140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಿಂದಲೂ ನಮಗೆ ಅಪಾರ ಬೆಂಬಲ ! : Benjamin Netanyahu

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಂದ ಅಮೆರಿಕಾಗೆ ಪ್ರತ್ಯುತ್ತರ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್.

ಜೆರುಸಲೆಮ್ (ಇಸ್ರೇಲ್) – 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಿಂದಲೂ ನಮಗೆ ಭಾರಿ ಬೆಂಬಲ ಸಿಗುತ್ತಿದೆ ಎಂಬ ಮಾತುಗಳೊಂದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕಾಗೆ ಪ್ರತ್ಯುತ್ತರ ನೀಡಿದ್ದಾರೆ. ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು ಅವರು ಈ ವಿಷಯವನ್ನು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, “ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಸ್ರೇಲ್ ಮೇಲೆ ಸಹಾನುಭೂತಿ ಇದೆ. ನಾನೇನಾದರೂ ಇಸ್ರೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದಿದ್ದರೆ, ಇಸ್ರೇಲ್‌ನ ಏಕೈಕ ಶಕ್ತಿಶಾಲಿ ಮಿತ್ರ ರಾಷ್ಟ್ರವಾದ (ಅಮೆರಿಕಾದ) ವಿರುದ್ಧ ಎಂದಿಗೂ ಟೀಕೆ ಮಾಡುತ್ತಿರಲಿಲ್ಲ,” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ನೆತನ್ಯಾಹು ಅವರು ಮೇಲಿನಂತೆ ಉತ್ತರಿಸಿದ್ದಾರೆ.

ನೆತನ್ಯಾಹು ಅವರು, “ನಮಗೆ ಇನ್ನೂ ಅನೇಕ ಮಿತ್ರರಿದ್ದಾರೆ. ಭಾರತದಂತಹ 140 ಕೋಟಿ ಜನಸಂಖ್ಯೆ ಉಳ್ಳ ದೇಶ ನಮ್ಮೊಂದಿಗಿದೆ. ಭಾರತದಿಂದ ನಮಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಭಾರತದ ನಾಗರಿಕರಿಂದ ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ,” ಎಂದು ಹೇಳಿದ್ದಾರೆ.