ವಿದೇಶಿ ಹೆಸರು ಇದ್ದರೂ ಹಿಂದೂ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗುವುದಿಲ್ಲ’ : Hindu Faith Statement

ಅಮೆರಿಕದ ಹಿಂದೂ ಮಹಿಳೆ ಲಾರಾ ಫ್ರಾನ್ಸಿಸ್ ಅಯ್ಯಂಗಾರ ಅವರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿರಾಕರಣೆ; ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು

ಚೆನ್ನೈ (ತಮಿಳುನಾಡು) – ಯಾವುದೇ ವ್ಯಕ್ತಿಯ ರಾಷ್ಟ್ರೀಯತೆ ಅಥವಾ ವಿದೇಶಿ ಹೆಸರು ಅವರ ಹಿಂದೂ ಶ್ರದ್ಧೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಿಂದೂ ಧರ್ಮವು ಅತ್ಯಂತ ಉದಾರವಾಗಿದೆ ಮತ್ತು ಅದನ್ನು ಸ್ವೀಕರಿಸಲು ಯಾವುದೇ ಔಪಚಾರಿಕ ಸಮಾರಂಭದ ಅಥವಾ ಮತಾಂತರದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಒಂದು ಮೊಕದ್ದಮೆಯಲ್ಲಿ ತೀರ್ಪು ನೀಡಿದೆ. ಹಿಂದೂ ಧರ್ಮವನ್ನು ಸ್ವೀಕರಿಸಿದ್ದ ಅಮೆರಿಕದ ಮಹಿಳೆ ಲಾರಾ ಫ್ರಾನ್ಸಿಸ್ ಅಯ್ಯಂಗಾರ ಅವರಿಗೆ ತಮಿಳುನಾಡಿನ ತಂಜಾವೂರಿನ ಶ್ರೀ ಅರುಳ್ಮಿಗು ಅಭಿಷ್ಟ ವರದರಾಜಪೆರುಮಾಳ್ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆಯಲಾಗಿತ್ತು; ಮಹಿಳೆಯ ವಿದೇಶಿ ಹೆಸರು ಮತ್ತು ಅಮೆರಿಕದ ಪೌರತ್ವದ ಕಾರಣದಿಂದ ಆಕೆಯನ್ನು ಕ್ರಿಶ್ಚಿಯನ್ ಎಂದು ಸರಕಾರ ಪರಿಗಣಿಸಿತ್ತು.

​ನ್ಯಾಯಾಲಯವು ತನ್ನ ಆದೇಶದಲ್ಲಿ ಕೇವಲ ಆ ಮಹಿಳೆಯ ಹಕ್ಕುಗಳನ್ನು ಮರುಸ್ಥಾಪಿಸಿದ್ದು ಮಾತ್ರವಲ್ಲದೆ, ಹಿಂದೂ ಧರ್ಮದ ವ್ಯಾಪಕತೆ, ಉದಾರತೆ ಮತ್ತು ಅದರ ಐತಿಹಾಸಿಕ ಸ್ವರೂಪದ ಬಗ್ಗೆಯೂ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಲಾರಾ ಅವರು ಪೂರ್ಣ ನಿಷ್ಠೆ ಮತ್ತು ಆಚರಣೆಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ಅವರಿಗೆ ಇತರ ಹಿಂದೂ ಮಹಿಳಾ ಭಕ್ತರಂತೆಯೇ ದೇವಸ್ಥಾನದಲ್ಲಿ ಪೂಜೆ-ಅರ್ಚನೆಗಳನ್ನು ಮಾಡಲು ಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.