10 ಜನ ಅಕ್ರಮ ವಲಸಿಗರನ್ನು ಗಡಿಯೊಳಗೆ ಸೇರಿಸಿಕೊಳ್ಳಲು ಬಾಂಗ್ಲಾದೇಶದ ವಿರೋಧ

ಬಂಗಾಳ: ಬಾಂಗ್ಲಾದೇಶ ಗಡಿಯಲ್ಲಿ ಮತ್ತೆ ಉದ್ವಿಗ್ನತೆ

​ಢಾಕಾ (ಬಾಂಗ್ಲಾದೇಶ) – ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಬಾರಿ ಮೆಹರಪುರದ ನಜೀರಾಕೋನಾ ಗಡಿಯಲ್ಲಿ ಉಭಯ ದೇಶಗಳ ಭದ್ರತಾ ಪಡೆಗಳ ನಡುವೆ ಸಂಘರ್ಷ ಉಂಟಾಗಿದೆ. ಭಾರತದ ಗಡಿ ಭದ್ರತಾ ಪಡೆಯು ತನ್ನ ವ್ಯಾಪ್ತಿಯೊಳಗೆ ಕಾನೂನುಬಾಹಿರವಾಗಿ 10 ಜನರನ್ನು ಕಳುಹಿಸಲು ಯತ್ನಿಸಿದೆ ಎಂದು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (‘ಬಿಜಿಬಿ’) ಆರೋಪಿಸಿದೆ. ಭಾರತದ ಈ ಪ್ರಯತ್ನವನ್ನು ಬಿಜಿಬಿ ಮತ್ತು ಸ್ಥಳೀಯ ಜನರು ತೀವ್ರವಾಗಿ ವಿರೋಧಿಸಿ ವಿಫಲಗೊಳಿಸಿದ್ದಾರೆ.

​ನಜೀರಾಕೋನಾದ ಬಿಜಿಬಿ ನೆಲೆಯ ಕಮಾಂಡರ್ ನಾಯಕ್ ಸುಬೇದಾರ್ ಮೊಜಮ್ಮೇಲ್ ಹಕ್ ಅವರು ಈ ಬಗ್ಗೆ ಮಾತನಾಡಿ, “ನಮಗೆ ಭಾರತದ ಕಡೆಯಿಂದ ‘ಪುಶ್-ಇನ್’ (ಜನರನ್ನು ಕಾನೂನುಬಾಹಿರವಾಗಿ ಒಳಗೆ ತಳ್ಳುವ ಪ್ರಯತ್ನ) ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದರ ನಂತರ ಬಿಜಿಬಿ ಸೈನಿಕರು ಮತ್ತು ಸ್ಥಳೀಯ ಜನರು ಜಾಗೃತರಾಗಿ, ಭಾರತದಿಂದ ಜನರನ್ನು ಬಲವಂತವಾಗಿ ಒಳಗೆ ಕಳುಹಿಸುವ ಗಡಿ ಭದ್ರತಾ ಪಡೆಯ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವಿರೋಧದ ನಂತರ ಭದ್ರತಾ ಪಡೆ ಜನರನ್ನು ಗಡಿಯಿಂದ ಮರಳಿ ಭಾರತದ ವ್ಯಾಪ್ತಿಗೆ ಕರೆದೊಯ್ಯುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಜೂನ್ ತಿಂಗಳಿನಲ್ಲಿ ಮೆಹರಪುರ ಗಡಿಯಲ್ಲಿ ಬಲವಂತವಾಗಿ ಜನರನ್ನು ಕಳುಹಿಸಲು ಭದ್ರತಾ ಪಡೆಯು ನಡೆಸಿದ 6ನೇ ಪ್ರಯತ್ನ ಇದಾಗಿತ್ತು; ಆದರೆ ಬಿಜಿಬಿ ಮತ್ತು ಗಡಿಯ ಹತ್ತಿರ ವಾಸಿಸುವ ಜಾಗರೂಕ ಜನರಿಂದಾಗಿ ಈ ಎಲ್ಲಾ ಪ್ರಯತ್ನಗಳು ವಿಫಲಗೊಂಡವು,” ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ಸರಕಾರವು ಇದರ ಕಡೆಗೆ ಗಮನ ಹರಿಸಲಿ! – ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕ

​ಈ ಪ್ರಕರಣದ ಕುರಿತು ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕ ನಾಹಿತ್ ಇಸ್ಲಾಂ ಅವರು ಮಾತನಾಡಿ, “ಭಾರತದ ಗಡಿ ಭದ್ರತಾ ಪಡೆಯು ಜನರನ್ನು ಬಲವಂತವಾಗಿ ಬಾಂಗ್ಲಾದೇಶದ ಗಡಿಯೊಳಗೆ ತಳ್ಳಲು (ಪುಶ್-ಇನ್) ಪ್ರಯತ್ನಿಸುತ್ತಿದೆ. ಇದರಿಂದಾಗಿ ಗಡಿಯಲ್ಲಿ ಸಂಘರ್ಷ ಉಂಟಾಗುತ್ತಿದೆ. ತಾರಿಕ್ ರೆಹಮಾನ್ ಅವರ ಸರಕಾರವು ಈ ಗಂಭೀರ ವಿಷಯದ ಕಡೆಗೆ ಗಮನ ಹರಿಸಬೇಕು,” ಎಂದು ಆಗ್ರಹಿಸಿದರು.

ಭಾರತ-ಬಾಂಗ್ಲಾದೇಶ ನಡುವೆ ಸಭೆ ನಡೆದರೂ ಉದ್ವಿಗ್ನತೆ ಕಾಯಂ

​ಭಾರತ ಮತ್ತು ಬಾಂಗ್ಲಾದೇಶ ಗಡಿ ಭದ್ರತೆ ಹಾಗೂ ನಿರ್ವಹಣೆಯ ಕುರಿತು ದೆಹಲಿಯಲ್ಲಿ ಜೂನ್ 8 ರಿಂದ 11 ರ ಅವಧಿಯಲ್ಲಿ ಬಿಜಿಬಿ ಮತ್ತು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರ ಸಭೆಯಲ್ಲಿ ಕಾನೂನುಬಾಹಿರ ವಲಸಿಗರ ಮತ್ತು ಗಡಿ ನಿಯಂತ್ರಣದ ಅಪರಾಧಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗಿತ್ತು. ಉಭಯ ಕಡೆಯವರು ಈ ಸಭೆಯು ಯಶಸ್ವಿಯಾಗಿದೆ ಎಂದು ಹೇಳಿದ್ದರೂ, ಪ್ರತ್ಯಕ್ಷ ಗಡಿಯಲ್ಲಿನ ಉದ್ವಿಗ್ನತೆ ಮಾತ್ರ ಇನ್ನು ಮುಂದುವರಿದಿದೆ.

ಸಂಪಾದಕೀಯ ನಿಲುವು

ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ನೋಡಿದರೆ ಬಾಂಗ್ಲಾದೇಶ ಸರಕಾರವು ತನ್ನ ಅಕ್ರಮ ವಲಸಿಗರನ್ನು ಮರಳಿ ಕರೆಸಿಕೊಳ್ಳುವ ಸಾಧ್ಯತೆಯಿಲ್ಲ. ಆದ್ದರಿಂದ ಭಾರತವೂ ಕೂಡ ಈಗ ಈ ವಲಸಿಗರನ್ನು ಓಡಿಸಲು ಇತರ ಪರ್ಯಾಯ ಮಾರ್ಗ ನೋಡುವುದು ಅಗತ್ಯವಾಗಿದೆ !