ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK): ಪ್ರತಿಭಟನೆ ಮೇಲೆ ಪಾಕ್ ಸೇನೆಯಿಂದ ಗುಂಡಿನ ದಾಳಿ – ಒಬ್ಬನ ಸಾವು

ರಾವಲಾಕೋಟ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) – ಇಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ನಾಗರಿಕರ ಮೇಲೆ ಪಾಕ್ ಸೇನೆಯು ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾವಲಾಕೋಟ್ ದಲ್ಲಿ 40,000 ಕ್ಕೂ ಹೆಚ್ಚು ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದರು. ‘ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಡುಡಿಯಾಲ್‌ನ ಎ.ಎಮ್.ಬಿ. ಪ್ರದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಯಾವುದೇ ಮುನ್ಸೂಚನೆ ನೀಡದೆ ಗುಂಡಿನ ದಾಳಿ ನಡೆಸಿವೆ ಮತ್ತು ಈ ಹಠಾತ್ ದಾಳಿಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಸಂಘಟನೆ ಆರೋಪಿಸಿದೆ.

ವಿದೇಶಗಳಲ್ಲೂ ಪ್ರತಿಭಟನೆ

ಆಕ್ಲೆಂಡ್ (ನ್ಯೂಜಿಲೆಂಡ್) ನಲ್ಲಿ ಪ್ರತಿಭಟನೆ

‘ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ ಕರೆ ನೀಡಿದ ಬಳಿಕ, ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಸಮುದಾಯದವರು ಪ್ರತಿಭಟನೆ ನಡೆಸಿದರು. ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಶೌಕತ್ ನವಾಜ್ ಮೀರ್ ಅವರ ಬಂಧನವನ್ನು ಪ್ರತಿಭಟನಾಕಾರರು ಖಂಡಿಸಿದರು ಮತ್ತು ಅವರ ಬಿಡುಗಡೆಗೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ‘ಲಾಂಗ್ ಲಿವ್ ಕಾಶ್ಮೀರ್’ (ಕಾಶ್ಮೀರ ಚಿರಾಯುವಾಗಲಿ) ಮತ್ತು ‘ಲಾಂಗ್ ಲಿವ್ ದ ಪೀಪಲ್’ (ಜನತೆ ಚಿರಾಯುವಾಗಲಿ) ಎಂಬ ಘೋಷಣೆಗಳನ್ನು ಕೂಗಲಾಯಿತು.

ಲಂಡನ್, ಯುಕೆಯಲ್ಲೂ ಪ್ರತಿಭಟನೆ

ಲಂಡನ್‌ನಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬೆಂಬಲಕ್ಕೆ ಧ್ವನಿ ಎತ್ತಿದ್ದಾರೆ ಮತ್ತು ಮುಗ್ಧ ನಾಗರಿಕರ ಮೇಲಿನ ಹಿಂಸಾಚಾರವನ್ನು ಖಂಡಿಸಿದ್ದಾರೆ ಎಂದು ‘ಜಮ್ಮು-ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ ತಿಳಿಸಿದೆ. ವಿದೇಶದಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳು ನಮ್ಮ ಜನರ ಬೆನ್ನಿಗೆ ದೃಢವಾಗಿ ನಿಂತಿದ್ದಾರೆ ಮತ್ತು ಅವರು ನಮಗೆ ಬೆಂಬಲ ನೀಡುತ್ತಲೇ ಇರುತ್ತಾರೆ ಎಂದೂ ಕಮಿಟಿ ಹೇಳಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ‘ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್’ ಪಕ್ಷದ ಬ್ರಿಟನ್ ಘಟಕವೂ ಈ ಪ್ರತಿಭಟನೆಗೆ ಬೆಂಬಲ ನೀಡಿದೆ. ಪ್ರತಿಭಟನೆಯ ವೇಳೆ ಅನೇಕರು ಸಾವನ್ನಪ್ಪಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಹೇಳಿದೆ.