ಪಾತ್ರವಿರಲಿಲ್ಲ !

  • ಅಮೆರಿಕದ ತನಿಖಾ ಸಂಸ್ಥೆಗಳಿಂದ ಕೆನಡಾದ ಸುಳ್ಳು ಆರೋಪ ಬಹಿರಂಗ

  • ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಕೈವಾಡ

ಖಲಿಸ್ತಾನಿ ಭಯೋತ್ಪಾದಕರು

ವಾಷಿಂಗ್ಟನ (ಅಮೆರಿಕ) – ಅಮೆರಿಕದ ತನಿಖಾ ಸಂಸ್ಥೆಗಳು ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿವೆ. ಅಮೆರಿಕದ ನ್ಯಾಯಾಂಗ ಇಲಾಖೆಯು ‘ಭಾರತದ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿತ್ತು’ ಎಂದು ಹೇಳಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ. ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಮೇಲೆ ಆರೋಪ ಮಾಡಿತ್ತು ಮತ್ತು ಇದರಿಂದ ಭಾರತದೊಂದಿಗಿನ ಸಂಬಂಧ ತೀವ್ರ ಹದಗೆಟ್ಟಿದ್ದವು. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿರುವುದನ್ನು ತೋರಿಸುವಂತಹ ಗುಪ್ತಚರ ಮಾಹಿತಿ ಕೆನಡಾ ತನಿಖಾ ಸಂಸ್ಥೆಗಳ ಬಳಿಯಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನಲ್ಲಿ ಹೇಳಿದ್ದರು. ಇದಕ್ಕೆ ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿತ್ತು, ಈ ಆರೋಪಗಳು ಆಧಾರರಹಿತ ಎಂದು ಹೇಳುತ್ತಾ ಬಲವಾದ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿತ್ತು.

ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ದೋಷಾರೋಪ ಪಟ್ಟಿಯ ಪ್ರಕಾರ, ಮೂರು ವರ್ಷಗಳ ಹಿಂದೆ ಜೂನ್ ೧೮ ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಗುರುದ್ವಾರವೊಂದರ ಹೊರಗೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ದೋಷಾರೋಪ ಪಟ್ಟಿಯಲ್ಲಿ ಭಾರತದಲ್ಲಿ ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್, ರೋಹಿತ್ ಗೋದಾರಾ ಮತ್ತು ಜಗ್ಗು ಭಗವಾನಪುರಿಯಾ ಅವರ ಹೆಸರುಗಳಿವೆ. ಈ ಗ್ಯಾಂಗ್‌ ಗಳು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಕೆನಡಾ, ಯುರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿಯೂ ಸುಪಾರಿ ಕೊಲೆ ಮಾಡುವುದು, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಸುಲಿಗೆ ಮತ್ತು ಆರ್ಥಿಕ ವಂಚನೆಯಂತಹ ಅಪರಾಧಗಳನ್ನು ಮಾಡುತ್ತಿವೆ.

ಅಮೆರಿಕದ ಜಾಗತಿಕ ಕಾರ್ಯಾಚರಣೆ

ಅಮೆರಿಕದ ಎಫ್.ಬಿ.ಐ. ತನಿಖಾ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಹಲವು ಗ್ಯಾಂಗ್‌ ಗಳ ವಿರುದ್ಧ ಜುಲೈ ೭, ೨೦೨೬ ರಂದು ಅಭಿಯಾನ ನಡೆಸಿ ಸುಮಾರು ೨೪ ಜನರನ್ನು ಬಂಧಿಸಿದೆ. ತನಿಖಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ೧೦ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅಮೆರಿಕದಲ್ಲಿ ೭, ಭಾರತದಲ್ಲಿ ಇಬ್ಬರು ಮತ್ತು ಯುರೋಪ್‌ ನಲ್ಲಿ ಒಬ್ಬ ಆರೋಪಿ ಅಡಗಿಕೊಂಡಿರುವ ಮಾಹಿತಿ ಸಂಸ್ಥೆಗಳ ಬಳಿಯಿದೆ. ಬಂಧಿತರಲ್ಲಿ ಅಮೆರಿಕದ ೧೩ ಆರೋಪಿಗಳು ಸೇರಿದ್ದು, ಕ್ಯಾಲಿಫೋರ್ನಿಯಾದ ೧೧, ಇಂಡಿಯಾನಾದ ಒಬ್ಬ ಮತ್ತು ಜಾರ್ಜಿಯಾದ ಒಬ್ಬ ಆರೋಪಿ ಸೇರಿದ್ದಾನೆ. ಕೆನಡಾದಲ್ಲಿ ಮೂವರು ಮತ್ತು ಸ್ಪೇನ್‌ ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳು ೧,೦೦೦ ಕಿಲೋ ಕೊಕೇನ್, ೧ ಕಿಲೋ ಹೆರಾಯಿನ್, ೪೦,೦೦೦ ಅಮೆರಿಕನ್ ಡಾಲರ್ ಮತ್ತು ೧೨ ಅಕ್ರಮ ಶಸ್ತ್ರಾಸ್ತ್ರಗಳನ್ನು ಕೂಡ ವಶಪಡಿಸಿಕೊಂಡಿವೆ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಭಾರತದ ಮೇಲೆ ಸತತವಾಗಿ ಆರೋಪ ಮಾಡುತ್ತಿದ್ದ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸುವರೇ?